ಹೊಸಪೇಟೆ (ವಿಜಯನಗರ): ‘ಬಡವರನ್ನು ಸಾವ್ಕಾರರನ್ನಾಗಿ ಮಾಡಲು ನಾವಿಲ್ಲಿ ಬಂದಿದ್ದೇವೆಯೋ ಹೊರತು ಸಾವ್ಕಾರರನ್ನು ಸಾವ್ಕಾರರನ್ನಾಗಿ ಮಾಡಲು ಅಲ್ಲ. ಸರ್ಕಾರಿ ಜಾಗಕ್ಕೆ ₹ 200 ಕೋಟಿ ಕೊಡಲಿ, ಸಕ್ಕರೆ ಕಾರ್ಖಾನೆ ಮಾಡಲು ಅದನ್ನು ಬಿಟ್ಟುಕೊಡುತ್ತೇವೆ...’ ಎಂಬ ಕಟ್ಟುನಿಟ್ಟಿನ ಮಾತನ್ನು ಶಾಸಕ ಎಚ್.ಆರ್.ಗವಿಯಪ್ಪ ಆಡಿದ್ದಾರೆ.
ಶುಕ್ರವಾರ ಇಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಕೇವಲ ₹ 14 ಕೋಟಿ ಪಡೆದುಕೊಂಡು 84 ಎಕರೆ ಸರ್ಕಾರಿ ಜಮೀನನ್ನು ಸಕ್ಕರೆ ಕಾರ್ಖಾನೆಗೆ ನೀಡಲು ಸಾಧ್ಯವಿಲ್ಲ. ದಾವಣಗೆರೆಯ ಸಂಸದ ಜಿ.ಎಂ.ಸಿದ್ದೇಶ್ವರ ಏನೇ ಹೇಳಿಕೊಳ್ಳಲಿ, ನಾನಂತೂ ಅದಕ್ಕೆ ಅವಕಾಶ ಕೊಡುವುದಿಲ್ಲ. ಈಗಾಗಲೇ ಜಿಲ್ಲಾಡಳಿತ ಬದಲಿ ನಿವೇಶನ ಗುರುತಿಸುವ ಕೆಲಸ ಆರಂಭಿಸಿದ್ದು, ಬದಲಿ ಸ್ಥಳ ಶೀಘ್ರ ಅಂತಿಮಗೊಳ್ಳುವ ನಿರೀಕ್ಷೆ ಇದೆ’ ಎಂದರು.
‘ಹೊಸಪೇಟೆ ಸಮೀಪದಲ್ಲೇ ಸಕ್ಕರೆ ಕಾರ್ಖಾನೆ ಸ್ಥಾಪನೆಯಾಗಬೇಕು. ಇಲ್ಲಿ ಸುಮಾರು 7 ಸಾವಿರ ಮಂದಿ ಎತ್ತಿನ ಬಂಡಿ ನಂಬಿ ಜೀವನ ಸಾಗಿಸುತ್ತಿದ್ದು, ಸಕ್ಕರೆ ಕಾರ್ಖಾನೆ ಸ್ಥಾಪನೆಗೊಂಡರೆ ಅವರ ಜೀವನ ಹಸನಾಗುತ್ತದೆ. ಸರ್ಕಾರಿ ಜಮೀನನ್ನು ಬಡವರ ನಿವೇಶನಕ್ಕೆ ಮೀಸಲಿಡಬೇಕೆಂದು ಸ್ವತಃ ರೈತರೇ ಇದೀಗ ಮನವಿ ಕೊಡಲು ಆರಂಭಿಸಿದ್ದಾರೆ. ನಾನು ಸಹ ಒಂದೆರಡು ದಿನಗಳಲ್ಲಿ ಜಿಲ್ಲಾಡಳಿತಕ್ಕೆ ನನ್ನ ಸ್ಪಷ್ಟ ನಿಲುವನ್ನು ಲಿಖಿತವಾಗಿ ತಿಳಿಸುವೆ’ ಎಂದು ಗವಿಯಪ್ಪ ಹೇಳಿದರು.
‘ಈ ಹಿಂದೆ ನಾನು ಶಾಸಕನಾಗಿದ್ದಾಗ 20 ಎಕರೆ ನಿವೇಶನದಲ್ಲಿ 900 ನಿವೇಶನ ನೀಡಿದ್ದೆ. ಇದೀಗ ಹಂತಹಂತವಾಗಿ ಮನೆ ನಿವೇಶನ ನೀಡುವ ಗುರಿ ಇದೆ. 80 ಎಕರೆ ಸ್ಥಳದಲ್ಲಿ ಗ್ರೌಂಡ್ ಪ್ಲಸ್ ವನ್ ಮಾದರಿಯಲ್ಲಿ 8ರಿಂದ 10 ಸಾವಿರ ಮನೆಗಳನ್ನು ಬಡವರಿಗೆ ನಿರ್ಮಿಸಿಕೊಡುವುದು ಸಾಧ್ಯವಿದೆ‘ ಎಂದರು.
ಬರ ತಾಲ್ಲೂಕು: ಹೊಸಪೇಟೆ ತಾಲ್ಲೂಕನ್ನು ಬರಪೀಡಿತ ತಾಲ್ಲೂಕು ಪಟ್ಟಿಯಲ್ಲಿ ಈ ಬಾರಿ ಸೇರಿಸಲು ಪ್ರಯತ್ನಿಸಲಾಗುವುದು. ತಾಲ್ಲೂಕಿನ 75 ಸಾವಿರ ಎಕರೆ ಪ್ರದೇಶ ಮಳೆ ನೀರನ್ನೇ ಆಶ್ರಯಿಸಿದೆ. ಮಳೆ ಕೊರತೆಯಿಂದಾಗಿ ಇಲ್ಲಿ ತೀವ್ರ ಬರಗಾಲ ಸ್ಥಿತಿ ಇದೆ. ನದಿಯಲ್ಲಿ ನೀರು ಸಾಕಷ್ಟು ಹರಿಯದ ಕಾರಣ ಏತ ನೀರಾವರಿ ಮೂಲಕ ಕೆರೆಗಳಿಗೆ ನೀರು ಹರಿಸುವುದು ಸಾಧ್ಯವಾಗಿಲ್ಲ ಎಂದರು.
ನವೆಂಬರ್ 3,4,5ರಂದೇ ಹಂಪಿ ಉತ್ಸವ ನಡೆಸಲು ಸರ್ಕಾರವನ್ನು ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಕೇಳಿಕೊಂಡಿದ್ದೇವೆ. ಹಲವು ಗ್ಯಾರಂಟಿಗಳ ಜಾರಿಯಿಂದಾಗಿ ಈ ಬಾರಿ ಉತ್ಸವಕ್ಕೆ ನೀಡುವ ಅನುದಾನ ಕಡಿತಗೊಳ್ಳುವ ಸಾಧ್ಯತೆ ಇದೆ. ಆದರೆ ಕಳೆದ ವರ್ಷದಷ್ಟಾದರೂ ಅನುದಾನ ನೀಡಲು ಮುಖ್ಯಮಂತ್ರಿ ಅವರಿಗೆ ನಾನು ಮತ್ತು ಇತರ ಇಬ್ಬರು ಶಾಸಕರಾದ ಶ್ರೀನಿವಾಸ್ ಮತ್ತು ಲತಾ ಅವರು ಮನವಿ ಮಾಡಲಿದ್ದೇವೆ ಎಂದು ಶಾಸಕ ಗವಿಯಪ್ಪ ಹೇಳಿದರು.
ಈ ಬಾರಿ ಸಾಂಸ್ಕೃತಿಕ ಕಾರ್ಯಕ್ರಮಗಳು ಮಾತ್ರ ಇರಲಿವೆ, ಫಿಲಂ, ಫ್ಯಾಷನ್ ಶೋಗಳಂತಹ ಪ್ರದರ್ಶನಗಳು ಇರುವುದಿಲ್ಲ ಎಂಬ ಸುಳಿವನ್ನು ಅವರು ನೀಡಿದರು.
ಸದ್ಯದ ಸ್ಥಿತಿಯಲ್ಲಿ ತುಂಗಭದ್ರಾ ಜಲಾಶಯದಿಂದ ಹೂಳು ತೆಗೆಯಲು ಸಾಧ್ಯವೇ ಇಲ್ಲ. ಅಣೆಕಟ್ಟೆಯ ಸಾಮರ್ಥ್ಯ ಹೆಚ್ಚಿಸಿ, ಒಂದು ಮೀಟರ್‌ನಷ್ಟು ಎತ್ತರಿಸಿದರೆ 35 ಟಿಎಂಸಿ ಅಡಿಯಷ್ಟು ಹೆಚ್ಚುವರಿ ನೀರು ಸಂಗ್ರಹ ಸಾಧ್ಯ. ಹೂಳು ತುಂಬಿ ನಷ್ಟವಾಗುವ ನೀರಿನ ಪಾಲನ್ನು ಈ ರೀತಿ ತುಂಬಿಕೊಳ್ಳಬಹುದು. ಈ ಬಗ್ಗೆ ತಜ್ಞರೊಂದಿಗೆ ಚರ್ಚಿಸಿ, ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಡ ಹೇರಲಾಗುವುದು ಎಂದು ಶಾಸಕರು ಹೇಳಿದರು.
ಜಲಾಶಯದಲ್ಲಿ ಕುಡಿಯುವ ನೀರಿನ ಸಲುವಾಗಿ 5–6 ಟಿಎಂಸಿ ಅಡಿ ನೀರು ದಾಸ್ತಾನು ಇಟ್ಟುಕೊಳ್ಳಬೇಕಾಗುತ್ತದೆ. ಈ ಬಾರಿ ಉದ್ಯಮಗಳಿಗಂತೂ ನೀರು ಕೊಡಲು ಸಾಧ್ಯವಾಗದೆ ಹೋಗಬಹುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.