ಹೊಸಪೇಟೆ (ವಿಜಯನಗರ): ಹಂಪಿಯ ವಿಜಯ ವಿಠ್ಠಲ ದೇವಸ್ಥಾನದ ಸಂಗೀತ ಮಂಟಪದಲ್ಲಿನ ಶಿಲಾ ಕಂಬಗಳನ್ನು ಮೀಟಿದರೆ ಬರುವ ಸಂಗೀತ ತರಂಗವನ್ನು ಈಗ ಕ್ಯೂಅರ್ ಕೋಡ್ ಸ್ಕ್ಯಾನ್ ಮಾಡಿಯೂ ಆಲಿಸಬಹುದು.
ಕಂಬಗಳನ್ನು ನಿರಂತರ ಮೀಟಿದರೆ, ಅವು ಶಿಥಿಲಗೊಳ್ಳುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ 2008ರಿಂದ ಸಂಗೀತ ಮಂಟಪದಲ್ಲಿ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿದೆ. ಅದಕ್ಕೆ ಈಗ ಕ್ಯುಆರ್ ಕೋಡ್‌ನ ವ್ಯವಸ್ಥೆ ಮಾಡಲಾಗಿದೆ. ಅದನ್ನು ಸ್ಯಾನ್ ಮಾಡಿದರೆ, ಕಂಬಗಳನ್ನು ಮೀಟಿದರೆ ಬರುವ ಸಂಗೀತವನ್ನು ಆಲಿಸಬಹುದು.
‘ಸದ್ಯ ಹತ್ತು ಕಂಬಗಳ ತಳಭಾಗದಲ್ಲಿ ಪ್ರವಾಸಿಗರಿಗೆ ಎಟುಕುವ ಎತ್ತರದಲ್ಲಿ ಕ್ಯೂಆರ್ ಕೋಡ್ ಅಳವಡಿಸಲಾಗಿದೆ. ಪ್ರವಾಸಿಗರ ಅನುಭವ, ಬೇಡಿಕೆ ನೋಡಿ ಎಲ್ಲಾ 46 ಕಂಬಗಳ ತಳಭಾಗದಲ್ಲಿ ಕ್ಯೂಆರ್ ಕೋಡ್ ಅಳವಡಿಸುವ ಚಿಂತನೆ ಇದೆ’ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ಹಂಪಿ ವೃತ್ತದ ಅಧೀಕ್ಷಕ ನಿಹಿಲ್ ದಾಸ್ ತಿಳಿಸಿದರು.
25 ಸೆಕೆಂಡ್ ಸಂಗೀತ: ‘ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ, 25 ಸೆಕೆಂಡ್ ಸಂಗೀತ ಆಲಿಸಬಹುದು. ಹಂಪಿಯ ಕಲ್ಲಿನ ಕಂಬಗಳು ಸಂಗೀತ ಹೊಮ್ಮಿಸುತ್ತಿದ್ದವು ಎಂಬ ಇತಿಹಾಸದ ಪಾಠಕ್ಕೆ ಇದೀಗ ಡಿಜಿಟಲ್ ಸ್ಪರ್ಶ ನೀಡಿದಂತಾಗಿದೆ’ ಎಂದು ಇಲಾಖೆಯ ಸಂರಕ್ಷಣಾ ಸಹಾಯಕ ಅನಿರುದ್ಧ ದೇಸಾಯಿ ತಿಳಿಸಿದರು.
‘ಹಂಪಿಗೆ ಅತಿ ಹೆಚ್ಚು ಪ್ರವಾಸಿಗರು ಬರುತ್ತಿದ್ದು, ಅವರಿಗೆ ಈ ಹೊಸ ಸೌಲಭ್ಯದಿಂದ ಖುಷಿಯಾಗಲಿದೆ. ಅವರಿಗೆ ವಿಶಿಷ್ಟ ಸಂಗೀತದ ಪರಿಚಯವಾಗುತ್ತದೆ’ ಎಂದು ಕರ್ನಾಟಕ ರಾಜ್ಯ ಪ್ರವಾಸಿ ಮಾರ್ಗದರ್ಶಿಗಳ ಸಂಘದ ಪ್ರಧಾನ ಕಾರ್ಯದರ್ಶಿ ವಿರೂಪಾಕ್ಷಿ ವಿ.ಹಂಪಿ ತಿಳಿಸಿದರು.
ತಂತಿಯ ರೂಪದಲ್ಲಿ ಕಲ್ಲಿನ ಸರಳು ತಂತಿ ಮೀಟಿದರೆ ಮಾತ್ರ ಸಂಗೀತ ಅದೇ ರೀತಿಯಲ್ಲಿ ಬೃಹತ್ ಕಲ್ಲಿನಲ್ಲಿ ವಿವಿಧ ಆಕಾರದ ತಂತಿ ಮಾದರಿಯಲ್ಲಿ ಸರಳುಗಳನ್ನು ಕೊರೆದು ಈ ಸಂಗೀತ ಕಂಬಗಳ ರಚನೆಯಾಗಿದೆ. ವಿಜಯನಗರ ಕಾಲದಲ್ಲಿ ಈ ಮಂಟಪದಲ್ಲಿ ಇಂತಹ 56 ಕಂಬಗಳಿದ್ದವು. 1565ರಲ್ಲಿ ತಾಳಿಕೋಟೆ ಕದನದ ಬಳಿಕ ಬಹುಮನಿ ಸುಲ್ತಾನದ ದಾಳಿಗೆ ಒಳಗಾದ ಈ ಮಂಟಪದ ಚಾವಣಿ 10 ಸಂಗೀತ ಕಂಬಗಳು ದ್ವಂಸವಾದವು. ಬಳಿಕ 450 ವರ್ಷಗಳಿಂದಲೂ ಅದೇ ಸ್ಥಿತಿಯಲ್ಲಿ ಇದ್ದು ಕಂಬಗಳನ್ನು ಸಂರಕ್ಷಿಸುವ ಕೆಲಸ ಎಎಸ್ಐ ವತಿಯಿಂದ ನಡೆದಿದೆ. ಫೈಬರ್ ಚಾವಣಿ ಅಳವಡಿಸುವ ಚಿಂತನೆಯೂ ಇದೆ. ಸದ್ಯ ಡಿಜಿಟಲ್ ಮಾದರಿಯಲ್ಲಿ ಸಂಗೀತ ಕೇಳುವ ವ್ಯವಸ್ಥೆ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.