ಹೊಸದುರ್ಗ: ಕ್ರೈಸ್ತ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಡ ಹಾಕಿದ ಮಾವ, ಆತನ ತಂದೆ ಹಾಗೂ ಹಲ್ಲೆ ನಡೆಸಿದ ಸಂಬಂಧಿಕರ ವಿರುದ್ಧ ಹೊಸಪೇಟೆಯ ವ್ಯಕ್ತಿಯೊಬ್ಬರು ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ದೂರು ದಾಖಲಿಸಿದ್ದಾರೆ.
ವಿಜಯನಗರ ಜಿಲ್ಲೆಯ ಹೊಸಪೇಟೆಯ ಅರವಿಂದ ನಗರದ ಪಕ್ಕದ ಬುಡ್ಗ ಜಂಗಮ ಕಾಲೊನಿ ನಿವಾಸಿ ಮಾರಪ್ಪ ಅವರು ಹೊಸದುರ್ಗ ಪಟ್ಟಣದ ನಂಜಯ್ಯನಕೆರೆ ಬಡಾವಣೆಯಲ್ಲಿರುವ ತಮ್ಮ ಮಾವ ವಸಂತಕುಮಾರ್, ಅವರ ತಂದೆ ರಾಮಚಂದ್ರಪ್ಪ ಹಾಗೂ ಸಂಬಂಧಿಕರಾದ ಸುಧಾಕರ್, ಮಂಜುನಾಥ್ ಸಂಕಪ್ಪ ಅವರ ವಿರುದ್ಧ ದೂರು ನೀಡಿದ್ದಾರೆ. ಹೊಸದುರ್ಗದಲ್ಲಿ ನಡೆದ ಈ ಪ್ರಕರಣವು ಮತಾಂತರದ ಬಗ್ಗೆ ಮತ್ತೆ ಚರ್ಚೆ ಹುಟ್ಟುಹಾಕಿದೆ.
ಕ್ರೈಸ್ತ ಸಂಪ್ರದಾಯದಂತೆ ಮದುವೆ: ‘ದೀಕ್ಷಾ ಸ್ನಾನ’ ಹೆಸರಿನಲ್ಲಿ ಬಲವಂತವಾಗಿ ನೀರಿನಲ್ಲಿ ಮುಳುಗಿಸಿ ನೀವು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದೀರಿ ಎಂದು ವಸಂತಕುಮಾರ್ ಅವರ ಮಗಳು ಸರಳ ಜೊತೆ 2020ರ ಜುಲೈ 6ರಂದು ಕ್ರೈಸ್ತ ಧರ್ಮದ ಪದ್ಧತಿಯಂತೆ ವಿವಾಹ ಮಾಡಿಕೊಲಾಯಿತು. ಹಿಂದೂ ಧರ್ಮದ ದೇವರನ್ನು ಪೂಜಿಸುವಂತಿಲ್ಲ. ಕ್ರೈಸ್ತ ಧರ್ಮ ಪಾಲನೆ ಮಾಡಬೇಕು. ನೀನು ಪೂಜೆ ಮಾಡುವ ಸುಂಕ್ಲಮ್ಮ, ಮಾರಮ್ಮ, ದುರ್ಗಮ್ಮ ಇವೆಲ್ಲವೂ ಸೈತಾನ್‌ಗಳು. ಇವುಗಳನ್ನು ಪೂಜೆ ಮಾಡಿದರೆ ನರಕಕ್ಕೆ ಹೋಗುತ್ತೀಯಾ ಎಂದು ಹಿಂದೂ ಧರ್ಮದ ಪೋಟೋಗಳನ್ನು ವಸಂತಕುಮಾರ್, ರಾಮಚಂದ್ರಪ್ಪ ಅವರು ಹರಿದು ಸುಟ್ಟು ಹಾಕಿದ್ದರು’ ಎಂದು ಮಾರಪ್ಪ ದೂರಿನಲ್ಲಿ ತಿಳಿಸಿದ್ದಾರೆ.
ಪತ್ನಿ, ಮಗು ಮುಖ ನೋಡಲು ಅಡ್ಡಿ: ‘2021ರ ಡಿಸೆಂಬರ್ 2ರಂದು ಪತ್ನಿ ಸರಳ ಅವರನ್ನು ಹೆರಿಗೆಗಾಗಿ ಹೊಸದುರ್ಗದಲ್ಲಿರುವ ಮಾವನ ಮನೆಗೆ ಕಳುಹಿಸಿಕೊಟ್ಟಿದ್ದೆ. ಮಗುವಾಗಿರುವ ವಿಷಯವನ್ನೂ ಬೇರೆಯವರಿಂದ ತಿಳಿಯಬೇಕಾಯಿತು. ಅಣ್ಣಂದಿರರಾದ ದೊಡ್ಡ ಹುಸೇನಿ, ಸಣ್ಣಹುಸೇನಿ, ಕಾರ್ತೀಕ, ಚಂದ್ರು ಅವರೆಲ್ಲರೂ ಜನವರಿ 18ರಂದು ಮಗು ನೋಡಲು ಮನೆಗೆ ಬಂದಾಗ ಮಾವ ವಸಂತ್‌ಕುಮಾರ್ ಮತ್ತು ಅವರ ತಂದೆ ರಾಮಚಂದ್ರಪ್ಪ ಅವರು ‘ನೀವು ಸೈತಾನ್‌ಗಳು. ಹಿಂದೂ ದೇವರನ್ನು ಪೂಜೆ ಮಾಡುವವರು. ನಿಮಗೆ ಮನೆಯೊಳಗೆ ಪ್ರವೇಶವಿಲ್ಲ ಎಂದು ಅವಾಚ್ಯ ಪದಗಳಿಂದ ನಿಂದಿಸಿದರು. ಕ್ರಿಶ್ಚಿಯನ್ ಧರ್ಮ ಅನುಸರಿಸಿದರೆ ಮಾತ್ರ ಪತ್ನಿ ಹಾಗೂ ಮಗುವಿನ ಮುಖ ನೋಡಬಹುದು ಹಾಗೂ ಅವರನ್ನು ಜೊತೆಗೆ ಕರೆದುಕೊಂಡು ಹೋಗಬಹುದು ಎಂದು ಬೆದರಿಕೆಯೊಡ್ಡಿದರು. ಮಗುವಿನ ಮುಖ ನೋಡಲು ಬಿಡದಿರುವುದನ್ನು ಪ್ರಶ್ನಿಸಿದಾಗ ನನ್ನ ಸಹೋದರರ ಮೇಲೆ ಹಲ್ಲೆ ನಡೆಸಲಾಗಿದೆ’ ಎಂದು ದೂರಿದ್ದಾರೆ.
‘ಪತ್ನಿ ಹಾಗೂ ಮಗು ನನ್ನೊಂದಿಗೆ ಬರಬೇಕು. ನಾವು ನಂಬಿರುವ ದೇವರ ಫೋಟೋಗಳನ್ನು ಹರಿದು ಸುಟ್ಟುಹಾಕಿ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಇವರ ಮೇಲೆ ಕ್ರಮ ಕೈಗೊಳ್ಳಬೇಕು’ ಎಂದು ಮಾರಪ್ಪ ಮನವಿ ಮಾಡಿದ್ದಾರೆ.
ಶಾಸಕರಿಗೆ ಮನವಿ: ಹೈದ್ರಾಬಾದ್ ಕರ್ನಾಟಕ ಅಲೆಮಾರಿ ಬುಡ್ಗ ಜಂಗಮ್ ಜಾಗೃತಿ ಸಮಿತಿ ಸೇವಾ ಸಂಘದ ಅಧ್ಯಕ್ಷ ಸಣ್ಣ ಮಾರಪ್ಪ ನೇತೃತ್ವದಲ್ಲಿ ಮಾರಪ್ಪ ಅವರು ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಅವರನ್ನು ಭೇಟಿ ಮಾಡಿ, ‘ಬಲವಂತ ಮತಾಂತರ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ತಮಗೆ ನ್ಯಾಯ ಒದಗಿಸಿಕೊಡಬೇಕು’ ಎಂದು ಮನವಿ ಮಾಡಿದ್ದಾರೆ.
*
ಬಲವಂತವಾಗಿ ಮತಾಂತರ ಮಾಡುವವರ ವಿರುದ್ಧ ಧ್ವನಿ ಎತ್ತಲು ಸಿದ್ಧ. ಬಲವಂತದ ಮತಾಂತರಕ್ಕೆ ದಲಿತರು, ಎಸ್ಸಿ, ಎಸ್ಟಿ ಜನಾಂಗದವರೇ ಬಲಿಯಾಗುತ್ತಿದ್ದು, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದ್ದೇನೆ.
- ಗೂಳಿಹಟ್ಟಿ ಶೇಖರ್, ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.