ADVERTISEMENT

ಎನ್‌ಎಸ್‌ಯುಐ ಕಾರ್ಯಕರ್ತರ ಬಿಡುಗಡೆಗೆ ಒತ್ತಾಯಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2022, 9:34 IST
Last Updated 7 ಜೂನ್ 2022, 9:34 IST

ಹೊಸಪೇಟೆ (ವಿಜಯನಗರ): ಶಿಕ್ಷಣ ಸಚಿವರ ಮನೆ ಎದುರು ಸಾಂಕೇತಿಕವಾಗಿ ಪ್ರತಿಭಟನೆ ನಡೆಸುತ್ತಿದ್ದ ಯುವ ಕಾಂಗ್ರೆಸ್‌ ಕಾರ್ಯಕರ್ತರನ್ನು ಬಂಧಿಸಿರುವುದನ್ನು ವಿರೋಧಿಸಿ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (ಎನ್‌ಎಸ್‌ಯುಐ) ಕಾರ್ಯಕರ್ತರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಅಂಬೇಡ್ಕರ್ ವೃತ್ತದಿಂದ ತಹಶೀಲ್ದಾರ್ ಕಚೇರಿವರೆಗೆ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತ ರ್‍ಯಾಲಿ ನಡೆಸಿದರು. ನಂತರ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಶಿರಸ್ತೇದಾರ್ ಶ್ರೀಧರ್ ಅವರಿಗೆ ಸಲ್ಲಿಸಿದರು.

ಪಠ್ಯಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸುತ್ತಿದ್ದ ಎನ್‌ಎಸ್‌ಯುಐ ರಾಜ್ಯ ಘಟಕದ ಅಧ್ಯಕ್ಷ ಕೀರ್ತಿ ಗಣೇಶ್ ಹಾಗೂ 15 ಜನ ಕಾರ್ಯಕರ್ತರನ್ನು ಮನೆಗೆ ಬೆಂಕಿ ಇಡಲು ಬಂದಿದ್ದಾರೆ ಎಂದು ಆರೋಪಿಸಿ ಬಂಧಿಸಿದ್ದಾರೆ. ಸರ್ಕಾರದ ಶೈಕ್ಷಣಿಕ ವೈಫಲ್ಯ ಪ್ರಶ್ನಿಸಲು ಮುಂದಾದ ಸಂಘಟನೆಯ ಹಕ್ಕು ಕಸಿಯುವ ಹುನ್ನಾರ ಇದಾಗಿದೆ. ಈ ಕೂಡಲೇ ಪ್ರತಿಭಟನಾಕಾರರನ್ನು ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಒಕ್ಕೂಟದ ಬಳ್ಳಾರಿ ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಕೆ.ಆರ್‌.ಹುಸೇನಪ್ಪ, ತಾಲ್ಲೂಕು ಅಧ್ಯಕ್ಷ ಆಲಂ ಬಾಷಾ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವಿನಾಯಕ ಶೆಟ್ಟರ್, ಮೊಹಮ್ಮದ್‌ ಇಮಾಮ್‌ ನಿಯಾಜಿ, ಗುಜ್ಜಲ ನಾಗರಾಜ, ನಿಂಬಗಲ್ ರಾಮಕೃಷ್ಣ, ರವಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.