ADVERTISEMENT

‘ಮೀಸಲಾತಿ ಜಾರಿ ಮಾಡಿ ಋಣ ತೀರಿಸಲಿ’

ಬಸವ ಜಯ ಮೃತ್ಯುಂಜಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2024, 15:50 IST
Last Updated 21 ನವೆಂಬರ್ 2024, 15:50 IST
ಬಸವ ಜಯ ಮೃತ್ಯುಂಜಯ ಸ್ವಾಮೀಜಿ
ಬಸವ ಜಯ ಮೃತ್ಯುಂಜಯ ಸ್ವಾಮೀಜಿ   

ಹೊಸಪೇಟೆ (ವಿಜಯನಗರ): ‘ನಮ್ಮ ಸಮಾಜದ ಋಣ ಈ ಸರ್ಕಾರದ ಮೇಲಿದೆ, ಮೀಸಲಾತಿ ಜಾರಿ ಮಾಡಿ ಋಣ ತೀರಿಸಿಕೊಳ್ಳಲಿ, ಸಮಾಜದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನಾವು ಮೀಸಲಾತಿ ಹೋರಾಟ ಮಾಡುತ್ತಿದ್ದೇವೆ’ ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಇಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಪಂಚಮಸಾಲಿ ಸಮುದಾಯದ ಮೀಸಲಾತಿ ಹೋರಾಟಕ್ಕೆ ಕೈ ಜೋಡಿಸಿ, ಡಿಸೆಂಬರ್ 10ರಂದು ಸುವರ್ಣ ಸೌಧ ಮುತ್ತಿಗೆ ಹಾಕೋಣ, ಅಂದು ಲಕ್ಷ, ಲಕ್ಷ ಪಂಚಮಸಾಲಿಗಳು ಬೆಳಗಾವಿಗೆ ಬರಲಿದ್ದಾರೆ, 5 ಸಾವಿರ ಟ್ರ್ಯಾಕ್ಟರ್‌ಗಳನ್ನು ತರುತ್ತಾರೆ’ ಎಂದರು.

‘ಮೀಸಲಾತಿಗಾಗಿ ನಾವು 7ನೇ ಹಂತದ ಹೋರಾಟ ಮಾಡುತ್ತಿದ್ದೇವೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೀಸಲಾತಿ ಜಾರಿ ಮಾಡುತ್ತದೆ ಎಂಬ ನಂಬಿಕೆ ಇತ್ತು. ಅದು ಹುಸಿಯಾಗಿದೆ. ಈ ಹಿಂದೆ ಯಡಿಯೂರಪ್ಪ, ಬೊಮ್ಮಾಯಿ ಅವರ ಕಾಲದಲ್ಲಿಯೂ ಮುತ್ತಿಗೆ ಹಾಕಿದ್ದೇವೆ, ಸರ್ಕಾರ ಈಗಲಾದರೂ ಮೀಸಲಾತಿ ಭರವಸೆ ನೀಡಬೇಕು’ ಎಂದು ಶ್ರೀಗಳು ಕೇಳಿಕೊಂಡರು.

ADVERTISEMENT

‘ಈ ಹಿಂದಿನ ಸಭೆಯಲ್ಲಿ ಸಂಹಿತೆ ನೆಪ ಮಾಡಿ ಬೇಸರವಾಗುವಂತೆ ಮಾಡಿದರು. ಆದರೆ ಹೋರಾಟ ನಿಲ್ಲುವುದಿಲ್ಲ. ಮುಖ್ಯಮಂತ್ರಿ ಅವರು ಮೀಸಲಾತಿ ಕುರಿತು ಸ್ಪಷ್ಟ ಭರವಸೆ ಕೊಡುವವರೆಗೆ ಈ ಹೋರಾಟ ನಿರಂತರ ಮುಂದುವರಿಯಲಿದೆ. ಯಾರೂ ಕುತಂತ್ರಕ್ಕೆ ಮಣಿಯಬಾರದು, ಎಲ್ಲರೂ ಹೋರಾಟಕ್ಕೆ ಬೆಂಬಲ ಕೊಡಬೇಕು’ ಎಂದು ಕೇಳಿಕೊಂಡರು.

‘ಪಕ್ಷಾತೀತವಾಗಿ ಸಮಾಜದ ಪರವಾಗಿ ಹೋರಾಟ ಮಾಡಬೇಕು‘ ಎಂದು ಸಲಹೆ ನೀಡಿದ ಅವರು, ‘ನಮ್ಮ ಜೊತೆ ಬಂದರೆ ನಿಮ್ಮ ಅಧಿಕಾರಕ್ಕೆ ಕುತ್ತು ಬರುವುದಾದರೆ ಬಹಿರಂಗವಾಗಿ ಬರದೆ ಅಧಿವೇಶನದಲ್ಲಿ ಸಮಾಜದ ಪರವಾಗಿ ಧ್ವನಿ ಎತ್ತಿ’ ಎಂದು ವಿವಿಧ ಪಕ್ಷಗಳನ್ನು ಕೇಳಿಕೊಂಡರು.

ವಕ್ಫ್‌ ಆಸ್ತಿ ವಿವಾದ: ‘ವಕ್ಫ್‌ ಮಂಡಳಿ ಆ ಧರ್ಮಕ್ಕೆ ಸಂಬಂಧಿಸಿದ ಅಭಿವೃದ್ಧಿ ಕೆಲಸ ಮಾಡಲಿ, ಅನ್ನ ಕೊಡುವ ಅಮಾಯಕ ರೈತರ ಭೂಮಿ ಕಸಿಯುವ ಹುನ್ನಾರ ಮಾಡಬೇಡಿ, ಅನ್ಯಾಯದ ಅಕ್ರಮ ಭೂಮಿ ಒಡೆತನಕ್ಕೆ ವಿರೋಧವಿದೆ. ರೈತರಿಗೆ ಅನ್ಯಾಯವಾದಾಗ ಅವರ ಪರವಾಗಿಯೇ ಇರುತ್ತೇವೆ’ ಎಂದು ಜಯ ಮೃತ್ಯುಂಜಯ ಸ್ವಾಮೀಜಿ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.