ಕಂಪ್ಲಿ: ಕಳೆದ ಎರಡು ದಿನಳಿಂದ ಅಕಾಲಿಕ ಮಳೆಯಾಗುತ್ತಿದ್ದು, ಮುಂಗಾರು ಭತ್ತ ಮತ್ತು ಮುಸುಕಿನಜೋಳ ಕಟಾವು, ಒಕ್ಕಲು ಕಾರ್ಯಕ್ಕೆ ಅಡಚಣೆ ಒಂದೆಡೆಯಾದರೆ, ಖರೀದಿಸುವವರು ಸುಳಿಯದೆ ರೈತರು ಕಂಗಾಲಾಗಿದ್ದಾರೆ.
ತಾಲ್ಲೂಕಿನ ತುಂಗಭದ್ರಾ ನದಿ, ಬಲದಂಡೆ ಕೆಳಮಟ್ಟದ ಕಾಲುವೆ ವ್ಯಾಪ್ತಿಯ ವಿವಿಧೆಡೆ ಮುಂಗಾರು ಭತ್ತ ಮತ್ತು ಮುಸುಕಿನಜೋಳ ಕಟಾವು, ಒಕ್ಕಲು ಬಳಿಕ ಎಪಿಎಂಸಿ ಪ್ರಾಂಗಣದಲ್ಲಿ ರಾಶಿ ಹಾಕಿದ್ದರೆ, ಇನ್ನು ಕೆಲವರು ಒಣಗಿಸಲು ಹರಸಹಾಸಪಡುತ್ತಿದ್ದಾರೆ.
ಕಳೆದ ಎರಡು ದಿನಗಳಿಂದ ಮೋಡ ಮುಸುಕಿದ, ಮಂಜಿನ ವಾತಾವರಣ ಆಗಾಗ ಮಳೆಯಾಗುತ್ತಿರುವುದರಿಂದ ಒಕ್ಕಲು ಮಾಡಿದ ಭತ್ತ, ಮುಸುಕಿನಜೋಳಕ್ಕೆ ಹಾನಿಯಾಗಿದೆ.
‘ಎಕರೆಗೆ ₹ 35,000 ಖರ್ಚು ಮಾಡಿ 12ಎಕರೆಯಲ್ಲಿ ಮುಸುಕಿನಜೋಳ ಬೆಳೆದಿರುವೆ. ಒಕ್ಕಲು ಬಳಿಕ ಎಪಿಎಂಸಿ ಪ್ರಾಂಗಣದಲ್ಲಿ ಎಂಟು ದಿನಗಳಿಂದ ಒಣಗಿಸುತ್ತಿದ್ದರೂ ಇನ್ನು ತೇವಾಂಶವಿದೆ ಎಂದು ಖರೀದಿಸುತ್ತಿಲ್ಲ. ಕ್ವಿಂಟಲ್‍ಗೆ ₹ 2,400 ಇದ್ದ ದರ ಇದೀಗ ₹2,150ಕ್ಕೆ ಕುಸಿದಿದೆ. ಮುಸುಕಿನಜೋಳ ತೇವಗೊಂಡಿದ್ದು, ಬಣ್ಣ ಬದಲಾದರೆ ಇನ್ನು ಕಡಿಮೆ ದರಕ್ಕೆ ಕೇಳುತ್ತಾರೆ’ ಎಂದು ಬಳ್ಳಾಪುರ ಗ್ರಾಮದ ರೈತ ಜಿ. ಮಲ್ಲಿಕಾರ್ಜುನ ಬೇಸರದಿಂದ ತಿಳಿಸಿದರು.
1638ತಳಿಯ ಭತ್ತ, ಆರ್.ಎನ್.ಆರ್ ತಳಿ ಭತ್ತ, ಸೋನಾಮಸೂರಿ ಕಟಾವು ಬಳಿಕ ಒಣಗಿಸುತ್ತಿದ್ದು, ಮಳೆಯಿಂದ ತೇವಗೊಂಡು ಕಪ್ಪುಬಣ್ಣಕ್ಕೆ ತಿರುಗಿದರೆ ಖರೀದಿಸಲು ಯಾರು ಮುಂದೆ ಬರುವುದಿಲ್ಲ ಎಂದು ಕೆಲ ರೈತರು ಅಸಮಾಧಾನದಿಂದ ವ್ಯಕ್ತಪಡಿಸಿದರು.
ಮಾರುಕಟ್ಟೆಯಲ್ಲಿ ಇದೇ ಸಾಲಿನ ಆರಂಭದಲ್ಲಿ ಸೋನಾ ಕ್ವಿಂಟಲ್ ₹ 2800ರಿಂದ ₹3,000 ಇದ್ದದ್ದು ಈಗ ಕ್ವಿಂಟಲ್ ₹ 2,020ರಿಂದ ₹ 2100ಕ್ಕೆ ಇಳಿಕೆ ಕಂಡಿದೆ.
ಭತ್ತ ಖರೀದಿ ಕೇಂದ್ರ ಕುರಿತಂತೆ ಪ್ರತಿ ಬಾರಿ ಸರ್ಕಾರ ವಿಳಂಬ ಮಾಡುತ್ತಿದ್ದು, ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಅಧಿಕೃತ ಆಜ್ಞೆ ಹೊರಡಿಸಲು ಕ್ರಮ ಕೈಗೊಳ್ಳುವಂತೆ ರೈತ ಮುಖಂಡ ಎ.ಸಿ. ದಾನಪ್ಪ ಆಗ್ರಹಿಸಿದರು.
ಇಂದು ಪ್ರತಿಭಟನೆ: ಮುಂಗಾರಿನಲ್ಲಿ ಬೆಳೆದ ಭತ್ತಕ್ಕೆ ಬೆಲೆ ಇಲ್ಲದ ಕಾರಣ ಮತ್ತು ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ದರ ಇರುವುದನ್ನು ವಿರೋಧಿಸಿ ಹಾಗೂ ಎಲ್ಲ ತಾಲ್ಲೂಕು ಕೇಂದ್ರದಲ್ಲಿ ಶೀಘ್ರ ಭತ್ತ ಖರೀದಿ ಕೇಂದ್ರ ಆರಂಭಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಪಟ್ಟಣದಲ್ಲಿ ಶನಿವಾರ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಸಂಘದ ಜಿಲ್ಲಾ ಅಧ್ಯಕ್ಷ ಬಿ.ವಿ. ಗೌಡ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.