ADVERTISEMENT

ಪೂರ್ವ ಪ್ರಾಥಮಿಕ ಶಿಕ್ಷಣ: ಸರ್ಕಾರದ ನಿಲುವಿಗೆ ಸಿಪಿಎಂ ವಿರೋಧ

​ಪ್ರಜಾವಾಣಿ ವಾರ್ತೆ
Published 16 ಜೂನ್ 2024, 10:36 IST
Last Updated 16 ಜೂನ್ 2024, 10:36 IST
<div class="paragraphs"><p>ಆರ್.ಭಾಸ್ಕರ ರೆಡ್ಡಿ</p></div>

ಆರ್.ಭಾಸ್ಕರ ರೆಡ್ಡಿ

   

ಹೊಸಪೇಟೆ (ವಿಜಯನಗರ): ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಶಿಕ್ಷಣ ಇಲಾಖೆಯ ಮೂಲಕ ಜಾರಿಗೊಳಿಸುವ ಜನವಿರೋಧಿ ಸರ್ಕಾರದ ಆದೇಶ ಹಿಂಪಡೆದು, ಐಸಿಡಿಎಸ್‌ ಯೋಜನೆಯ ಅಂಗನವಾಡಿ ಕೇಂದ್ರಗಳ ಮೂಲಕ ಅದನ್ನು ಜಾರಿಗೆ ತರಬೇಕು ಎಂದು ಸಿಪಿಎಂ ಒತ್ತಾಯಿಸಿದ್ದು, ಮಂಗಳವಾರ ಕಲ್ಯಾಣ ಕರ್ನಾಟಕ ಭಾಗದ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಘಟನೆ ನಡೆಸಲು ನಿರ್ಧರಿಸಿದೆ.

ಈ ಸಂಬಂಧ ಪಕ್ಷದ ರಾಜ್ಯ ಸಮಿತಿ ಸದಸ್ಯರಾದ ಅರ್.ಎಸ್.ಬಸವರಾಜ್, ಬಿ. ಮಾಳಮ್ಮ, ಜಿಲ್ಲಾ ಕಾರ್ಯದರ್ಶಿ ಆರ್.ಭಾಸ್ಕರ ರೆಡ್ಡಿ, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕೆ.ನಾಗರತ್ನಮ್ಮ, ಟಿ.ವಿ.ರೇಣುಕಮ್ಮ ಅವರು ಹೇಳಿಕೆ ನೀಡಿದ್ದು, ಅತ್ಯಂತ ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶದ ಬಡ ಜನತೆ, ದಲಿತ ಹಾಗು ಮಹಿಳಾ ಸಮುದಾಯವು ಸರ್ಕಾರದ ಈ ಆದೇಶದಿಂದ ವಂಚನೆಗೊಳಗಾಗಲಿದ್ದಾರೆ. ಬಡವರ ಹಾಗೂ ದಲಿತರು ಮತ್ತು ಮಹಿಳೆಯರ ವಿರೋಧಿಯಾದ ಈ ದುರುದ್ದೇಶಪೂರಿತ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ADVERTISEMENT

ಪೂರ್ವ ಪ್ರಾಥಮಿಕ ಶಿಕ್ಷಣ ನೀಡುವ ನಿಲುವನ್ನು ಸಿಪಿಎಂ ಸ್ವಾಗತಿಸುತ್ತದೆ. ಆದರೆ, ಅದೇ ಸಂದರ್ಭದಲ್ಲಿ ಅದನ್ನು ಶಿಕ್ಷಣ ಇಲಾಖೆಯ ಮೂಲಕ ಜಾರಿಗೊಳಿಸಲು ಹೊರಟಿರುವುದು ಮಹಿಳೆಯರ, ದಲಿತರ ಹಾಗೂ ಎಲ್ಲ ಬಡವರ ವಿರೋಧಿ ನೀತಿಯಾಗಿದೆ, ಇದನ್ನು ಪಕ್ಷ ಖಂಡಿಸುತ್ತದೆ. ಐಸಿಡಿಎಸ್‌ ಯೋಜನೆಯ ಭಾಗವಾಗಿ ಅಂಗನವಾಡಿ ಕೇಂದ್ರಗಳ ಮೂಲಕ ಜಾರಿಗೊಳಿಸುವಂತೆ ಬಲವಾಗಿ ಒತ್ತಾಯಿಸುತ್ತದೆ ಎಂದು ಅವರು ಹೇಳಿದ್ದಾರೆ.

ಸರ್ಕಾರದ ನೂತನ ಆದೇಶದಿಂದ ಬಹುತೇಕ ಅಂಗನವಾಡಿಗಳಿಗೆ ಕೆಲಸವಿಲ್ಲದಂತಾಗುತ್ತದೆ. ಅಂಗನವಾಡಿ ಕೇಂದ್ರಗಳಲ್ಲಿ ಇದುವರೆಗೆ ವೇತನವಿಲ್ಲದೆ ಗೌರವಧನಕ್ಕೆ ಬಿಟ್ಟಿ ದುಡಿದ ದುರ್ಬಲ ವಿಭಾಗಕ್ಕೆ ಸೇರಿದ ಮಹಿಳಾ ನೌಕರರು ಉದ್ಯೋಗ ಕಳೆದುಕೊಂಡು ಬೀದಿ ಪಾಲಾಗಲಿದ್ದಾರೆ. ಅದೇ ರೀತಿ, ಅಂಗನವಾಡಿ ಕೇಂದ್ರಗಳು ಮುಚ್ಚುವುದರಿಂದ, ಬಡ ಮಕ್ಕಳಿಗೆ ಹಾಗೂ ಬಡ ಗರ್ಭಿಣಿ, ಬಾಣಂತಿಯರಿಗೆ ದೊರೆಯುತ್ತಿದ್ದ ಪೌಷ್ಟಿಕ ಆಹಾರ ದೊರೆಯದಂತಾಗುತ್ತದೆ. ಪೂರ್ವ ಪ್ರಾಥಮಿಕ ಶಿಕ್ಷಣ ನೀಡುತ್ತೇವೆಂದು ಹೇಳಿಕೊಂಡು ಜನಪ್ರಿಯತೆ ಪಡೆಯುವುದು ಹಾಗೂ ಆ ಮೂಲಕ ಜನತೆಯನ್ನು ಮತ್ತು ನಾಗರಿಕರನ್ನು ಯಾಮಾರಿಸಿ ಬಡವರು, ಮಹಿಳೆಯರು ಹಾಗೂ ದಲಿತರಿಗೆ ಅನ್ಯಾಯ ಮಾಡುವ ಹುನ್ನಾರ ಇದರ ಹಿಂದೆ ಇದೆ ಎಂದು ಪಕ್ಷ ದೂರಿದೆ.

ಜೂನ್‌ 11ರಂದು ಹೊರಡಿಸಿದ್ದ ಆದೇಶ

ಜೂನ್‌ 11ರಂದು ರಾಜ್ಯ ಸರ್ಕಾರದ ಶಾಲಾ ಶಿಕ್ಷಣ ಇಲಾಖೆಯು ಆದೇಶ ಹೊರಡಿಸಿ, ಕಲ್ಯಾಣ ಕರ್ನಾಟಕ ಭಾಗದ ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು, ಯಾದಗಿರಿ, ಕಲಬುರ್ಗಿ, ಬೀದರ್ ಜಿಲ್ಲೆಗಳ 1,008 ಸರ್ಕಾರಿ ಶಾಲೆಗಳಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ವಯ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಜಾರಿಗೊಳಿಸಲು ನಿರ್ಧರಿಸಿದೆ.

ಇದರ ವಿರುದ್ಧ ಸಿಐಟಿಯು, ಎಐಟಿಯುಸಿ ಸಹಿತ ವಿವಿಧ ಕಾರ್ಮಿಕ ಸಂಘಟನೆಗಳಿಗೆ ಒಳಪಟ್ಟ ಸಂಘಗಳು ಈಗಾಗಲೇ ಹಲವೆಡೆ ಪ್ರತಿಭಟನೆ ನಡೆಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.