ಹೊಸಪೇಟೆ (ವಿಜಯನಗರ): ನಗರ ಹೊರವಲಯದ ಜಂಬುನಾಥಹಳ್ಳಿ ಬಳಿಯಿರುವ ಸರ್ಕಾರಕ್ಕೆ ಸೇರಿದ ಐದು ಎಕರೆ ಜಾಗವನ್ನು ರಾಷ್ಟ್ರೋತ್ಥಾನ ಪರಿಷತ್ತಿಗೆ ಪರಭಾರೆ ಮಾಡುವುದಕ್ಕೆ ಕಾನೂನು ಇಲಾಖೆ ಆಕ್ಷೇಪ ಎತ್ತಿದ್ದರೂ ಅದನ್ನು ಆ ಸಂಸ್ಥೆಗೆ ಕೊಡಲು ಸರ್ಕಾರ ಮುಂದಾಗಿದೆ.
ರಾಷ್ಟ್ರೋತ್ಥಾನ ಪರಿಷತ್, ರಾಜ್ಯದ ವಿವಿಧ ಕಡೆಗಳಲ್ಲಿ ಶೈಕ್ಷಣಿಕ ಸಂಸ್ಥೆಗಳನ್ನು ನಡೆಸುತ್ತಿದೆ. ನಗರದಲ್ಲೂ ಶೈಕ್ಷಣಿಕ ಚಟುವಟಿಕೆಗಳಿಗೆ ಐದು ಎಕರೆ ಜಮೀನು ಮಂಜೂರು ಮಾಡಿಕೊಡಬೇಕೆಂದು ಜಿಲ್ಲಾಡಳಿತಕ್ಕೆ ಕೋರಿಕೆ ಸಲ್ಲಿಸಿತ್ತು. ಜಿಲ್ಲಾಡಳಿತವು ಅದನ್ನು ಸರ್ಕಾರಕ್ಕೆ ಕಳಿಸಿತ್ತು. ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಕಾನೂನು ಇಲಾಖೆಯ ಅನುಮೋದನೆಗೆ ಕಡತ ಕಳಿಸಿಕೊಟ್ಟಿದ್ದರು. ಆದರೆ, ಕಾನೂನು ಇಲಾಖೆ ಅದಕ್ಕೆ ಅವಕಾಶ ಇಲ್ಲ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದೆ.
‘ಹೊಸಪೇಟೆ ತಾಲ್ಲೂಕಿನ ಜಂಬುನಾಥಹಳ್ಳಿ ಗ್ರಾಮದ ಸರ್ವೇ ನಂಬರ್ 105ರಲ್ಲಿನ ಜಮೀನು ನಗರ ವ್ಯಾಪ್ತಿಯಲ್ಲಿ ಇರುವುದರಿಂದ ಮತ್ತು ರಾಷ್ಟ್ರೋತ್ಥಾನ ಪರಿಷತ್ ಖಾಸಗಿ ಸಂಸ್ಥೆಯಾಗಿರುವ ಕಾರಣ, ಭೂ ಮಂಜೂರಾತಿ ನಿಯಮಗಳು, 1969 ನಿಯಮ22–ಎ(2) ಅನ್ವಯ ಪ್ರಸ್ತಾಪಿತ ಜಮೀನು ಮಂಜೂರು ಮಾಡಲು ಅವಕಾಶ ಇರುವುದಿಲ್ಲ’ ಎಂದು ಕಾನೂನು ಇಲಾಖೆ ತಿಳಿಸಿದೆ. ಅದರ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.
‘ರಾಷ್ಟ್ರೋತ್ಥಾನ ಪರಿಷತ್ ಹಿಂದುತ್ವದ ಅಜೆಂಡಾ ಇಟ್ಟುಕೊಂಡು ಕೆಲಸ ಮಾಡುತ್ತಿರುವ ಸಂಸ್ಥೆ. ಅದಕ್ಕೆ ಯಾವುದೇ ಕಾರಣಕ್ಕೂ ಸರ್ಕಾರಿ ಜಮೀನು ನೀಡಬಾರದು. ಶೈಕ್ಷಣಿಕ ಕ್ಷೇತ್ರದಲ್ಲಿ ಸಾಮಾಜಿಕ ಕಾಳಜಿಯಿಂದ ಕೆಲಸ ನಿರ್ವಹಿಸುತ್ತಿರುವ ಸಂಸ್ಥೆಗಳಿಗೆ ಕೊಡಬಹುದು ಅಥವಾ ಸ್ವತಃ ಜಿಲ್ಲಾಡಳಿತವೇ ಅಲ್ಲಿ ಮಹಿಳಾ ಕಾಲೇಜು, ನಗರಕ್ಕೆ ಬೇಕಿರುವ ಶೈಕ್ಷಣಿಕ ಸಂಸ್ಥೆ ಆರಂಭಿಸಬಹುದು’ ಎಂದು ಸಾಮಾಜಿಕ ಹೋರಾಟಗಾರ ಸೋಮಶೇಖರ್ ಬಣ್ಣದಮನೆ ಅಭಿಪ್ರಾಯ ಪಟ್ಟಿದ್ದಾರೆ.
‘ರಾಷ್ಟ್ರೋತ್ಥಾನ ಪರಿಷತ್ತು ಸಾವಿರಾರು ಕೋಟಿ ಮೌಲ್ಯದ ಆಸ್ತಿ ಹೊಂದಿರುವ ಸಂಸ್ಥೆ. ಒಂದುವೇಳೆ ಶೈಕ್ಷಣಿಕ ಉದ್ದೇಶಕ್ಕಾಗಿ ಜಮೀನು ನೀಡಬೇಕಿದ್ದರೆ ಬಡವರ ಪರ, ಕಾಳಜಿಯಿಂದ ಕೆಲಸ ಮಾಡುತ್ತಿರುವವರಿಗೆ ಕೊಡಬೇಕು. ಹೊಸಪೇಟೆ ತಾಲ್ಲೂಕಿನಲ್ಲಿ ಸಾವಿರಾರು ನಿವೇಶನ ರಹಿತರು ಇದ್ದಾರೆ. ನಿವೇಶನಗಳನ್ನು ಮಾಡಿ, ಬಡ ಕೂಲಿಕಾರರಿಗೆ ಕೊಡಬೇಕು. ಹಲವು ದಶಕಗಳ ಬೇಡಿಕೆ ಈಡೇರಿಸಿದಂತಾಗುತ್ತದೆ’ ಎಂದು ಸಾಮಾಜಿಕ ಹೋರಾಟಗಾರ ಮರಡಿ ಜಂಬಯ್ಯ ನಾಯಕ ಪ್ರತಿಕ್ರಿಯಿಸಿದ್ದಾರೆ.
ಜಿಲ್ಲಾಧಿಕಾರಿ ಏನಂತಾರೆ?
‘ಖಾಸಗಿ ಸಂಸ್ಥೆಗಳಿಗೆ ಸರ್ಕಾರದ ಜಮೀನು ಕೊಡಬಹುದು. ಆದರೆ, ಅವುಗಳ ಆರ್ಥಿಕ ಚಟುವಟಿಕೆಗಳನ್ನು ನೋಡಿಕೊಂಡು ನಿರ್ಧರಿಸಲಾಗುತ್ತದೆ. ಐದು ಎಕರೆ ಜಮೀನು ಬೇಕೆಂದು ಮನವಿ ಕೊಟ್ಟಿದ್ದಾರೆ. ಸರ್ಕಾರಕ್ಕೆ ಪ್ರಸ್ತಾವ ಕಳಿಸಲಾಗಿದೆ. ಸರ್ಕಾರವೇ ಅದರ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ’ ಎಂದು ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಪಿ. ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.
ಜಮೀನಿನ ಸುತ್ತ:ಜಂಬುನಾಥಹಳ್ಳಿ ಗ್ರಾಮದ ಸರ್ವೇ ನಂಬರ್ 105ರಲ್ಲಿ ಒಟ್ಟು 28.17 ಎಕರೆ ಜಮೀನಿದೆ. ಈ ಪೈಕಿ ವಾಷಿಂಗ್ ಪ್ಲಾಂಟ್ ಗಾಗಿ 6 ಎಕರೆ ಜಮೀನು ಜಿಲ್ಲಾಧಿಕಾರಿಗಳ ಹೆಸರಿನಲ್ಲಿದೆ. ಮಿಕ್ಕುಳಿದ ಜಮೀನು ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಟ್ಟಡ ನಿರ್ಮಾಣದ ಉದ್ದೇಶಕ್ಕಾಗಿ ಆ ಇಲಾಖೆಯ ಜಿಲ್ಲಾ ಅಧಿಕಾರಿ ಹೆಸರಲ್ಲಿ ನಮೂದಾಗಿದೆ. ಒಟ್ಟು 28.17 ಎಕರೆ ಜಮೀನಿನಲ್ಲಿ ಐದು ಎಕರೆ ಜಮೀನು ಶೈಕ್ಷಣಿಕ ಚಟುವಟಿಕೆಗಳಿಗೆ ತನಗೆ ಕೊಡಬೇಕೆಂದು ರಾಷ್ಟ್ರೋತ್ಥಾನ ಪರಿಷತ್ ಕೋರಿಕೆ ಸಲ್ಲಿಸಿದೆ.
*
ರಾಷ್ಟ್ರೋತ್ಥಾನ ಪರಿಷತ್ ಒಂದು ನಿರ್ದಿಷ್ಟ ಧರ್ಮದ ಸಿದ್ಧಾಂತ ಇಟ್ಟುಕೊಂಡು ಕೆಲಸ ನಿರ್ವಹಿಸುತ್ತಿರುವ ಸಂಸ್ಥೆ. ಅದಕ್ಕೆ ಜಮೀನು ಕೊಡುವುದು ಸರಿಯಲ್ಲ.
–ಸೋಮಶೇಖರ್ ಬಣ್ಣದಮನೆ, ಸಾಮಾಜಿಕ ಹೋರಾಟಗಾರ
*
ರಾಷ್ಟ್ರೋತ್ಥಾನ ಪರಿಷತ್ತಿನ ಹೆಸರಿನಲ್ಲಿ ಸರ್ಕಾರಿ ಜಮೀನು ಪಡೆದು ತನ್ನ ಕಾರ್ಯಚಟುವಟಿಕೆಗಳನ್ನು ವಿಜಯನಗರದಲ್ಲಿ ವಿಸ್ತರಿಸುವ ಆರ್.ಎಸ್.ಎಸ್. ಯೋಜನೆಯಿದು.
–ಮರಡಿ ಜಂಬಯ್ಯ ನಾಯಕ, ಸಾಮಾಜಿಕ ಹೋರಾಟಗಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.