ADVERTISEMENT

ರಸ್ತೆ ಸುರಕ್ಷತಾ ಸಪ್ತಾಹ:ಚಾಲಕರ ಜಾಗೃತಿ ಸಭೆ, ‘ಪ್ರಜಾವಾಣಿ‘ ಕ್ಯಾಲೆಂಡರ್ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2024, 13:03 IST
Last Updated 13 ಜನವರಿ 2024, 13:03 IST
<div class="paragraphs"><p>ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠ ಸಲೀಂ ಪಾಶಾ ಅವರು ಕ್ಯಾಲೆಂಡರ್ ಬಿಡುಗಡೆಗೊಳಿಸಿದರು.</p></div>

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠ ಸಲೀಂ ಪಾಶಾ ಅವರು ಕ್ಯಾಲೆಂಡರ್ ಬಿಡುಗಡೆಗೊಳಿಸಿದರು.

   

ಹೊಸಪೇಟೆ (ವಿಜಯನಗರ): ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಶನಿವಾರ ಇಲ್ಲಿನ ಸಹಕಾರ ಕಲ್ಯಾಣ ಮಂಟಪದಲ್ಲಿ ಸಂಚಾರ ಪೊಲೀಸ್ ಠಾಣೆ ವತಿಯಿಂದ ನಡೆದ ಲಾರಿ, ಟ್ಯಾಕ್ಸಿ, ಆಟೊ ಚಾಲಕರಿಗೆ ಜಾಗೃತಿ ಮೂಡಿಸುವ ಸಭೆಯಲ್ಲಿ ಸಂಚಾರ ನಿಯಮಗಳನ್ನು ಪಾಲಿಸುವ ಸಂದೇಶದೊಂದಿಗೆ ಹೊರತರಲಾದ ‘ಪ್ರಜಾವಾಣಿ’ ಕ್ಯಾಲೆಂಡರ್‌ ಅನ್ನು ಬಿಡುಗಡೆಗೊಳಿಸಲಾಯಿತು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠ ಸಲೀಂ ಪಾಶಾ ಅವರು ಕ್ಯಾಲೆಂಡರ್ ಬಿಡುಗಡೆಗೊಳಿಸಿ, ರಸ್ತೆ ಸುರಕ್ಷತೆಯ ಜಾಗೃತಿ ಮೂಡಿಸುವಲ್ಲಿ ‘ಪ್ರಜಾವಾಣಿ’ ವಹಿಸಿದ ಕಾಳಜಿಗೆ ಅಭಿನಂದನೆ ಸಲ್ಲಿಸಿದರು.

ADVERTISEMENT

‘ಚಾಲಕರು ತಮ್ಮ ಕುಟುಂಬ ತಮಗಾಗಿ ಕಾಯುತ್ತಿದೆ ಎಂಬ ಪ್ರಜ್ಞೆಯನ್ನು ಸದಾ ಇಟ್ಟುಕೊಂಡಿರಬೇಕು. ಅವಸರದ, ಹೊಣೆಗೇಡಿ ಚಾಲನೆಯಿಂದ ಕುಟುಂಬ ಬೀದಿಗೆ ಬೀಳುವ ಸ್ಥಿತಿ ಬರುತ್ತದೆ. ಇದಕ್ಕೆ ಅವಕಾಶ ಮಾಡಿಕೊಡಬೇಡಿ. ದಾಖಲೆ ಪತ್ರಗಳನ್ನು ಸದಾ ನಿಮ್ಮ ವಾಹನದಲ್ಲಿ ಇಟ್ಟುಕೊಂಡಿರಬೇಕು’ ಎಂದು ಎಎಸ್‌ಪಿ ಹೇಳಿದರು.

ವಿಜಯನಗರ ಜಿಲ್ಲೆಯಲ್ಲಿ ಕಳೆದ ವರ್ಷ 224 ಮಾರಣಾಂತಿಕ ಅಪಘಾತಗಳು ಸಂಭವಿಸಿದ್ದು 238 ಮಂದಿ ಮೃತಪಟ್ಟಿದ್ದಾರೆ. ಇದರ ನಾಲ್ಕು ಪಟ್ಟು ಅಧಿಕ ಸಣ್ಣಪುಟ್ಟ ಅಪಘಾತಗಳು ಸಂಭವಿಸಿವೆ. ನೂರಾರು ಮಂದಿ ಗಾಯಗೊಂಡಿದ್ದಾರೆ. ಈ ಅಂಕಿಅಂಶ ಬರಬರುತ್ತ ಕಡಿಮೆಯಾಗುತ್ತ ಹೋಗಬೇಕೇ ಹೊರತು ಹೆಚ್ಚಾಗುವುದಲ್ಲ. ಚಾಲಕರ ಹೊಣೆಗಾರಿಕೆಯ ಚಾಲನೆಯಿಂದ ಮಾತ್ರ ಅಪಘಾತ ಪ್ರಮಾಣಗಳನ್ನು ಕಡಿಮೆಗೊಳಿಸಲು ಸಾಧ್ಯ ಎಂದರು.

ಸಂಚಾರ ಠಾಣೆಯ ಇನ್‌ಸ್ಪೆಕ್ಟರ್‌ ಶ್ರೀನಿವಾಸ ಮೇಟಿ ಮಾತನಾಡಿ, ರಸ್ತೆ ಸುರಕ್ಷತೆ ಹಾಗೂ ಚಾಲಕರಿಗೆ ಅರಿವು ಮೂಡಿಸುವ ಮಹತ್ವದ ಸಂದೇಶಗಳನ್ನು ಪ್ರತಿ ಪುಟದಲ್ಲೂ ಅಚ್ಚು ಹಾಕಿಸುವ ಮೂಲಕ ‘ಪ್ರಜಾವಾಣಿ‘ ಕ್ಯಾಲೆಂಡರ್‌ ಅತ್ಯಂತ ಉಪಯುಕ್ತವಾಗಿದೆ ಎಂದರು.

ರಸ್ತೆ ಅಪಘಾತಗಳಿಗೆ ಸಂಬಂಧಿಸಿದಂತೆ ಕೆಲವು ಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿದ ಅವರು, ಮೋಟಾರ್ ವಾಹನ ಕಾಯ್ದೆ ಮತ್ತು ಐಪಿಸಿ ಸೆಕ್ಷನ್‌ಗಳು ಜತೆಜತೆಯಾಗಿ ಒಂದು ಪ್ರಕರಣದಲ್ಲಿ ಇದ್ದಾಗ ಸಂಚಾರ ಪೊಲೀಸರು ಚಾಲಕರಿಗೆ ದಂಡ ಹಾಕುವಂತಿಲ್ಲ ಎಂಬ ವಿಷಯಯನ್ನು ಚಾಲಕರ ಗಮನಕ್ಕೆ ತಂದರು. 

ಲಾರಿ ಮಾಲೀಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್‌.ಮಣಿ, ಆಟೊ ಚಾಲಕರ ಸಂಘದ ಅಧ್ಯಕ್ಷ ಸಂತೋಷ್‌, ವಕೀಲ ಪಿ.ವಿ.ವೆಂಕಟೇಶ್‌, ಇತರ ಸಂಘಗಳ ಮುಖಂಡರಾದ ರಾಮಚಂದ್ರ, ಗುಜ್ಜಲ ಗಣೇಶ, ಕೃಷ್ಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.