ಹೊಸಪೇಟೆ (ವಿಜಯನಗರ): ಹಂಪಿಯಲ್ಲಿ ಬ್ಯಾಟರಿಚಾಲಿತ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸದಂತೆ ಒತ್ತಾಯಿಸಿ ಫೆಡರೇಶನ್ ಆಫ್ ಕರ್ನಾಟಕ ಆಟೊರಿಕ್ಷಾ ಡ್ರೈವರ್ಸ್ ಯೂನಿಯನ್ಸ್ ನೇತೃತ್ವದಲ್ಲಿ ಆಟೊ ಚಾಲಕರು ಗುರುವಾರ ನಗರದ ರಾಣಿಪೇಟೆಯಲ್ಲಿನ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರ ಕಚೇರಿ ಎದುರು ಧರಣಿ ನಡೆಸಿದರು.
ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಸೇರಿದ ಚಾಲಕರು ಅಲ್ಲಿಂದ ಸಚಿವರ ಕಚೇರಿ ವರೆಗೆ ರ್‍ಯಾಲಿ ನಡೆಸಿದರು. ಅನಂತರ ಸಚಿವ ಆನಂದ್ ಸಿಂಗ್ ಅವರಿಗೆ ಮನವಿ ಪತ್ರ ಸಲ್ಲಿಸಿ, ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
ಹಂಪಿ ಪರಿಸರದಲ್ಲಿ ಬ್ಯಾಟರಿಚಾಲಿತ ಪ್ರಯಾಣಿಕರ ವಾಹನಗಳನ್ನು ಓಡಿಸಲು ಸರ್ಕಾರ ಚಿಂತನೆ ನಡೆಸಿದೆ.ಅದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ಕಲ್ಪಿಸಬಾರದು. ಎಲ್‌ಪಿಜಿ, ಸಿಎನ್‌ಜಿ, ಪೆಟ್ರೋಲ್, ಡೀಸೆಲ್‌ನಿಂದ ಸಂಚರಿಸುವ ಎಲ್ಲ ಆಟೊಗಳಿಗೆ ಸಂಚರಿಸಲು ಅವಕಾಶ ಮಾಡಿಕೊಡಬೇಕು. ನೂರಾರು ಜನ ಆಟೊ ಚಾಲಕರು ಆಟೊ ಓಡಿಸಿಯೇ ಬದುಕು ನಡೆಸುತ್ತಾರೆ ಎಂದು ತಿಳಿಸಿದರು.
ಖಾಸಗಿ ಕಂಪನಿಗಳು ಹಂಪಿಯಲ್ಲಿ ಬ್ಯಾಟರಿಚಾಲಿತ ವಾಹನ ಸೇವೆ ಆರಂಭಿಸಿದರೆ ಆಟೊ ಓಡಿಸುವವರು ಕೆಲಸ ಕಳೆದುಕೊಳ್ಳಬೇಕಾಗುತ್ತದೆ. ಇನ್‌ಶೂರೆನ್ಸ್, ವಿವಿಧ ಬಗೆಯ ತೆರಿಗೆಗಳ ಹೊರೆಯಿಂದ ಚಾಲಕರು ಕಂಗಾಲಾಗಿದ್ದಾರೆ. ಖಾಸಗಿಯವರಿಗೆ ಬಿಟ್ಟುಕೊಟ್ಟರೆ ಚಾಲಕರ ಕುಟುಂಬದವರು ಬೀದಿಗೆ ಬೀಳುತ್ತಾರೆ. ಒಂದುವೇಳೆ ಖಾಸಗಿಯವರಿಗೆ ಬ್ಯಾಟರಿಚಾಲಿತ ವಾಹನ ಸೇವೆ ಕಲ್ಪಿಸಲು ಅವಕಾಶ ಕೊಟ್ಟರೆ ಆಟೊರಿಕ್ಷಾಗಳಿಗೂ ಅನುಮತಿ ಕೊಡಬೇಕು ಎಂದು ಒತ್ತಾಯಿಸಿದರು.
ಹಂಪಿಯಲ್ಲಿ ಬಾಡಿಗೆ ಮೇಲೆ ದ್ವಿಚಕ್ರ ವಾಹನಗಳನ್ನು ಕೊಡುವುದನ್ನು ನಿರ್ಬಂಧಿಸಬೇಕು. ಸಬ್ಸಿಡಿಯಲ್ಲಿ ಆಟೊ, ಸಾಲ ಸೌಲಭ್ಯ ನೀಡಬೇಕು. ವಸತಿ ರಹಿತ ಆಟೊ ಚಾಲಕರಿಗೆ ನಿವೇಶನಗಳನ್ನು ಕೊಡಬೇಕು. ಬೆಂಗಳೂರಿಗೆ ಸೀಮಿತವಾಗಿರುವ ‘ಸಾರಥಿ ಸೂರು’ ಯೋಜನೆ ಇಡೀ ರಾಜ್ಯಕ್ಕೆ ವಿಸ್ತರಿಸಬೇಕೆಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ಸಚಿವ ಆನಂದ್ ಸಿಂಗ್, ಹಂಪಿಯಲ್ಲಿ ಸದ್ಯ ಬಾಟರಿಚಾಲಿತ ವಾಹನಗಳ ಸೇವೆ ಆರಂಭಿಸುವುದರ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಭರವಸೆ ನೀಡಿದರು. ಅದಾದ ನಂತರ ಚಾಲಕರು ಧರಣಿ ಕೈಬಿಟ್ಟರು.
ಫೆಡರೇಶನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ. ಸಂತೋಷ್ ಕುಮಾರ್, ವಿಜಯನಗರ ಆಟೊ ಚಾಲಕರ ಸಂಘಟನೆಯ ಅಧ್ಯಕ್ಷ ಡಿ. ವೆಂಕಟರಮಣ, ಉಪಾಧ್ಯಕ್ಷ ಸಿ. ಗೋವಿಂದರಾಜು, ಪ್ರಧಾನ ಕಾರ್ಯದರ್ಶಿ ವೈ.ರಾಮಚಂದ್ರಬಾಬು, ಆಟೊ ಫೆಡರೇಶನ್ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಬಿ.ಎಸ್. ಯಮುನಪ್ಪ, ಖಜಾಂಚಿ ಎಸ್. ಅನಂತಶಯನ, ಸಂಘಟನಾ ಕಾರ್ಯದರ್ಶಿ ಎಸ್. ವಿಜಯಕುಮಾರ್, ತಿಪ್ಪೇಸ್ವಾಮಿ, ರಾಘವೇಂದ್ರಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.