ADVERTISEMENT

ಸಂಭ್ರಮದಿಂದ ರೇಣುಕಾಚಾರ್ಯರ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2023, 13:52 IST
Last Updated 12 ಮಾರ್ಚ್ 2023, 13:52 IST
ರೇಣುಕಾಚಾರ್ಯರ ಜಯಂತಿ ಅಂಗವಾಗಿ ಅವರ ಭಾವಚಿತ್ರದ ಮೆರವಣಿಗೆ ಹೊಸಪೇಟೆಯಲ್ಲಿ ಭಾನುವಾರ ನಡೆಯಿತು
ರೇಣುಕಾಚಾರ್ಯರ ಜಯಂತಿ ಅಂಗವಾಗಿ ಅವರ ಭಾವಚಿತ್ರದ ಮೆರವಣಿಗೆ ಹೊಸಪೇಟೆಯಲ್ಲಿ ಭಾನುವಾರ ನಡೆಯಿತು   

ಹೊಸಪೇಟೆ (ವಿಜಯನಗರ): ಬೇಡ ಜಂಗಮ ಹಾಗೂ ವೀರಶೈವ ಲಿಂಗಾಯತ ಸಮಾಜದಿಂದ ನಗರದಲ್ಲಿ ಭಾನುವಾರ ರೇಣುಕಾಚಾರ್ಯ ಜಯಂತಿಯನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

ನಗರದ ಸಣ್ಣಕ್ಕಿ ವೀರಭದ್ರೇಶ್ವರ ದೇವಸ್ಥಾನದ ಬಳಿ ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಅವರು ಮೆರವಣಿಗೆಗೆ ಚಾಲನೆ ನೀಡಿದರು. ಅನಂತರ ನಗರದ ಪ್ರಮುಖ ಮಾರ್ಗಗಳಲ್ಲಿ ರೇಣುಕಾಚಾರ್ಯರ ಭಾವಚಿತ್ರದ ಮೆರವಣಿಗೆ ನಡೆಯಿತು.

ನಂತರ ನಗರದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಎಮ್ಮಿಗನೂರು ಮಹಾಂತರಮಠದ ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ, ನಿಂದಿಸಲ್ಲ ಬಂಧಿಸಲ್ಲ, ಸರ್ವರನ್ನು ವಂದಿಸುವ ಧರ್ಮ ಯಾವುದಾದರೂ ಈ ಭೂಮಿ ಮೇಲೆ ಇದ್ದರೆ ಅದು ವೀರಶೈವ ಧರ್ಮ ತಿಳಿಸಿದರು.

ADVERTISEMENT

ಜುಟ್ಟು, ಜನಿವಾರ, ಶಿವದಾರ, ಗಡ್ಡ ಇದ್ದವರನ್ನು, ಅಂಬರದಿಂದ ದಿಗಂಬರದವರೆಗೂ ಸರ್ವರನ್ನು ಪ್ರೀತಿಸುವ, ಶತ್ರುವಿಲ್ಲದ ಶತ್ರುವಾಗದ, ಸಕಲ ಕೃತ್ರುಗಳನ್ನು ಪಿತೃವೆನ್ನುವ ಅಜಾತಶತ್ರು ಈ ವೀರಶೈವ ಧರ್ಮ. ಪಂಚಮಸಾಲಿ, ಕುಂಬಾರ, ಕಮ್ಮಾರ, ಬಲಿಜ ಸೇರಿದಂತೆ 108 ಜಾತಿಗಳನ್ನೊಳಗೊಂಡ ಧರ್ಮವಿದು. ಕಾಯಕ ದಾಸೋಹದ ತತ್ವದಡಿಯಲ್ಲಿ ಸಕಲರ ಲೇಸನ್ನೇ ಬಯಸುತ್ತದೆ ಎಂದರು.

ಹಾಸ್ಯ ಕಲಾವಿದೆ ಇಂದೂಮತಿ ಸಾಲಿಮಠ, ಸಮಾಜದ ಮುಖಂಡರಾದ ಎಚ್.ಎಂ.ವೀರಭದ್ರ ಶರ್ಮ, ಬಿ‌.ಎಂ‌.ರಾಜಶೇಖರ್ ಮಾತನಾಡಿದರು. ಬುಕ್ಕಸಾಗರದ ಕರಿಸಿದ್ದೇಶ್ವರ ಮಠದ ವಿಶ್ವರಾಧ್ಯ ಕರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಕೊಟ್ಟೂರು ಸಂಸ್ಥಾನ ಮಠದ ಬಸವಲಿಂಗ ಸ್ವಾಮೀಜಿ, ಕಲ್ಯಾಣ ಸ್ವಾಮೀಜಿ, ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ವಿರೂಪಾಕ್ಷಯ್ಯ ಸ್ವಾಮಿ, ಸಾಲಿ ಸಿದ್ದಯ್ಯ, ಶರಣು ಸ್ವಾಮಿ, ರವಿಶಂಕರ್, ಕೆ. ಕೊಟ್ರೇಶ್, ಟಿ.ಎಂ‌.ವಿಜಯಕುಮಾರ್, ಬಿ‌.ಎಂ.ಸೋಮಶೇಖರ್, ಸಿದ್ಧಾರ್ಥ ಸಿಂಗ್, ಕೆ.ಗಂಗಾದರ ಸ್ವಾಮಿ, ಜಯಶೀಲ ಕುಮಾರಸ್ವಾಮಿ, ಬಿ.ಎಂ.ವೀಣಾ, ಅನ್ನಪೂರ್ಣಮ್ಮ, ಪ್ರೀತಿ ಹಿರೇಮಠ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.