ADVERTISEMENT

ರಥಸಪ್ತಮಿ: ಹೊಸಪೇಟೆಯಲ್ಲಿ 108 ಬಾರಿ ಸೂರ್ಯ ನಮಸ್ಕಾರ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2024, 4:14 IST
Last Updated 16 ಫೆಬ್ರುವರಿ 2024, 4:14 IST
<div class="paragraphs"><p>ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ&nbsp;ಸೂರ್ಯ ನಮಸ್ಕಾರ ಮಾಡಲಾಯಿತು&nbsp;</p></div>

ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಸೂರ್ಯ ನಮಸ್ಕಾರ ಮಾಡಲಾಯಿತು 

   

ಹೊಸಪೇಟೆ (ವಿಜಯನಗರ): ರಥಸಪ್ತಮಿ ಪ್ರಯುಕ್ತ ಪತಂಜಲಿ ಯೋಗ ಸಮಿತಿ ವತಿಯಿಂದ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಶುಕ್ರವಾರ ಬೆಳಿಗ್ಗೆ 108 ಬಾರಿ ಸೂರ್ಯ ನಮಸ್ಕಾರ ಮಾಡಲಾಯಿತು.

ಯುವ ಭಾರತ ರಾಜ್ಯ ಪ್ರಭಾರಿ ಕಿರಣ್‌ ಕುಮಾರ್‌ ಮಾರ್ಗದರ್ಶನದಲ್ಲಿ 130ಕ್ಕೂ ಅಧಿಕ ಮಂದಿ ಸೂರ್ಯ ನಮಸ್ಕಾರದಲ್ಲಿ ಪಾಲ್ಗೊಂಡರು. ಈ ಪೈಕಿ 36 ಮಂದಿ ಸಂಪೂರ್ಣ 108 ಬಾರಿ ಸೂರ್ಯ ನಮಸ್ಕಾರ ಮಾಡಿದರು. ಹಿರಿಯ ಯೋಗ ಸಾಧಕಿ ಪೂಜಾ ಐಲಿ ಸಹ ಮಾರ್ಗದರ್ಶನ ನೀಡಿದರು.

ADVERTISEMENT

‘ಪ್ರತಿದಿನ ಸೂರ್ಯ ನಮಸ್ಕಾರ ಮಾಡುವುದರಿಂದ ದೇಹ, ಮನಸ್ಸು ಉಲ್ಲಸಿತಗೊಳ್ಳುತ್ತದೆ. ಹಲವಾರು ಆಸನಗಳು ಈ ಒಂದು ಸೂರ್ಯ ನಮಸ್ಕಾರದಲ್ಲಿ ಇರುವುದು ವಿಶೇಷ. ಇದನ್ನು ಮನೆಯಲ್ಲಿ ಕನಿಷ್ಠ 12 ಬಾರಿ ಮಾಡುವ ಅಭ್ಯಾಸವನ್ನು ಎಲ್ಲರೂ ರೂಢಿಸಿಕೊಳ್ಳಬೇಕು’ ಎಂದು ಕಿರಣ್‌ ಕುಮಾರ್ ಸಲಹೆ ನೀಡಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೂ ಆಗಿರುವ ಹಿರಿಯ ಯೋಗ ಸಾಧಕ ಮತ್ತು ವಿಜಯನಗರ ಜಿಲ್ಲಾ ಪ್ರಭಾರಿ ಪ್ರೊ.ಎಫ್‌.ಟಿ. ಹಳ್ಳಿಕೇರಿ ಅವರು ಕೊನೆಯಲ್ಲಿ ಯೋಗ ಸಾಧಕರನ್ನು ಅಭಿನಂದಿಸಿ, ಸೂರ್ಯ ನಮಸ್ಕಾರದ ಮಹತ್ವವನ್ನು ತಿಳಿಸಿದರು. ಹಿರಿಯ ಯೋಗ ಗುರುಗಳಾದ ಅಶೋಕ್ ಚಿತ್ರಗಾರ್‌, ಶ್ರೀಧರ್‌, ಶಿವಮೂರ್ತಿ, ಮಲ್ಲಿಕಾರ್ಜುನ, ಶ್ರೀನಿವಾಸ ಮಂಚಿಕಟ್ಟಿ ಇತರರು ಇದ್ದರು.

ಹೊಸಪೇಟೆ ನಗರದಲ್ಲಿ ಸುಮಾರು 28 ಸ್ಥಳಗಳಲ್ಲಿ ಪತಂಜಲಿ ಯೋಗ ಸಮಿತಿಯ ವತಿಯಿಂದ ಉಚಿತ ಯೋಗ ಶಿಬಿರ ನಡೆಯುತ್ತಿದ್ದು, ಅಲ್ಲಿನ ಯೋಗ ಸಾಧಕರೂ ಸ್ವಾತಂತ್ರ್ಯ ಉದ್ಯಾನಕ್ಕೆ ಬಂದು ಸಾಮೂಹಿಕ ಸೂರ್ಯ ನಮಸ್ಕಾರದಲ್ಲಿ ಪಾಲ್ಗೊಂಡರು. ಕಾರ್ಯಕ್ರಮದ ಆರಂಭದಿಂದ ಅಂತ್ಯದವರೆಗೂ ಸಸ್ಯ ವಿಜ್ಞಾನಿ ಮಾರುತಿ ಪೂಜಾರ್ ಅಗ್ನಿಹೋತ್ರ ನಡೆಸಿಕೊಟ್ಟರು.

ಯುವ ಸ್ಫೂರ್ತಿ: ಸಾಮೂಹಿಕ ಯೋಗ ಶಿಬಿರದಲ್ಲಿ ಮಕ್ಕಳು, ಯುವಕ, ಯುವತಿಯರೂ ಪಾಲ್ಗೊಂಡಿದ್ದರು. ಸತತ 108 ಸೂರ್ಯ ನಮಸ್ಕಾರ ಮಾಡಿ ಗಮನ ಸೆಳೆದ ಬಾಲಕ ಆರ್ಯ ಮತ್ತು ಕಾಲೇಜು ವಿದ್ಯಾರ್ಥಿ ಅರ್ಜುನ್‌ ಅವರನ್ನು ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.