ADVERTISEMENT

ವಿಜಯನಗರ | ಕೊಟ್ಟೂರಿನಲ್ಲಿ ಹರ್ಷ ತಂದ ವರ್ಷಧಾರೆ

​ಪ್ರಜಾವಾಣಿ ವಾರ್ತೆ
Published 15 ಮೇ 2024, 13:49 IST
Last Updated 15 ಮೇ 2024, 13:49 IST
   

ಕೊಟ್ಟೂರು (ವಿಜಯನಗರ ಜಿಲ್ಲೆ): ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಗುಡುಗು ಸಿಡಿಲಿನೊಂದಿಗೆ ಬುಧವಾರ ಮಧ್ಯಾಹ್ನ ಒಂದು ಗಂಟೆಗೂ ಹೆಚ್ಚು ಹೊತ್ತು ಸುರಿದ ಮಳೆ ಜನರ ಸಂಭ್ರಮಕ್ಕೆ ಕಾರಣವಾಯಿತು. ಕಳೆದೊಂದು ವಾರದಿಂದ ಬಿಸಿಲಿನ ತಾಪಕ್ಕೆ ತತ್ತರಿಸಿದ್ದ ಜನತೆ ನಿಟ್ಟುಸಿರು ಬಿಟ್ಟರು.

ಬಸ್ ನಿಲ್ದಾಣದ ಮುಂಭಾಗದಲ್ಲಿರುವ ರಾಜಕಾಲುವೆ ತುಂಬಿ ಹರಿದ ಪರಿಣಾಮ ನಿಲ್ದಾಣ ಸಂಪೂರ್ಣ ಮಳೆ ನೀರು ಹಾಗೂ ತ್ಯಾಜ್ಯದಿಂದ ಆವೃತವಾಯಿತು. ಪ್ರಯಾಣಿಕರು ನಿಲ್ದಾಣದಲ್ಲಿ ಲಗೇಜ್‌ಗಳೊಂದಿಗೆ ಮಕ್ಕಳನ್ನು ಎತ್ತಿಕೊಂಡು ಹರಸಾಹಸ ಪಟ್ಟು ಹೊರಬಂದರು. ಸಮುದಾಯ ಆರೋಗ್ಯ ಕೇಂದ್ರದಲ್ಲಿಯೂ ಮಳೆ ನೀರು ನುಗ್ಗಿದ್ದರಿಂದ ಚಿಕಿತ್ಸೆಗೆ ಬಂದಿದ್ದ ಜನತೆಗೆ ತೊಂದರೆ ಉಂಟಾಯಿತು.

ಗಾಳಿಯ ಹೊಡೆತಕ್ಕೆ ಕೆಲವು ಕಡೆ ಮರಗಳು ವಿದ್ಯುತ್ ತಂತಿಗಳ ಮೇಲೆ ಉರುಳಿದ ಪರಿಣಾಮ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿರುವುದು ಬಿಟ್ಟರೆ ಇತರ ದೊಡ್ಡ ಅನಾಹುತ ಸಂಭವಿಸಿಲ್ಲ.

ADVERTISEMENT

ಕೃಷಿ ಚಟುವಟಿಕೆಗೆ ಸಿದ್ಧತೆ: 

ಈ ಬಾರಿ ಬಿತ್ತನೆಗೆ ಸರಿಯಾದ ಸಮಯಕ್ಕೆ ಉತ್ತಮ ಮಳೆಯಾಗಿದ್ದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಜಮೀನುಗಳನ್ನು ಹಸನು ಮಾಡಿ ಬಿತ್ತನೆಗೆ ಅಣಿಮಾಡಿಕೊಳ್ಳಲು ಸಜ್ಜಾಗುತ್ತಿದ್ದಾರೆ. ಬಿತ್ತನೆಗೆ ಬೇಕಾದ ಬೀಜ, ರಸಗೊಬ್ಬರಗಳ ಖರೀದಿಗೆ ಅಂಗಡಿಗಳ ಮುಂದೆ ಮುಗಿಬಿದ್ದಿರುವುದು ಎಲ್ಲೆಡೆ ಕಂಡು ಬಂದಿತು. ರೈತ ಸಂಪರ್ಕ ಕೇಂದ್ರದಲ್ಲಿ ರೈತರು ಸರತಿ ಸಾಲಿನಲ್ಲಿ ನಿಂತು ಬೀಜ ರಸಗೊಬ್ಬರಗಳ ಖರೀದಿಗೆ ಮುಂದಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.