ಹೊಸಪೇಟೆ (ವಿಜಯನಗರ): ‘ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ (ಎಸ್ಟಿ) ಸೇರಿಸಿ, ಮೀಸಲಾತಿ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ನ. 21ರಂದು ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿದೆ’ ಎಂದು ಹಾಲುಮತ ಮಹಾಸಭಾ ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಾನಂದ ತಿಳಿಸಿದರು.
ಮೀಸಲಾತಿಗೆ ಸಂಬಂಧಿಸಿದಂತೆ ಮೈಸೂರಿನ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಕೇಂದ್ರದಿಂದ ಕುಲಶಾಸ್ತ್ರೀಯ ಅಧ್ಯಯನ ನಡೆಸಲಾಗಿದೆ. ಸರ್ಕಾರ ಅದನ್ನು ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಕನಕದಾಸ ಜಯಂತಿಯ ಸಂದರ್ಭದಲ್ಲಿ ಸರ್ಕಾರ ಈ ಕೆಲಸ ಮಾಡುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಸಮಾಜದ ನಿರೀಕ್ಷೆ ಹುಸಿಯಾಗಿದೆ ಎಂದು ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಎಸ್ಟಿ ಪಟ್ಟಿಯಲ್ಲಿ ಕುರುಬರಿಗೆ ಸಂಬಂಧಿಸಿದ ಗೊಂಡ, ರಾಜಗೊಂಡ, ಜೇನುಕುರುಬ, ಕಾಡುಕುರುಬ, ಕಾಟ್ಟುನಾಯಕನ್, ‘ಕುರುಮನ್ಸ್’ ಉಪಪಂಗಡಗಳಿವೆ. ಎಲ್ಲ ಕುರುಬರಿಗೆ ಅನ್ವಯಿಸುವಂತೆ ಈ ಸೌಲಭ್ಯ ಕಲ್ಪಿಸಬೇಕು. ಆಗಿರುವ ಅನ್ಯಾಯ ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ಹಾಲುಮತ ಮಹಾಸಭಾ ತಾಲ್ಲೂಕು ಅಧ್ಯಕ್ಷ ರವಿಕುಮಾರ್ ಮಾತನಾಡಿ, ನ. 21ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಯಲಿರುವ ಎಸ್ಟಿ ಮೀಸಲಾತಿ ಹೋರಾಟದಲ್ಲಿ ವಿಜಯನಗರ ಜಿಲ್ಲೆಯಿಂದ ಎರಡು ಸಾವಿರ ಜನ ಸಮಾಜದವರು ಪಾಲ್ಗೊಳ್ಳುವರು ಎಂದು ತಿಳಿಸಿದರು.
ಸಮಾಜದ ಮುಖಂಡ ಎಚ್. ಮಹೇಶ್ ಮಾತನಾಡಿ, ಕುರುಬರು ಈ ಹಿಂದೆ ಎಸ್ಟಿ ಮೀಸಲು ಪಟ್ಟಿಯಲ್ಲಿದ್ದರು. ‘ಎಸ್ಟಿ ಟ್ರೈಬ್’ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಅನೇಕ ವರದಿಗಳಲ್ಲಿ ಈ ತರಹದ ಉಲ್ಲೇಖವಿದೆ. ಹೀಗಿದ್ದರೂ ಸಮಾಜವನ್ನು ಎಸ್ಟಿ ಪಟ್ಟಿಯಿಂದ ಹೊರಗಿಟ್ಟು ಅನ್ಯಾಯವೆಸಗಲಾಗಿದೆ. ಅದನ್ನು ಸರಿಪಡಿಸುವಂತೆ ಒತ್ತಾಯಿಸಿ ಕಾಗಿನೆಲೆಯ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ನ. 21ರಂದು ಹೋರಾಟಕ್ಕೆ ತೀರ್ಮಾನಿಸಲಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ಅಪಾರ ಸಂಖ್ಯೆಯ ಜನ ಪಾಲ್ಗೊಳ್ಳುವರು ಎಂದು ವಿವರಿಸಿದರು.
ಮುಖಂಡರಾದ ರಾಮಚಂದ್ರಗೌಡ, ಅಯ್ಯಾಳಿ ತಿಮ್ಮಪ್ಪ, ಆರ್. ಕೊಟ್ರೇಶ್, ನಾಗರಾಜ, ಬಿಸಾಟಿ ತಾಯಪ್ಪ, ಪಲ್ಲೇದ್ ಸಿದ್ದೇಶ್, ಗೋಪಾಲಕೃಷ್ಣ, ಬಂದಿ ಭರಮಪ್ಪ, ಶ್ರೀಕಾಂತ ಪೂಜಾರಿ, ವಿನಾಯಕಗೌಡಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.