ಹೊಸಪೇಟೆ (ವಿಜಯನಗರ): ವಿಜಯನಗರ ಜಿಲ್ಲೆಯ ಕೂಡ್ಲಿಗಿ, ಹೊಸಪೇಟೆ, ಹಗರಿಬೊಮ್ಮನಹಳ್ಳಿ ಸಹಿತ ಕೆಲವೆಡೆ ಶುಕ್ರವಾರ ಮಧ್ಯರಾತ್ರಿ ಯಿಂದ ಬಿಟ್ಟು ಬಿಟ್ಟು ಬಿರುಸಿನ ಮಳೆ ಸುರಿದಿದೆ.
ಶನಿವಾರ ಬೆಳಿಗ್ಗೆಯ ವರೆಗೂ ಜಿಟಿ ಜಿಟಿ ಮಳೆ ಸುರಿಯುತ್ತಿದ್ದುದರಿಂದ ಜನಜೀವನಕ್ಕೆ ಕೊಂಚ ಅಡಚಣೆ ಉಂಟಾಯಿತು.
ಕೂಡ್ಲಿಗಿ ದೊಡ್ಡಕೆರೆ ತುಂಬಿ ಕೋಡಿ ಬಿದ್ದಿದ್ದು, ನಯನ ಮನೋಹರ ದೃಶ್ಯ ಸೃಷ್ಟಿಯಾಗಿದೆ.
ಹೊಸಹಳ್ಳಿಯಲ್ಲಿ 11.7 ಸೆಂ.ಮೀ,, ಗುಡೇಕೋಟೆಯಲ್ಲಿ 9.34 ಸೆಂ.ಮೀ. ಸಹಿತ ಕೂಡ್ಲಿಗಿ ತಾಲ್ಲೂಕಿನಲ್ಲಿ ಸರಾಸರಿ 9.04 ಸೆಂ.ಮೀ.ಮಳೆಯಾಗಿದೆ.
ಜಿಲ್ಲೆಯಲ್ಲಿ ಮಳೆಯಾಶ್ರಿತ ಕೃಷಿಯೇ ಒಟ್ಟು ಬೆಳೆ ಪ್ರದೇಶದ ಮುಕ್ಕಾಲು ಭಾಗದಷ್ಟಿದೆ. ಈ ಬಾರಿ ಮುಂಗಾರು ಉತ್ತಮವಾಗಿತ್ತು. ಆದರೆ ಕೆಲವೆಡೆ ರೈತರು ಮಳೆಯನ್ನು ನೋಡಿಕೊಂಡು ವಿಳಂಬವಾಗಿ ಬಿತ್ತನೆ ಮಾಡಿದ್ದರು. ಈಚಿನ ಕೆಲವು ದಿನಗಳಿಂದ ಮಳೆ ಇಲ್ಲದ ಕಾರಣ ಮೆಕ್ಕೆಜೋಳದಂತಹ ಬೆಳೆಗಳು ಒಣಗಿ ರೈತರಿಗೆ ಆತಂಕ ತಂದಿತ್ತು, ಅಂತಹ ರೈತರಿಗೆ ಈ ಮಳೆ ವರದಾನವಾಗಿ ಪರಿಣಮಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.