ಹೂವಿನಹಡಗಲಿ (ವಿಜಯನಗರ): ಪರಿಶಿಷ್ಟ ಜಾತಿ ಸಮುದಾಯಗಳಿಗೆ ಒಳ ಮೀಸಲಾತಿ ಜಾರಿಗೊಳಿಸುವ ಸರ್ಕಾರದ ತೀರ್ಮಾನ ವಿರೋಧಿಸಿ ಲಂಬಾಣಿ, ಭೋವಿ, ಕೊರಚ, ಕೊರಮ ಸಮುದಾಯದವರು ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಲಾಲ್ ಬಹದ್ದೂರ್ ಶಾಸ್ತ್ರಿ ವೃತ್ತದಲ್ಲಿ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಸಾವಿರಾರು ಜನರು ರಸ್ತೆ ಮಾರ್ಗ ಬಂದ್ ಮಾಡಿ ಪ್ರತಿಭಟಿಸಿದರು. ಒಳ ಮೀಸಲಾತಿ ವಿರೋಧಿಸಿ ಲಂಬಾಣಿಗರು ‘ಲಬೋ… ಲಬೋ…’ ಬಾಯಿ ಬಡಿದುಕೊಂಡು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಸರ್ಕಾರ ಮತ್ತು ಸದಾಶಿವ ಆಯೋಗದ ವಿರುದ್ಧ ಪ್ರತಿಭಟನಾಕಾರರು ಧಿಕ್ಕಾರ ಕೂಗಿದರು. ನಂತರ ಶಾಸ್ತ್ರಿ ವೃತ್ತದಿಂದ ತಾಲ್ಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ್ ಕೆ.ಶರಣಮ್ಮ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ದೂಪದಹಳ್ಳಿ ಮರಿಯ್ಮಮದೇವಿ ಮಠದ ಶಿವಪ್ರಕಾಶ್ ಮಹಾರಾಜ್ ಮಾತನಾಡಿ, ಒಳ ಮೀಸಲಾತಿ ನೆಪದಲ್ಲಿ ಸರ್ಕಾರ ಪರಿಶಿಷ್ಟರಲ್ಲಿ ಒಡಕು ಸೃಷ್ಟಿಸಿದೆ. ಸರ್ಕಾರ ಈ ತೀರ್ಮಾನ ಹಿಂಪಡೆಯದಿದ್ದರೆ ಎಲ್ಲ ಲಂಬಾಣಿ ತಾಂಡಾಗಳಲ್ಲಿ ಚುನಾವಣೆ ಬಹಿಷ್ಕರಿಸುತ್ತೇವೆ. ಸದ್ಯ ಶಾಂತಿಯ ಸಂಕೇತವಾದ ಬಿಳಿ ಬಾವುಟ ಹಿಡಿದಿದ್ದೇವೆ. ನಮ್ಮನ್ನ ಕೆಣಕಿದರೆ ಕೆಂಪು ಬಾವುಟ ಹಿಡಿದು ಕ್ರಾಂತಿ ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡ ಡಾ. ಎಲ್.ಪಿ.ನಾಯ್ಕ ಕಠಾರಿ ಮಾತನಾಡಿ, ಪರಿಶಿಷ್ಟರನ್ನು ನಾಲ್ಕು ಗುಂಪುಗಳಾಗಿ ವಿಭಜಿಸಿ ಅವೈಜ್ಞಾನಿಕವಾಗಿ ಮೀಸಲಾತಿ ಹಂಚಿಕೆ ಮಾಡಲಾಗಿದೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದಿರುವ ಲಂಬಾಣಿ, ಭೋವಿ, ಕೊರಚ, ಕೊರಮ ಸಮುದಾಯದ ಮೀಸಲಾತಿ ಕಸಿದು ಸರ್ಕಾರ ಬೀದಿಪಾಲು ಮಾಡಿದೆ. ನಾವೇನು ಯಡಿಯೂರಪ್ಪ, ಬೊಮ್ಮಾಯಿಯವರ ಆಸ್ತಿ ಕೇಳುತ್ತಿಲ್ಲ, ಸಾಂವಿಧಾನಿಕ ಮೀಸಲಾತಿ ಹಕ್ಕು ಕೇಳುತ್ತಿದ್ದೇವೆ. ನಮ್ಮ ಬೇಡಿಕೆ ಈಡೇರುವವರೆಗೆ ತಾಂಡಾಗಳಿಗೆ ಪ್ರವೇಶಿಸದಂತೆ ಎಲ್ಲ ಪಕ್ಷದ ನಾಯಕರನ್ನು ಬಹಿಷ್ಕರಿಸುತ್ತೇವೆ ಎಂದು ಹೇಳಿದರು.
ಯು.ಕೊಟ್ರೇಶ ನಾಯ್ಕ ಮಾತನಾಡಿ, ಬಡತನ ಕಾರಣಕ್ಕಾಗಿ ಲಂಬಾಣಿಗರು ಮಕ್ಕಳನ್ನು ಮಾರಾಟ ಮಾಡುತ್ತಿದ್ದಾರೆ. ಜೀವನ ನಿರ್ವಹಣೆಗಾಗಿ ಕಾಫಿ ಎಸ್ಟೇಟ್ ಗಳಿಗೆ ವಲಸೆ ಹೋಗುತ್ತಾರೆ. ಹಿಂದುಳಿದ ಈ ಸಮುದಾಯದ ಮೀಸಲಾತಿಯನ್ನು ಯಾವ ಮಾನದಂಡ ಆಧಾರದಲ್ಲಿ ಕಸಿದಿದ್ದೀರಿ ಎಂದು ಪ್ರಶ್ನಿಸಿದರು.
ಶಾಂತನಾಯ್ಕ, ಎಲ್.ಚಂದ್ರನಾಯ್ಕ, ಜಯನಾಯ್ಕ, ಶ್ರೀಧರನಾಯ್ಕ, ಡಿ.ಚಂದ್ರಶೇಖರನಾಯ್ಕ, ಶ್ರೀನಿವಾಸ ಭೋವಿ, ಮಹಾಬಲೇಶ್ವರ, ಮಾರಪ್ಪ, ಸುರೇಶ ದಾಸರಹಳ್ಳಿ ತಾಂಡ, ಎಲ್.ಕೆ.ವಿಜಯಕುಮಾರ್, ಜವಾಹರಲಾಲ್, ಸೇವ್ಯಾನಾಯ್ಕ, ಶೇಖರನಾಯ್ಕ, ನೀಲನಾಯ್ಕ, ಮೀರಾಬಾಯಿ, ಲಕ್ಷ್ಮಿಬಾಯಿ, ನೀಲಾಬಾಯಿ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.