ಹೊಸಪೇಟೆ (ವಿಜಯನಗರ): ವಿಶ್ವ ಪಾರಂಪರಿಕ ತಾಣ ಹಂಪಿಯ ವಿರೂಪಾಕ್ಷ ದೇವಸ್ಥಾನ ಆವರಣದ ಕನಕಗಿರಿ ಮಂಟಪದ ಹಳೆಯ ಬಣ್ಣವನ್ನು ತೆಗೆದುಹಾಕಿ ಸ್ವಚ್ಛಗೊಳಿಸುವ ಕೆಲಸ ಗುರುವಾರ ಸ್ಥಗಿತಗೊಂಡಿದೆ.
ಫೆ.15ರಂದು ಈ ಕೆಲಸ ಆರಂಭಗೊಂಡಿತ್ತು. 200 ವರ್ಷಗಳಿಗೂ ಹಿಂದೆ ಸುಣ್ಣ ಮತ್ತು ಮಣ್ಣನ್ನು ಬಳಸಿ ಮಾಡಿದಂತಹ ಬಣ್ಣವನ್ನು ಕೆತ್ತಿ ತೆಗೆಯುವುದರಿಂದ ಹಾಗೂ ವಾಷ್ ಮಾಡುವುದರಿಂದ ಸ್ಮಾರಕದ ಮೂಲ ಸೌಂದರ್ಯಕ್ಕೆ ಧಕ್ಕೆ ಉಂಟಾಗಲಿದೆ ಎಂದು ಇತಿಹಾಸ ತಜ್ಞರು ಆತಂಕ ವ್ಯಕ್ತಪಡಿಸಿದ್ದರು.
ಕೆಲಸ ಆರಂಭವಾದ ದಿನವೇ ‘ಪ್ರಜಾವಾಣಿ’ ಈ ಬಗ್ಗೆ ವರದಿ ಪ್ರಕಟಿಸಿತ್ತು. ಅಟ್ಟಳಿಗೆ ಕಟ್ಟಿ, ಆಗ ಒಂದು ಕಂಬವನ್ನು ಸ್ವಚ್ಛಗೊಳಿಸುವ ಕೆಲಸ ಆರಂಭವಾಗಿತ್ತು. ವರದಿ ಪ್ರಕಟವಾದ ಬಳಿಕ ಕೆಲಸವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ(ಎಎಸ್‌ಐ), ತಜ್ಞರನ್ನು ಸ್ಥಳಕ್ಕೆ ಕರೆಸಿತ್ತು. ಬುಧವಾರವೂ ರಾಸಾಯನಿಕ ತಜ್ಞರೊಬ್ಬರು ಸ್ಥಳಕ್ಕೆ ಭೇಟಿ ನೀಡಿದ್ದರು. ಬಣ್ಣವನ್ನು ಕಿತ್ತು ತೆಗೆಯುವುದು ಸೂಕ್ತವಲ್ಲ ಎಂಬ ಅವರ ಶಿಫಾರಸಿನಂತೆ ಕೆಲಸ ಸ್ಥಗಿತಗೊಂಡಿದೆ ಎಂದು ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.