ADVERTISEMENT

ದರೋಜಿ ಕರಡಿಧಾಮದಲ್ಲಿ ಜಂಗಲ್ ಸಫಾರಿ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 20 ಏಪ್ರಿಲ್ 2021, 19:30 IST
Last Updated 20 ಏಪ್ರಿಲ್ 2021, 19:30 IST
ಹೊಸಪೇಟೆ ಸಮೀಪದ ದರೋಜಿ ಕರಡಿಧಾಮದ ನೋಟ
ಹೊಸಪೇಟೆ ಸಮೀಪದ ದರೋಜಿ ಕರಡಿಧಾಮದ ನೋಟ   

ಹೊಸಪೇಟೆ (ವಿಜಯನಗರ): ಇಲ್ಲಿಗೆ ಸಮೀಪದ ದರೋಜಿ ಕರಡಿಧಾಮದಲ್ಲಿ ಜಂಗಲ್‌ ಸಫಾರಿ ಆರಂಭಿಸಲು ಭರದ ಸಿದ್ಧತೆ ನಡೆದಿದೆ.

ಕರಡಿಧಾಮದಲ್ಲಿ ಸಫಾರಿಗೆ ಒಟ್ಟು 13 ಕಿ.ಮೀ ಮಾರ್ಗ ಗುರುತಿಸಲಾಗಿದೆ. ಈಗಾಗಲೇ ಮಣ್ಣಿನ ಕಚ್ಚಾ ರಸ್ತೆಯೂ ನಿರ್ಮಿಸಲಾಗಿದೆ. ಸುರಕ್ಷತೆ ಒಳಗೊಂಡ ಎರಡು ವಾಹನಗಳಲ್ಲಿ ಸಫಾರಿ ಮಾಡಬಹುದು. ಬೆಳಿಗ್ಗೆ ಮತ್ತು ಮಧ್ಯಾಹ್ನದ ವೇಳೆ ಸಫಾರಿಗೆ ಅವಕಾಶ ಕಲ್ಪಿಸಲು ಯೋಜಿಸಲಾಗಿದೆ. ಇನ್ನಷ್ಟೇ ಸಫಾರಿಗೆ ದರ ನಿಗದಿಯಾಗಬೇಕಿದೆ.

ದರೋಜಿ ಕರಡಿಧಾಮವು ಸಂಪೂರ್ಣವಾಗಿ ಬಂಡೆಗಲ್ಲುಗಳ ಬೆಟ್ಟ– ಗುಡ್ಡ, ಕುರುಚಲು ಕಾಡಿನಿಂದ ಕೂಡಿದೆ. ಪ್ರವಾಸಿಗರು ಹೆಚ್ಚಾಗಿ ದಟ್ಟ ಕಾನನದಲ್ಲಿ ಸಫಾರಿ ಮಾಡುತ್ತಾರೆ. ಕುರುಚಲು ಕಾಡಿನ ವಿಭಿನ್ನ ಅನುಭವ ಕಟ್ಟಿಕೊಡುವುದಕ್ಕಾಗಿಯೇ ದರೋಜಿಯಲ್ಲಿ ಸಫಾರಿ ಆರಂಭಿಸಲಾಗುತ್ತಿದೆ.

ADVERTISEMENT

ಕರಡಿಧಾಮವೆಂದರೆ ಕೇವಲ ಕರಡಿಗಳಿಗಷ್ಟೇ ಸೀಮಿತ ಎನ್ನುವ ಭಾವನೆ ಹಲವರಲ್ಲಿದೆ. ಅದನ್ನು ದೂರವಾಗಿಸಲೆಂದೆ ಈ ಯೋಜನೆ ರೂಪಿಸಲಾಗುತ್ತಿದೆ. ಪ್ರಾಣಿ, ಪಕ್ಷಿಗಳ ವೀಕ್ಷಣೆ, ನೇಚರ್‌ ಕ್ಯಾಂಪ್‌, ಕುರುಚಲು ಕಾಡಿನ ಮಹತ್ವ, ಅಲ್ಲಿ ಬೆಳೆಯುವ ಅಪರೂಪದ ಗಿಡ, ಮರಗಳ ಬಗ್ಗೆ ತಿಳಿಸುವುದು ಇದರ ಮುಖ್ಯ ಉದ್ದೇಶ.

‘27 ವರ್ಷಗಳ ಅವಧಿಯಲ್ಲಿ ದರೋಜಿ ಕರಡಿಧಾಮ ಸಮೃದ್ಧವಾಗಿ ಬೆಳೆದಿದೆ. 2019ರಲ್ಲಿ ಸರ್ಕಾರ ಧಾಮವನ್ನು ಪರಿಸರ ಸೂಕ್ಷ್ಮ ವಲಯವಾಗಿ ಘೋಷಿಸಿದ ನಂತರ ಎಲ್ಲ ರೀತಿಯ ಮಾನವ ಚಟುವಟಿಕೆಗಳಿಗೆ ತಡೆ ಬಿದ್ದಿದೆ. ಇಂಗುಗುಂಡಿ, ಬದು ನಿರ್ಮಾಣ, ಸಣ್ಣ ಕೆರೆಗಳ ಹೂಳು ತೆಗೆಸಿರುವುದರಿಂದ ಅಂತರ್ಜಲ ಹೆಚ್ಚಾಗಿದೆ. ಅರಣ್ಯೀಕರಣದಿಂದ ಇಡೀ ಪರಿಸರ ಹಸಿರಾಗಿದೆ. ಬೇರೆ ಅರಣ್ಯಗಳಂತೆ ಕುರುಚಲು ಕಾಡಿಗೂ ಅದರದೇ ಆದ ಮಹತ್ವ ಇರುತ್ತದೆ. ಸಫಾರಿ ಮೂಲಕ ಅದರ ಮಹತ್ವ ತಿಳಿಸಿಕೊಡಲು ಯೋಜಿಸಲಾಗಿದೆ’ ಎಂದು ವಲಯ ಅರಣ್ಯ ಅಧಿಕಾರಿ ಉಷಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಧಾಮವು ಕರಡಿ, ಗುಳ್ಳೇನರಿ, ಕಾಡು ಹಂದಿ, ಮೊಲ ಸೇರಿದಂತೆ ಇತರೆ ಪ್ರಾಣಿಗಳ ನೆಲೆಬೀಡಾಗಿದೆ. 180 ಜಾತಿಯ ಪಕ್ಷಿಗಳು, 50 ಬಗೆಯ ಸರೀಸೃಪಗಳಿವೆ. ಉಲುಪಿ, ಕಾರೆ, ಕವಳೆ, ಬಾರೆ, ಜಾನೆ, ಕಕ್ಕೆ, ಗೊರವಿ, ಸೀತಾಫಲ ಸೇರಿ 28 ಜಾತಿಯ ಗಿಡ ಮರಗಳಿವೆ. ಹೊರಗಿನವರಿಗೆ ಇದೆಲ್ಲ ಗೊತ್ತು ಮಾಡಿಸುವುದು ಸಫಾರಿಯ ಮುಖ್ಯ ಉದ್ದೇಶ’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.