ಹೊಸಪೇಟೆ (ವಿಜಯನಗರ): ಹಂಪಿ ಕನ್ನಡ ವಿಶ್ವವಿದ್ಯಾಲಯ ವಿದ್ಯುತ್ ಬಾಕಿ ಮೊತ್ತ ₹97.80 ಲಕ್ಷವನ್ನು ತಕ್ಷಣ ಪಾವತಿಸುವಂತೆ ನೋಟಿಸ್ ಕೊಟ್ಟಿರುವ ಗುಲಬರ್ಗಾ ವಿದ್ಯುತ್ ಪ್ರಸರಣ ಕಂಪನಿ (ಜೆಸ್ಕಾಂ) ಶುಕ್ರವಾರ ಬೆಳಿಗ್ಗೆ ಆವರಣದಲ್ಲಿ ಮೂರೂ ಟ್ರಾನ್ಸ್‌ಫಾರ್ಮರ್‌ಗಳ ಫ್ಯೂಸ್ ಕಿತ್ತೊಯ್ದು ವಿದ್ಯುತ್ ಸಂಪರ್ಕವನ್ನು ಸಂಪೂರ್ಣ ಕಡಿತಗೊಳಿಸಿದೆ.
ಡಿಸೆಂಬರ್ 21ರಂದು ಕುಲಸಚಿವರಿಗೆ ನೋಟಿಸ್ ಕಳುಹಿಸಿದ್ದ ಕಮಲಾಪುರದ ಜೆಸ್ಕಾಂ ಸಹಾಯಕ ಎಂಜಿನಿಯರ್, ‘₹97,80,178 ಅನ್ನು ಕೂಡಲೇ ಪಾವತಿಸಬೇಕು. ತಪ್ಪಿದಲ್ಲಿ ತಕ್ಷಣದಿಂದ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು’ ಎಂದಿದ್ದರು. ಇದು ಕುಲಸಚಿವರಿಗೆ ಗುರುವಾರ ತಲುಪಿದೆ.
‘ಈ ಹಿಂದೆಯೂ ಹಲವು ಬಾರಿ ನೋಟಿಸ್ ನೀಡಿದ್ದರೂ ಬಿಲ್ ಕಟ್ಟಿಲ್ಲ. ಅದಕ್ಕೆ ಎಚ್ಚರಿಕೆ ಕೊಡಲು ವಿದ್ಯುತ್ ಸಂಪರ್ಕ ಕಡಿತ ಮಾಡಿದ್ದೇವೆ. ನಾವೂ ಕಷ್ಟದಲ್ಲಿದ್ದೇವೆ. ಫೆಬ್ರವರಿಯಲ್ಲಿ ಬಿಲ್ ಪಾವತಿ ಮಾಡುವುದಾಗಿ ಕುಲಸಚಿವರು ಲಿಖಿತವಾಗಿ ತಿಳಿಸಿದ್ದರಿಂದ ಸಂಜೆ 6ಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದೇವೆ’ ಎಂದು ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ದಯಾನಂದ್.ಜೆ ‘ಪ್ರಜಾವಾಣಿ’ಗೆ ತಿಳಿಸಿದರು.
‘ವಿಶ್ವವಿದ್ಯಾಲಯ ಎದುರಿಸುತ್ತಿರುವ ಆರ್ಥಿಕ ಸಂಕಷ್ಟವನ್ನು ಸರ್ಕಾರದ ಗಮನಕ್ಕೆ ಹಲವು ಸಲ ತರಲಾಗಿದೆ. ಮತ್ತೆ ಆ ಪ್ರಯತ್ನ ಮುಂದುವರಿಸಲಿದ್ದೇವೆ’ ಎಂದು ಕುಲಪತಿ ಪ್ರೊ.ಡಿ.ವಿ. ಪರಮಶಿವಮೂರ್ತಿ ಹೇಳಿದರು.
‘ಕಳೆದ ಫೆಬ್ರುವರಿಯಲ್ಲೂ ಇದೇ ರೀತಿ ವಿದ್ಯುತ್ ಕಡಿತ ಮಾಡಲಾಗಿತ್ತು. ಆಗ ವಿದ್ಯುತ್ ಬಿಲ್ ಬಾಕಿ ರೂಪದಲ್ಲಿ ₹1.05 ಕೋಟಿ ಇತ್ತು. ತಕ್ಷಣ ಅನುದಾನ ಒಟ್ಟುಗೂಡಿಸಿ ₹30 ಲಕ್ಷ ಪಾವತಿಸಿದ್ದರಿಂದ ವಿದ್ಯುತ್ ಸಂಪರ್ಕ ಮರುಕಲ್ಪಿಸಲಾಗಿತ್ತು’ ಎಂದು ಕುಲಸಚಿವ ಪ್ರೊ.ವಿಜಯ ಪೂಣಚ್ಚ ತಂಬಂಡ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.