ADVERTISEMENT

ಹೂವಿನಹಡಗಲಿ ಶಾಸಕ ಪಿಟಿಪಿ ವಿರುದ್ಧ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2023, 11:42 IST
Last Updated 22 ಫೆಬ್ರುವರಿ 2023, 11:42 IST
   

ಹೂವಿನಹಡಗಲಿ (ವಿಜಯನಗರ ಜಿಲ್ಲೆ) : ತಾಲ್ಲೂಕಿನ ಇಟ್ಟಿಗಿ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ತೆರಳಿದ್ದ ಶಾಸಕ ಪಿ.ಟಿ.ಪರಮೇಶ್ವರನಾಯ್ಕ ವಿರುದ್ಧ ಬಿಜೆಪಿ ಕಾರ್ಯಕರ್ತರು ಕಪ್ಪು ಬಟ್ಟೆ ಧರಿಸಿ ಪ್ರತಿಭಟಿಸಿದರು. ಪ್ರತಿಯಾಗಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ವಿರುದ್ಧ ಧಿಕ್ಕಾರ ಕೂಗಿದರು.

ಸರ್ಕಾರಿ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರನ್ನು ಆಮಂತ್ರಿಸದೇ ಅಧಿಕಾರಿಗಳು ಶಿಷ್ಟಾಚಾರ ಉಲ್ಲಂಘಿಸಿದ್ದಾರೆ. ಸರ್ಕಾರಿ ಕಾಮಗಾರಿಗಳಿಗೆ ಚಾಲನೆ ನೀಡುವಾಗ ಶಾಸಕರು ಬಿಜೆಪಿಯ ಜನಪ್ರತಿನಿಧಿಗಳನ್ನು ಆಮಂತ್ರಿಸದೇ ಪಕ್ಷಪಾತ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ ನಡುವೆಯೇ ಶಾಸಕರು ಶಾಲಾ ಕೊಠಡಿಗಳಿಗೆ ಭೂಮಿ ಪೂಜೆ ನೆರವೇರಿಸಿದರು. ಆಸ್ಪತ್ರೆಯ ಹೆಚ್ಚುವರಿ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ವಾಪಾಸ್ ಬರುವಾಗ ಪ್ರತಿಭಟನಾಕಾರರು ಮುಖ್ಯ ವೃತ್ತದಲ್ಲಿ ಶಾಸಕರ ವಾಹನ ತಡೆಯಲು ಮುಂದಾದರು. ಇದೇ ವೇಳೆ ಶಾಸಕರ ಜತೆ ಬೈಕ್ ರ್ಯಾಲಿಯಲ್ಲಿ ಬಂದ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಎರಡೂ ಪಕ್ಷಗಳ ಕಾರ್ಯಕರ್ತರು ಪರಸ್ಪರರ ವಿರುದ್ಧ ಧಿಕ್ಕಾರ ಕೂಗಿದರು. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ADVERTISEMENT

ಗ್ರಾ.ಪಂ. ಅಧ್ಯಕ್ಷ ಪುಷ್ಪಾ ಮಹಾಬಲೇಶ್ವರ, ಉಪಾಧ್ಯಕ್ಷ ಮರ್ದಾನ್ ಸ್ವಾಮಿ, ಮುಖಂಡರಾದ ಸಿ.ಜೆ.ಮಹಾಬಲೇಶ್ವರ, ಕೆ.ಪಿ.ನಾಗರಾಜ, ರಾಮನಗೌಡ, ಶಿವಲಿಂಗಪ್ಪ, ಕುಂಚೂರು ಸತೀಶ ಇತರರು ಪ್ರತಿಭಟಿಸಿದರು.

---

ಬಿಜೆಪಿಯವರ ಕೊಡುಗೆ ಏನು-ಶಾಸಕರ ಪ್ರಶ್ನೆ

ಇಟ್ಟಿಗಿ ಗ್ರಾಮದ ಅಭಿವೃದ್ಧಿಗೆ ಬಿಜೆಪಿಯವರ ಕೊಡುಗೆ ಏನು ಎಂದು ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಪ್ರಶ್ನಿಸಿದರು.
ಇಟ್ಟಿಗಿ ಗಲಾಟೆ ಕುರಿತು ಪ್ರತಿಕ್ರಿಯಿಸಿದ ಅವರು, ಗ್ರಾಮದ ಅಭಿವೃದ್ಧಿಗೆ ಬಿಜೆಪಿ ಸರ್ಕಾರದ ಯಾವ ಸಚಿವರು, ಸಂಸದರು, ಸ್ಥಳೀಯ ಪ್ರತಿನಿಧಿಗಳು ಬಿಡಿಗಾಸು ಅನುದಾನ ನೀಡಿಲ್ಲ. ಗ್ರಾಮಕ್ಕೆ ಕುಡಿಯುವ ನೀರು, ಸಿ.ಸಿ.ರಸ್ತೆ, ಆಸ್ಪತ್ರೆ ಕಟ್ಟಡ, ಶಾಲಾ, ಕಾಲೇಜು ಕೊಠಡಿ ನಿರ್ಮಾಣಕ್ಕೆ ನಾವು ಸಾಕಷ್ಟು ಅನುದಾನ ನೀಡಿ ಕಾಮಗಾರಿಗಳಿಗೆ ಚಾಲನೆ ನೀಡುತ್ತಿದ್ದೇವೆ. ಬಿಜೆಪಿಯವರ ಕೊಡುಗೆ ಏನು ಎಂಬುದನ್ನು ಪ್ರತಿಭಟನೆ ನಡೆಸಿದವರೇ ಹೇಳಬೇಕು ಸವಾಲು ಹಾಕಿದರು.

ಇತ್ತೀಚಿನ ಸಮೀಕ್ಷೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಲಿರುವ ತಮಗೆ ಹ್ಯಾಟ್ರಿಕ್ ಗೆಲುವು ಸಿಗಲಿದೆ ಎಂಬ ಸುಳಿವು ಸಿಕ್ಕಿರುವುದರಿಂದ ಬಿಜೆಪಿಯವರು ನಮ್ಮ ಅಭಿವೃದ್ಧಿ, ಜನಪ್ರಿಯತೆ ಸಹಿಸದೇ ಚುನಾವಣಾ ಹೊಸ್ತಿಲಲ್ಲಿ ಗಲಾಟೆ ಶುರು ಮಾಡಿದ್ದಾರೆ. ಅವರು ಪ್ರತಿಭಟಿಸಿದ್ದರಿಂದ ನಮ್ಮ ಕಾರ್ಯಕರ್ತರೂ ಒಗ್ಗಟ್ಟಾಗಿದ್ದಾರೆ. ಈ ಕಾರಣಕ್ಕಾಗಿ ಬಿಜೆಪಿಯವರನ್ನು ಅಭಿನಂದಿಸುವೆ ಎಂದರು. ಅಟವಾಳಗಿ ಕೊಟ್ರೇಶ, ಬಸವನಗೌಡ ಪಾಟೀಲ್, ಜಿ.ವಸಂತ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.