ADVERTISEMENT

ಹೂವಿನಹಡಗಲಿ | ಈರುಳ್ಳಿ ಬೆಳೆ ಹಾನಿ: ಪರಿಹಾರಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2024, 14:02 IST
Last Updated 25 ಅಕ್ಟೋಬರ್ 2024, 14:02 IST
ಬೆಳೆ ಪರಿಹಾರಕ್ಕೆ ಒತ್ತಾಯಿಸಿ ಈರುಳ್ಳಿ ಬೆಳೆಗಾರರು ಹೂವಿನಹಡಗಲಿ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು
ಬೆಳೆ ಪರಿಹಾರಕ್ಕೆ ಒತ್ತಾಯಿಸಿ ಈರುಳ್ಳಿ ಬೆಳೆಗಾರರು ಹೂವಿನಹಡಗಲಿ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು   

ಹೂವಿನಹಡಗಲಿ: ‘ತಾಲ್ಲೂಕಿನಲ್ಲಿ ನಿರಂತರ ಮಳೆಯಿಂದ ಈರುಳ್ಳಿ ಬೆಳೆ ಹಾನಿಗೀಡಾಗಿದೆ. ಈರುಳ್ಳಿ ಬೆಳೆದು ಕಣ್ಣೀರಿಡುತ್ತಿರುವ ರೈತರ ಸಂಕಷ್ಟಕ್ಕೆ ಸರ್ಕಾರ ತ್ವರಿತವಾಗಿ ಸ್ಪಂದಿಸಬೇಕು’ ಎಂದು ಈರುಳ್ಳಿ ಬೆಳೆಗಾರರ ಸಂಘದ ಕಾನೂನು ಸಲಹೆಗಾರ ಕೆ.ಎಂ.ಮಲ್ಲಿಕಾರ್ಜುನ ಆಗ್ರಹಿಸಿದರು.

ತಾಲ್ಲೂಕು ಕಚೇರಿ ಎದುರು ಈರುಳ್ಳಿ ಬೆಳೆಗಾರರ ಸಂಘ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ‘ಮಾರುಕಟ್ಟೆಯಲ್ಲಿ ಈರುಳ್ಳಿಗೆ ಉತ್ತಮ ಬೆಲೆ ಇದ್ದರೂ ಬೆಳೆ ಇಲ್ಲವಾಗಿದೆ. ಸರ್ಕಾರವೇ ರೈತರ ನೆರವಿಗೆ ಬರಬೇಕು’ ಎಂದು ಒತ್ತಾಯಿಸಿದರು.

ರೈತ ಸಂಘದ ಮುಖಂಡ ಕಕ್ಕುಪ್ಪಿ ಬಸವರಾಜ ಮಾತನಾಡಿ, ‘ಅತೀವೃಷ್ಟಿಯಿಂದ ರೈತರ ಬದುಕು ಬೀದಿಗೆ ಬಂದಿದ್ದರೂ ಸರ್ಕಾರ, ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿವೆ. ರೈತರ ಸಂಕಷ್ಟಗಳಿಗೆ ಯಾರೂ ಸ್ಪಂದಿಸುತ್ತಿಲ್ಲ. ವಿಮಾನ ಅಪಘಾತದಲ್ಲಿ ಮೃತಪಟ್ಟವರಿಗೆ ಸರ್ಕಾರ ₹9 ಲಕ್ಷ ಪರಿಹಾರ ನೀಡುತ್ತದೆ. ಹೊಲದಲ್ಲಿ ಹಾವು ಕಚ್ಚಿ ಮೃತಪಟ್ಟರೆ ₹1 ಲಕ್ಷ ಪರಿಹಾರ ಪಡೆಯಲು ಪರದಾಡಬೇಕಿದೆ. ಮಳೆಯಿಂದ ಹಾನಿಯಾಗಿರುವ ಈರುಳ್ಳಿ, ಮೆಕ್ಕೆಜೋಳ ಇತರೆ ಬೆಳೆಗಳಿಗೆ 15 ದಿನದೊಳಗೆ ಪರಿಹಾರ ಘೋಷಿಸಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ADVERTISEMENT

ಈರುಳ್ಳಿ ಬೆಳೆಗಾರರ ಸಂಘದ ಅಧ್ಯಕ್ಷ ಎನ್.ಎಂ.ಸಿದ್ದೇಶ ಮಾತನಾಡಿದರು. ಪದಾಧಿಕಾರಿಗಳಾದ ಸುರೇಶ ಮಲ್ಕಿಒಡೆಯರ್, ಅಂಗಡಿ ಕೊಟ್ರೇಶ, ಬಸವರಾಜಪ್ಪ, ಹನುಮಂತ, ಗಣೇಶ, ಪ್ರಶಾಂತ, ಮಂಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.