ADVERTISEMENT

ಪಿಡಿಐಟಿ- ಅಟ್ಲಾಂಟಿಸ್ ವಿವಿ ಒಪ್ಪಂದ

ಉನ್ನತ ವ್ಯಾಸಂಗ: ಪ್ರವೇಶ ಪರೀಕ್ಷೆ ಇಲ್ಲದೆ ನೇರವಾಗಿ ಸಂದರ್ಶನದ ಅವಕಾಶ

​ಪ್ರಜಾವಾಣಿ ವಾರ್ತೆ
Published 19 ಜೂನ್ 2024, 16:01 IST
Last Updated 19 ಜೂನ್ 2024, 16:01 IST
ಹೊಸಪೇಟೆಯ ಪಿಡಿಐಟಿಯಲ್ಲಿ ಬುಧವಾರ ಅಮೆರಿಕದ ಅಟ್ಲಾಂಟಿಸ್ ವಿಶ್ವವಿದ್ಯಾಲಯ ಜತೆಗೆ ಒಪ್ಪಂದ ಮಾಡಿಕೊಳ್ಳಲಾಯಿತು
ಹೊಸಪೇಟೆಯ ಪಿಡಿಐಟಿಯಲ್ಲಿ ಬುಧವಾರ ಅಮೆರಿಕದ ಅಟ್ಲಾಂಟಿಸ್ ವಿಶ್ವವಿದ್ಯಾಲಯ ಜತೆಗೆ ಒಪ್ಪಂದ ಮಾಡಿಕೊಳ್ಳಲಾಯಿತು   

ಹೊಸಪೇಟೆ (ವಿಜಯನಗರ): ಹೊಸಪೇಟೆ ನಗರದ ಪ್ರೌಢದೇವರಾಯ ತಾಂತ್ರಿಕ ಎಂಜಿನಿಯರಿಂಗ್ ಕಾಲೇಜ್ (ಪಿಡಿಐಟಿ) ಮತ್ತು ಅಮೆರಿಕದ ಅಟ್ಲಾಂಟಿಸ್ ವಿಶ್ವವಿದ್ಯಾಲಯ ಸಹಯೋಗದಲ್ಲಿ ಬುಧವಾರ ‘ಐ.ಟಿ.ಟ್ಯೂಟರ್ ಪ್ರೊ’ ಎಂಬ ಒಡಂಬಡಿಕೆಗೆ ಸಹಿ ಹಾಕಲಾಯಿತು.

ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ್ ಮತ್ತು ಕಾರ್ಯದರ್ಶಿ ಡಾ.ಅರವಿಂದ್ ಪಟೇಲ್ ಅವರ ನೇತೃತ್ವದಲ್ಲಿ ಸಹಿ ಹಾಕಲಾಯಿತು. ಅದರಂತೆ ಸಂಶೋಧನೆ ಮತ್ತು ಉಪನ್ಯಾಸ ಚಟುವಟಿಕೆಗಳಿಗಾಗಿ ಎರಡೂ ಸಂಸ್ಥೆಗಳು ಅಧ್ಯಾಪಕರ ವಿನಿಮಯ ಕಾರ್ಯಕ್ರಮ ನಡೆಸಬಹುದಾಗಿದೆ.

ಅಟ್ಲಾಂಟಿಸ್ ವಿಶ್ವವಿದ್ಯಾಲಯದ ಎಂ.ಡಿ ಹಾಗೂ ಕನ್ನಡಿಗ ಕೈಲಾಸ್ ಚಿಂತಾಮಣಿ ಮಾತನಾಡಿ, ಎರಡೂ ದೇಶಗಳ ನಡುವಿನ ಶೈಕ್ಷಣಿಕ ಮತ್ತು ಸಂಶೋಧನಾ ಸಹಕಾರ, ಪರಸ್ಪರ ಪ್ರಯೋಜನವನ್ನು ಗುರುತಿಸುವ ಹೊಸ ಅಧ್ಯಾಯಕ್ಕೆ ಈ ಒಪ್ಪಂದ ನಾಂದಿಯಾಗಿದೆ ಎಂದರು.

ADVERTISEMENT

ಜಿಆರ್‌ಇ,ಕ ಟೊಫೆಲ್‌ ಅಗತ್ಯವಿಲ್ಲ: ‘ವಿದೇಶಕ್ಕೆ ಉನ್ನತ ವ್ಯಾಸಂಗಕ್ಕೆ ಹೋಗಲು ಇಚ್ಛಿಸುವ ಪಿಡಿಐಟಿ ವಿದ್ಯಾರ್ಥಿಗಳಿಗೆ ಈ ಒ‍‍‍ಪ್ಪಂದದಿಂದಾಗಿ ಜಿ.ಆರ್.ಇ, ಟೊಫೆಲ್ ಮುಂತಾದ ಯಾವುದೇ ಪ್ರವೇಶ ಪರೀಕ್ಷೆ ಇಲ್ಲದೆ ನೇರವಾಗಿ ಸಂದರ್ಶನದ ಅವಕಾಶವನ್ನು ಅಟ್ಲಾಂಟಿಸ್ ವಿಶ್ವವಿದ್ಯಾಲಯ ಕಲ್ಪಿಸುತ್ತದೆ ಎಂದು ಕಾಲೇಜಿನ ಡೀನ್ ಡಾ.ಅರುಣ್ ಮುಧೋಳ ವಿಶ್ಲೇಶಿಸಿದರು.

‘ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ಇದರ ಮೂಲಕ ಹಲವಾರು ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆ, ಜೊತೆಗೆ ಸಂಶೋಧನೆ, ವಿಜ್ಞಾನ ಮತ್ತು ನಾವೀನ್ಯತೆಗಳನ್ನು ತಿಳಿಸುವ ವೇದಿಕೆಯಾಗಲಿದೆ. ಇದರ ಅಡಿಯಲ್ಲಿ ಆನ್ಲೈನ್ ಕಲಿಕೆಗೂ ಅವಕಾಶವಿದೆ, ಕೈಗಾರಿಕೆ ಉದ್ಯಮಗಳಲ್ಲಿ ಅವಶ್ಯಕವಿರುವ ನವೀನ ತಂತ್ರಜ್ಞಾನ ಹಾಗೂ ಕೌಶಲಗಳ ತರಬೇತಿಯನ್ನು ಇಲ್ಲಿ ನೀಡಲಾಗುತ್ತದೆ’ ಎಂದು ಪಿಡಿಐಟಿ ಆಡಳಿತ ಮಂಡಳಿಯ ಅಧ್ಯಕ್ಷ ಕರಿಬಸವರಾಜ್ ಬಾದಾಮಿ ಹೇಳಿದರು.   

ಪ್ರಾಂಶುಪಾಲ ಪ್ರೊ.ಯು.ಎಂ.ರೋಹಿತ್ ಮಾತನಾಡಿ, ಬಳ್ಳಾರಿಯ ವೀ ವೀ ಸಂಘದ ಇನ್ನೊಂದು ಎಂಜಿನಿಯರಿಂಗ್ ಕಾಲೇಜಾದ ಆರ್.ವೈ.ಎಂ.ಇ.ಸಿಗೂ ಈ ವ್ಯವಸ್ಥೆಯನ್ನು ಮುಂದಿನ ದಿನಗಳಲ್ಲಿ ಕಲ್ಪಿಸಲಾಗುವುದು ಎಂದರು.

ಉಪಪ್ರಾಂಶುಪಾಲರಾದ ಪ್ರೊ.ಪಾರ್ವತಿ ಕಡ್ಲಿ ಮತ್ತು ವಿವಿಧ ತಾಂತ್ರಿಕ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.