ಹೊಸಪೇಟೆ (ವಿಜಯನಗರ): ‘ಪುರಂದರದಾಸರು ವಿಜಯನಗರದ ನೆಲದಲ್ಲಿ ಉಳಿದು ರಚಿಸಿದ ದಾಸರ ಪದಗಳು ಮನುಕುಲಕ್ಕೆ ದಾರಿದೀಪವಾಗಿವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಭಾಗಿತ್ವದಲ್ಲಿ ಮಂಗಳವಾರ ಸಂಜೆ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಪುರಂದರದಾಸರ ಆರಾಧನಾ ಉತ್ಸವ ಉದ್ಘಾಟಿಸಿ ಮಾತನಾಡಿದರು.
‘ದಾಸರ ಪರಂಪರೆಯಲ್ಲಿಯೇ ಪುರಂದರದಾಸರು ಶ್ರೇಷ್ಠ ದಾಸರು. ಬಿಡುವಿದ್ದಾಗ, ಬೇಸರವಾದಾಗ ಚಲನಚಿತ್ರ ಗೀತೆಗಳನ್ನು ಕೇಳುವುದರ ಬದಲು ದಾಸರ ಕೀರ್ತನೆಗಳನ್ನು ಆಲಿಸಬೇಕು’ ಎಂದು ಸಲಹೆ ಮಾಡಿದರು.
‘ಅಧ್ಯಾತ್ಮ, ಪರಂಪರೆ, ಸಂತರು, ವಚನಕಾರರ ನೆಲೆಬೀಡು ನಮ್ಮ ದೇಶ. ಇಡೀ ಜಗತ್ತು ನಮ್ಮ ದೇಶವನ್ನು ಕೊಂಡಾಡುತ್ತದೆ. ಅದರಲ್ಲಿ ವಿಜಯನಗರ ಸಾಮ್ರಾಜ್ಯಕ್ಕೆ ವಿಶೇಷ ಸ್ಥಾನಮಾನವಿದೆ. ಅದರ ವೈಭವ ಇಡೀ ಜಗತ್ತನ್ನು ಸೂಲಿಗಲ್ಲಿನಂತೆ ತನ್ನತ್ತ ಸೆಳೆದಿತ್ತು. ಇಂತಹ ಕಾರ್ಯಕ್ರಮದ ಮೂಲಕ ವಿಜಯನಗರದ ಪರಂಪರೆಯನ್ನು ತಿಳಿಸುವ ಕೆಲಸ ಮಾಡುತ್ತಿರುವುದು ಶ್ಲಾಘನಾರ್ಹ’ ಎಂದು ಹೇಳಿದರು.
ಪ್ರಾಧ್ಯಾಪಕ ಮಾನಕಾರಿ ಶ್ರೀನಿವಾಸಚಾರ್ಯ ವಿಶೇಷ ಉಪನ್ಯಾಸ ನೀಡಿ, ಪುರಂದರದಾಸರದ್ದು ಕನ್ನಡ ಮಾತೃಭಾಷೆ. ಆದರೆ, ಅವರಿಗೆ ಭಾಷೆಯ ಚೌಕಟ್ಟು ಇರಲಿಲ್ಲ. ಅವರ ಕೀರ್ತನೆಗಳನ್ನು ಸಂಗೀತ, ನೃತ್ಯದ ಎಲ್ಲ ಪ್ರಕಾರಗಳಲ್ಲಿ ಅಳವಡಿಸಿಕೊಳ್ಳಲಾಗಿದೆ ಎಂದರು.
ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಪಿ., ಎಸ್ಪಿ ಡಾ.ಕೆ.ಅರುಣ್, ಜಿಲ್ಲಾ ಪಂಚಾಯಿತಿ ಸಿಇಒ ಭೋಯರ್ ಹರ್ಷಲ್ ನಾರಾಯಣರಾವ, ಎಸಿ ಸಿದ್ದರಾಮೇಶ್ವರ, ಹೆಚ್ಚುವರಿ ಡಿ.ಸಿ. ಮಹೇಶಬಾಬು, ಕಮಲಾಪುರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸೈಯದ್ ಅಮಾನುಲ್ಲಾ, ಹಂಪಿ ಪಂಚಾಯಿತಿ ಸದಸ್ಯರಾದ ಸ್ವಾತಿ ಸಿಂಗ್, ಹನುಮಂತಪ್ಪ, ಧಾರ್ಮಿಕ ದತ್ತಿ ಇಲಾಖೆ ಮಂಡಳಿ ಸದಸ್ಯೆ ವಿಜಯಲಕ್ಷ್ಮಿ, ಇಲಾಖೆಯ ಸಹಾಯಕ ಆಯುಕ್ತ ಪ್ರಕಾಶ ರಾವ್, ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ವಿಶೇಷ ಸಹಾಯಕ ಅಧಿಕಾರಿ ಸುಳಾದಿ ಹನುಮೇಶ ಆಚಾರ್ಯ, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ, ತಹಶೀಲ್ದಾರ್ ಎಚ್. ವಿಶ್ವನಾಥ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ್ವರ ರಂಗಣ್ಣನವರ್ ಇದ್ದರು. ಕೊನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಆನಂದ್ ಸಿಂಗ್ ಗೈರು, ಸಚಿವೆ ಸಮಜಾಯಿಷಿ
ಸ್ವಕ್ಷೇತ್ರದಲ್ಲೇ ಏರ್ಪಡಿಸಿದ್ದ ಪುರಂದರದಾಸರ ಆರಾಧನಾ ಉತ್ಸವಕ್ಕೆ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಗೈರಾಗಿದ್ದರು. ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಬದಲಿಸಿರುವುದೇ ಅವರ ಮುನಿಸಿಗೆ ಕಾರಣ ಎನ್ನಲಾಗಿದೆ.
ಆದರೆ, ಈ ಕುರಿತು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಸಚಿವೆ ಶಶಿಕಲಾ ಜೊಲ್ಲೆ, ‘ಬಜೆಟ್ ಪೂರ್ವಭಾವಿ ಸಭೆ ಇದ್ದದ್ದರಿಂದ ಆನಂದ್ ಸಿಂಗ್ ಅವರು ಬರಲು ಆಗುವುದಿಲ್ಲ ಎಂದು ನನಗೆ ತಿಳಿಸಿದ್ದಾರೆ. ಆನಂದ್ ಸಿಂಗ್ ಅವರ ಶ್ರಮ, ಹೋರಾಟದಿಂದ ವಿಜಯನಗರ ಜಿಲ್ಲೆ ರಚನೆಯಾಗಿದೆ. ಎಲ್ಲ ಜನಪ್ರತಿನಿಧಿಗಳೊಂದಿಗೆ ಕೂಡಿಕೊಂಡು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ’ ಎಂದರು.
ಇಲ್ಲಿಗೆ ಬಂದ ಮೇಲೆ ಗಂಡನ ಮನೆಯಿಂದ ತವರು ಮನೆಗೆ ಬಂದ ಅನುಭವವಾಗಿದೆ. ‘ಎತ್ತಣ ಮಾಮರ, ಎತ್ತಣ ಕೋಗಿಲೆ’ ಎಂದು ವಚನ ಉಲ್ಲೇಖಿಸಿದ ಅವರು, ಬೆಳಗಾವಿ ನನ್ನ ಕಾರ್ಯಕ್ಷೇತ್ರ. ಅಲ್ಲಿಂದ ನಾನು ಇಲ್ಲಿಗೆ ಬರಲು ನನ್ನ ಪೂರ್ವಜನ್ಮದ ಪುಣ್ಯ. ಅನಾರೋಗ್ಯದಿಂದ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳಲು ಆಗಿರಲಿಲ್ಲ. ಆದರೆ, ನನ್ನ ಮನಸ್ಸು ಇಲ್ಲಿತ್ತು. ಅದಕ್ಕಾಗಿ ಎಲ್ಲರ ಕ್ಷಮೆ ಕೋರುವೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.