ADVERTISEMENT

ಜನೋಪಯೋಗಿ ಯೋಜನೆ ಜಾರಿಗೆ ನಿರ್ಲಕ್ಷ್ಯವೇಕೆ? ಅಧಿಕಾರಿಗಳಿಗೆ ದೇವೇಂದ್ರಪ್ಪ ತಾಕೀತು

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2022, 10:11 IST
Last Updated 22 ಆಗಸ್ಟ್ 2022, 10:11 IST
   

ಹೊಸಪೇಟೆ (ವಿಜಯನಗರ): ‘ಕೇಂದ್ರ ಸರ್ಕಾರ ಅನೇಕ ಜನೋಪಯೋಗಿ ಯೋಜನೆಗಳಿಗೆ ನೂರಾರು ಕೋಟಿ ರೂಪಾಯಿ ಬಿಡುಗಡೆಗೊಳಿಸಿದೆ. ಸಾಕಷ್ಟು ಅನುದಾನವಿದ್ದರೂ ಅವುಗಳ ಸಮರ್ಪಕ ಜಾರಿಗೆ ನಿರ್ಲಕ್ಷ್ಯವೇಕೇ? ಅಧಿಕಾರಿಗಳು ಈ ಧೋರಣೆ ಬದಲಿಸಿಕೊಳ್ಳಬೇಕು’ ಎಂದು ಸಂಸದ ವೈ.ದೇವೇಂದ್ರಪ್ಪ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಇಲ್ಲಿ ಸೋಮವಾರ ಏರ್ಪಡಿಸಿದ್ದ ಜಿಲ್ಲಾ ಅಭಿವೃದ್ಧಿ ಸಹಕಾರ ಮತ್ತು ಮೇಲ್ವಿಚಾರಣೆ ಸಮಿತಿ (‘ದಿಶಾ’) ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಿ ಅಧಿಕಾರಿಗಳ ವಿರುದ್ಧ ಚಾಟಿ ಬೀಸಿದರು.

ಜಲಜೀವನ್‌ ಮಿಷನ್‌ ದೊಡ್ಡ ಯೋಜನೆ. ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಒಬ್ಬ ಎಂಜಿನಿಯರ್‌ ಕೂಡ ಭೇಟಿ ಕೊಡುತ್ತಿಲ್ಲ. ಒಂದುವೇಳೆ ಕಾಮಗಾರಿ ಕಳಪೆಯಾದರೆ ಎಲ್ಲರನ್ನೂ ಕಪ್ಪು ಪಟ್ಟಿಗೆ ಸೇರಿಸಲಾಗುವುದು. ಇದೊಂದು ಉತ್ತಮ ಯೋಜನೆ, ಹಾಳು ಮಾಡಬೇಡಿ ಎಂದರು.

ADVERTISEMENT

ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆ ಅನುಷ್ಠಾನಕ್ಕೆ ವಿಳಂಬವೇಕೇ ಮಾಡುತ್ತಿದ್ದೀರಿ. 13 ತಿಂಗಳಾದರೂ ಜಿಲ್ಲೆಯಲ್ಲಿ ಕಾಮಗಾರಿಗಳು ಪೂರ್ಣಗೊಂಡಿಲ್ಲ. ರೈತರು, ಸಾರ್ವಜನಿಕರ ಅನುಕೂಲಕ್ಕೆ ಸರ್ಕಾರ ಈ ಯೋಜನೆ ಜಾರಿಗೆ ತಂದಿದೆ. ಆದರೆ, ಅದರ ಅನುಷ್ಠಾನಕ್ಕೆ ತಡವೇಕೇ ಮಾಡುತ್ತಿದ್ದೀರಿ. ವಸತಿ ಯೋಜನೆಯೂ ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿಲ್ಲ. ಫಲಾನುಭವಿಗಳಿಗೆ ಸಕಾಲಕ್ಕೆ ಮನೆ ನಿರ್ಮಿಸಿಕೊಡಬೇಕು. ನೀವು ಅಧಿಕಾರಿವರ್ಗ ಉತ್ತಮ ಕೆಲಸ ಮಾಡಿದರೆ ಸರ್ಕಾರ, ಜನಪ್ರತಿನಿಧಿಗಳು ಹಾಗೂ ನಿಮಗೆ ಉತ್ತಮ ಹೆಸರು ಬರುತ್ತದೆ. ಆದರೆ, ಯಾರೂ ಹೇಳುವವರು, ಕೇಳುವವರಿಲ್ಲ ಎಂಬಂತೆ ವರ್ತಿಸುತ್ತಿದ್ದೀರಿ. ಈ ಧೋರಣೆ ಬದಲಿಸಿಕೊಳ್ಳಬೇಕು ಎಂದು ಸೂಚಿಸಿದರು.

ಜಿಲ್ಲೆಯಲ್ಲಿ ಕೆ.ಡಿ.ಪಿ. ಸಭೆ ನಡೆಯುತ್ತಿಲ್ಲ. ಯಾಕಂತ ಎಲ್ಲರಿಗೂ ಗೊತ್ತಿದೆ. ಇನ್ಮುಂದೆ ಮೂರು ತಿಂಗಳ ಬದಲು ಒಂದೂವರೆ ತಿಂಗಳಿಗೆ ‘ದಿಶಾ’ ಸಭೆ ನಡೆಸುತ್ತೇನೆ. ಎಲ್ಲರೂ ಸಿದ್ಧತೆಯೊಂದಿಗೆ ಸಭೆಗೆ ಬರಬೇಕು. ಯಾರೂ ಕೂಡ ಗೈರಾಗಬಾರದು. ನೀವು ಕೆಲಸ ಮಾಡದಿದ್ದರೆ ಮತದಾರರು ನಮ್ಮನ್ನು ಪ್ರಶ್ನಿಸುತ್ತಾರೆ. ನಾವೇನೂ ಜನರಿಗೆ ಉತ್ತರ ಕೊಡಬೇಕು ಎಂದು ಕೇಳಿದರು.

ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ಪಿಡಬ್ಲ್ಯೂಡಿ ಇ.ಇ.ಗೆ ನೋಟಿಸ್‌:
‘ಜಿಲ್ಲಾಮಟ್ಟದ ಇಂದಿನ ಸಭೆಗೆ ಗೈರು ಹಾಜರಾಗಿರುವ ಲೋಕೋಪಯೋಗಿ ಇಲಾಖೆಯ (ಪಿಡಬ್ಲ್ಯೂಡಿ) ಕಾರ್ಯನಿರ್ವಾಹಕ ಎಂಜಿನಿಯರ್‌ (ಇ.ಇ.) ರವೀಂದ್ರ ಕಟ್ಟಿ ಅವರಿಗೆ ನೋಟಿಸ್‌ ಕೊಡಲಾಗುವುದು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್‌ ಭೋಯರ್‌ ನಾರಾಯಣರಾವ್‌ ತಿಳಿಸಿದರು.

‘ಪಿಡಬ್ಲ್ಯೂಡಿ ಮಹತ್ವದ ಇಲಾಖೆ. ಹಿರಿಯ ಅಧಿಕಾರಿಗೆ ಸಭೆಗೆ ಬರಲಾಗದಿದ್ದರೆ ಕಿರಿಯ ಅಧಿಕಾರಿಗಳನ್ನಾದರೂ ಕಳಿಸಬಹುದಿತ್ತು. ಇದು ಸರಿಯಾದ ನಡೆಯಲ್ಲ. ಕೂಡಲೇ ಅವರಿಗೆ ನೋಟಿಸ್‌ ಕೊಡಿ’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಕನ್ನಡ ಬಳಸಲು ಸಂಸದರ ತಾಕೀತು:
‘ಇಲಾಖಾವಾರು ಪ್ರಗತಿ ವರದಿಯನ್ನು ಕನ್ನಡದಲ್ಲಿ ಸಿದ್ಧಪಡಿಸಿ, ಅದನ್ನು ಸಭೆಯಲ್ಲಿ ಮಂಡಿಸಬೇಕು. ಒಬ್ಬರು ಕನ್ನಡ, ಮತ್ತೊಬ್ಬರು ಇಂಗ್ಲಿಷ್‌ನಲ್ಲಿ ತರುತ್ತಿರುವುದು ಸರಿಯಲ್ಲ. ಆಡಳಿತ ಭಾಷೆ ಕನ್ನಡ ಆಗಿರುವುದರಿಂದ ಕನ್ನಡದಲ್ಲೇ ವರದಿ ಸಿದ್ಧಪಡಿಸಬೇಕು’ ಎಂದು ಸಂಸದ ವೈ. ದೇವೇಂದ್ರಪ್ಪ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಅನೇಕ ಜನ ಅಧಿಕಾರಿಗಳು ಕೊಟ್ಟಿರುವ ಪ್ರಗತಿಯ ವರದಿಯಲ್ಲಿ ಅವರ ಸಹಿಯೇ ಇಲ್ಲ. ಅದನ್ನು ಅಧಿಕೃತವೆಂದು ಹೇಗೆ ಭಾವಿಸಬೇಕು. ಸಭೆಯ ದಿನವೇ ಪ್ರಗತಿ ವರದಿ ಕೊಡುವ ಚಾಳಿ ಬಿಡಬೇಕು. ಕನಿಷ್ಠ ನಾಲ್ಕೈದು ದಿನಗಳ ಮುಂಚೆಯೇ ಸಿದ್ಧಪಡಿಸಿ, ಕೊಡಬೇಕು ಎಂದೂ ಸೂಚಿಸಿದರು.

ಶಾಸಕ ರಾಮಚಂದ್ರ ಅಸಮಾಧಾನ:
‘ನಾನು ಜಗಳೂರು ಕ್ಷೇತ್ರದ ಶಾಸಕ. ನನ್ನ ಕ್ಷೇತ್ರದ ಏಳು ಪಂಚಾಯಿತಿಗಳು ವಿಜಯನಗರ ಜಿಲ್ಲೆಗೆ ಬರುತ್ತವೆ. ಆದರೆ, ಯಾವುದೇ ಇಲಾಖೆಯ ಅಧಿಕಾರಿಗಳು ಏಳು ಪಂಚಾಯಿತಿಗಳ ಅಭಿವೃದ್ಧಿ ಕಡೆಗೆ ಗಮನಹರಿಸುತ್ತಿಲ್ಲ. ಇದು ಸರಿಯಾದ ಧೋರಣೆಯಲ್ಲ’ ಎಂದು ಶಾಸಕ ಎಸ್‌.ವಿ. ರಾಮಚಂದ್ರ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಈ ಜಿಲ್ಲೆಯ 45 ಸಾವಿರ ಮತದಾರರು ನನ್ನ ಕ್ಷೇತ್ರಕ್ಕೆ ಸೇರಿದ್ದಾರೆ. ಅಲ್ಲಿ ಯಾವುದೇ ಕೆಲಸಗಳು ನಡೆಯುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಕೆ.ಆರ್‌.ಐ.ಡಿ.ಎಲ್‌ ಹಾಗೂ ನಿರ್ಮಿತಿ ಕೇಂದ್ರದಿಂದ ಯಾವುದೇ ಕಾರ್ಯಗಳು ಆಗುತ್ತಿಲ್ಲ. ಇಷ್ಟೇಕೇ ನಿರ್ಲಕ್ಷ್ಯ ತೋರುತ್ತಿದ್ದೀರಿ. ಜನರಿಗೆ ನಾನೇನೂ ಉತ್ತರ ಕೊಡಲಿ ಎಂದು ಕೇಳಿದರು.

ಸಿಇಒ ಹರ್ಷಲ್‌ ಭೋಯರ್‌ ನಾರಾಯಣರಾವ್‌ ಮಧ್ಯ ಪ್ರವೇಶಿಸಿ, ಅಧಿಕಾರಿಗಳು ಏಳು ಗ್ರಾಮ ಪಂಚಾಯಿತಿಗಳಿಗೆ ಭೇಟಿ ಕೊಡಬೇಕು. ನನಗೆ ಪ್ರಗತಿಯ ವರದಿ ಕೊಡಬೇಕು’ ಎಂದು ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.