ಹೂವಿನಹಡಗಲಿ (ವಿಜಯನಗರ ಜಿಲ್ಲೆ) : ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸದೇ, ಸಾರ್ವಜನಿಕ ಚರ್ಚೆಗೆ ಒಳಪಡಿಸದೇ ಸಂಪುಟ ಸಭೆಯಲ್ಲಿ ಮೀಸಲಾತಿ ವರ್ಗೀಕರಣಕ್ಕೆ ಅನುಮೋದನೆ ನೀಡುವ ಮೂಲಕ ಬಿಜೆಪಿ ಸರ್ಕಾರ ಸಂವಿಧಾನಕ್ಕೆ ಅಪಚಾರ ಎಸಗಿದೆ ಎಂದು ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಕಿಡಿಕಾರಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿಯ 101 ಉಪ ಜಾತಿಗಳ ಜನರು ಸಹೋದರರಂತೆ ಬದುಕಿದ್ದೇವೆ. ಒಳ ಮೀಸಲಾತಿ ವರದಿಯಲ್ಲಿ ಏನಿದೆ ಎಂಬುದನ್ನು ಸಾರ್ವಜನಿಕವಾಗಿ ಚರ್ಚಿಸದೇ, ಸ್ಥಿತಿಗತಿ ಅಧ್ಯಯನ ನಡೆಸದೇ ಅದರ ಅನುಷ್ಠಾನಕ್ಕೆ ಏಕಪಕ್ಷೀಯ ತೀರ್ಮಾನ ಕೈಗೊಂಡಿರುವ ಸರ್ಕಾರ ಪರಿಶಿಷ್ಟ ಸಮುದಾಯದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡಿದೆ ಎಂದು ಆರೋಪಿಸಿದರು.
ಹಿಂದೆ ಸಾಚಾರ್ ವರದಿ ಶಿಫಾರಸಿನಂತೆ ಮುಸ್ಲಿಮರಿಗೆ ‘2ಬಿ’ ಮೀಸಲಾತಿ ನೀಡಲಾಗಿತ್ತು. ಏಕಾಏಕಿ ಮುಸ್ಲಿಮರ ಮೀಸಲಾತಿ ರದ್ದುಪಡಿಸಿ ವೀರಶೈವರು, ಒಕ್ಕಲಿಗರಿಗೆ ಹಂಚಿಕೆ ಮಾಡಿರುವುದು ಸರಿಯಲ್ಲ. ವೀರಶೈವರಿಗೆ, ಒಕ್ಕಲಿಗರಿಗೆ ಮೀಸಲಾತಿ ನೀಡಲು ವಿರೋಧವಿಲ್ಲ. ಒಬ್ಬರ ರೊಟ್ಟಿ ಕಸಿದು ಮತ್ತೊಬ್ಬರಿಗೆ ನೀಡುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಮೀಸಲಾತಿಗಾಗಿ ಪಂಚಮಸಾಲಿ, ಕುರುಬ, ವಾಲ್ಮೀಕಿ ಸಮುದಾಯದ ಮಠಾಧೀಶರು ತೀವ್ರತರ ಹೋರಾಟ ನಡೆಸಿದ್ದಾರೆ. ಯಾವ ಸಮುದಾಯದ ಬೇಡಿಕೆಯನ್ನೂ ಈಡೇರಿಸದ ಸರ್ಕಾರ ಮೀಸಲಾತಿ ಕೇಳಿದವರೆಲ್ಲರ ತಲೆಗೆ ತುಪ್ಪ ಸವರಿ ಯಾಮಾರಿಸಿದೆ. ಚುನಾವಣೆ ಗಿಮಿಕ್ ಗಾಗಿ ಮಾಡಿರುವ ಮೀಸಲಾತಿ ತೀರ್ಮಾನಗಳು ಜಾರಿಯಾಗುವುದಿಲ್ಲ. ಮುಂಬರುವ ಕಾಂಗ್ರೆಸ್ ಸರ್ಕಾರ ಎಲ್ಲ ನ್ಯೂನತೆ ಸರಿಪಡಿಸಿ, ಎಲ್ಲರಿಗೂ ಸಾಮಾಜಿಕ ನ್ಯಾಯ ಒದಗಿಸಲಿದೆ ಎಂದು ಹೇಳಿದರು.
ಪುರಸಭೆ ಅಧ್ಯಕ್ಷ ಜ್ಯೋತಿ ಮಲ್ಲಣ್ಣ, ಉಪಾಧ್ಯಕ್ಷ ಎಸ್.ತಿಮ್ಮಣ್ಣ, ಮುಖಂಡರಾದ ಅಟವಾಳಗಿ ಕೊಟ್ರೇಶ, ಬಿ.ಹನುಮಂತಪ್ಪ, ಸಿ.ಚಾಂದಸಾಹೇಬ್, ಬಸವನಗೌಡ ಪಾಟೀಲ, ಸೋಗಿ ಹಾಲೇಶ, ಜಿ.ವಸಂತ, ಚಂದ್ರನಾಯ್ಕ, ಗುರುವಿನ ರವೀಂದ್ರ, ಬಿ.ಎಲ್.ಶ್ರೀಧರ, ಕೆ.ಎಸ್.ಶಾಂತನಗೌಡ, ಕೆ.ಗೌಸ್ ಮೊಹಿದ್ದೀನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.