ADVERTISEMENT

ಹೊಸಪೇಟೆ | 'ಗರ್ಭಕಂಠ ಕ್ಯಾನ್ಸರ್‌–ಜಾಗೃತಿ ಮೂಡಿಸಿ'

ರೋಟರಿ, ಇನ್ನರ್‌ ವೀಲ್ ಕ್ಲಬ್‌ ಹೊಸಪೇಟೆ– ಪದಗ್ರಹಣ

​ಪ್ರಜಾವಾಣಿ ವಾರ್ತೆ
Published 7 ಜುಲೈ 2024, 14:56 IST
Last Updated 7 ಜುಲೈ 2024, 14:56 IST
ಹೊಸಪೇಟೆಯಲ್ಲಿ ಭಾನುವಾರ 2024–25ನೇ ಸಾಲಿನ ರೋಟರಿ ಪದಾಧಿಕಾರಿಗಳ ಪದಗ್ರಹಣ ನಡೆಯಿತು
ಹೊಸಪೇಟೆಯಲ್ಲಿ ಭಾನುವಾರ 2024–25ನೇ ಸಾಲಿನ ರೋಟರಿ ಪದಾಧಿಕಾರಿಗಳ ಪದಗ್ರಹಣ ನಡೆಯಿತು   

ಹೊಸಪೇಟೆ (ವಿಜಯನಗರ): ‘ಸಮಾಜದ ಅಭಿವೃದ್ಧಿಗೆ ಸದಾ ತುಡಿಯುವ ರೋಟರಿ- ಇನ್ನರ್ ವೀಲ್ ಕ್ಲಬ್‌ಗಳು ಪೋಲಿಯೊ ತಡೆಗಟ್ಟುವಲ್ಲಿ ಅಮೂಲ್ಯ ಕೊಡುಗೆ ನೀಡಿವೆ. ಇದೀಗ ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ ಬಗ್ಗೆಯೂ ಜಾಗೃತಿ ಮೂಡಿಸುವುದು ಅನಿವಾರ್ಯ’ ಎಂದು ದಂತ ವೈದ್ಯೆ ಹಾಗೂ ಇನ್ನರ್‌ ವೀಲ್‌ ಡಿಸ್ಟ್ರಿಕ್ಟ್‌ 319ರ ಮಾಜಿ ಅಧ್ಯಕ್ಷೆ ಡಾ.ರೂಪಾ ಹರಿಯಾನಿ ಹೇಳಿದರು.

ಇಲ್ಲಿ ಭಾನುವಾರ ನಡೆದ 2024–25ನೇ ಸಾಲಿನ ರೋಟರಿ, ಇನ್ನರ್‌ ವೀಲ್‌ ಕ್ಲಬ್ ಹೊಸಪೇಟೆ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ಗರ್ಭಕಂಠ ಕ್ಯಾನ್ಸರ್ ಅನ್ನು ಲಸಿಕೆಯಿಂದ ತಡೆಗಟ್ಟುವುದು ಸಾಧ್ಯವಿದೆ ಎಂಬುದು ಇದೀಗ ಸಾಬೀತಾಗಿದೆ. ಹೀಗಾಗಿ ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ದೊಡ್ಡ ಕೆಲಸವನ್ನು ರೋಟರಿ ಹಾಗೂ ಇನ್ನರ್‌ ವೀಲ್‌ ಕ್ಲಬ್‌ಗಳು ಮಾಡಬೇಕು ಎಂದರು.

ಡಿಸ್ಟ್ರಿಕ್ಸ್‌ 3191ರ ಮಾಜಿ ಡಿಸ್ಟಿಕ್ಟ್‌ ಗವರ್ನರ್ ಡಾ.ಸಮೀರ್‌ ಹರಿಯಾನಿ ಮಾತನಾಡಿ, ದಕ್ಷಿಣ ಭಾರತದಲ್ಲೇ ಗಮನ ಸೆಳೆಯುವ ರೀತಿಯಲ್ಲಿ ಕೆಲಸ ಮಾಡಿರುವ ಹೊಸಪೇಟೆ ರೋಟರಿ ಕ್ಲಬ್‌ನ ಸೇವೆಗಳನ್ನು ಕೊಂಡಾಡಿದರು.

ADVERTISEMENT

ಪದಗ್ರಹಣ: 2024 25ನೇ ಸಾಲಿನ ರೋಟರಿಯ ನೂತನ ಅಧ್ಯಕ್ಷರಾಗಿ ದೀಪಕ್ ಕುಮಾರ್‌ ಕೊಳಗದ್ ಹಾಗೂ ಇನ್ನರ್ ವೀಲ್‌ನ ಅಧ್ಯಕ್ಷೆಯಾಗಿ ಸುನೀತಾ ಕಿಶೋರ್ ಅಧಿಕಾರ ಸ್ವೀಕರಿಸಿದರು. ನಿಕಟ ಪೂರ್ವ ಅಧ್ಯಕ್ಷರಾದ ಸತ್ಯನಾರಾಯಣ ಹಾಗೂ ರಮ್ಯಾ ಅಧಿಕಾರ ಹಸ್ತಾಂತರಿಸಿದರು.

ದೀಪಕ್ ಕುಮಾರ್‌ ಕೊಳಗದ್ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಪರಿಸರ, ಶಿಕ್ಷಣ, ಸ್ವಚ್ಛತೆ, ಆರೋಗ್ಯದ ಬಗ್ಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಚಿಕ್ಕ ಸ್ಥಳದಲ್ಲೇ ಅರಣ್ಯ ಬೆಳೆಸುವ ಜಪಾನಿ ತಂತ್ರಜ್ಞಾನವಾದ ಮಿಯವಾಕಿ ಫಾರೆಸ್ಟ್ ಅನ್ನು ನಗರದಲ್ಲಿ ಪರಿಚಯಿಸಲಾಗುವುದು ಎಂದರು.

‘ತಾಯಿ ಮಕ್ಕಳ ಆರೋಗ್ಯ, ಪರಿಸರ ಜಾಗೃತಿ ಸೇರಿದಂತೆ ಪ್ರತಿಯೊಬ್ಬರ ಸಂತೋಷಕ್ಕಾಗಿ ಕಾರ್ಯಯೋಜನೆ ರೂಪಿಸಿ ಅತ್ಯುತ್ತಮ ಸೇವೆ ನೀಡಲು ಶ್ರಮಿಸುವೆ, ಇಡೀ ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಶಾಶ್ವತ ಯೋಜನೆಗಳನ್ನು ಹೊಂದಿರುವ ಕೀರ್ತಿಗೆ ಹೊಸಪೇಟೆ ರೋಟರಿ ಕ್ಲಬ್ ಪಾತ್ರವಾಗಿ, ಜನಾನುರಾಗಿ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಮನೆ ಮಾತಾಗಿದೆ. ನನ್ನ ಕಾಲಾವಧಿಯಲ್ಲಿ ಇನ್ನೂ ಹೆಚ್ಚಿನ ಅರ್ಥಪೂರ್ಣ ಯೋಜನೆಗಳನ್ನು ಹಾಕಿಕೊಂಡು ಕಾರ್ಯ ನಿರ್ವಹಿಸುವೆ’ ಎಂದು ತಿಳಿಸಿದರು.

ಸುನೀತಾ ಕಿಶೋರ್ ಮಾತನಾಡಿ, ಮಹಿಳಾ ಸಬಲೀಕರಣ, ಮಳೆ ನೀರು ಸಂಗ್ರಹ, ಶಿಕ್ಷಣ, ಪರಿಸರ ಸೇರಿದಂತೆ ಆರೋಗ್ಯ, ಪೌಷ್ಠಿಕ ಆಹಾರ, ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.

ಪದಾಧಿಕಾರಿಗಳು: ರೋಟರಿ– ಕಾರ್ಯದರ್ಶಿಯಾಗಿ ಎಂ.ಆರ್.ವೀರಭದ್ರ, ಉಪಾಧ್ಯಕ್ಷರಾಗಿ ಸೈಯದ್ ನಾಜಿಮುದ್ದೀನ್‌, ವಿ.ಜಿ.ಶ್ರೀಕಾಂತ್‌, ಜಂಟಿ ಕಾರ್ಯದರ್ಶಿಯಾಗಿ ಮಂಜುನಾಥ್ ಅಂಗಡಿ, ಮಹೇಂದ್ರ ಸೋನಿ, ಖಜಾಂಚಿಯಾಗಿ ಹರ್ಷ ಪದಗ್ರಹಣ ಮಾಡಿದರು.

ಇನ್ನರ್ ವೀಲ್– ಕಾರ್ಯದರ್ಶಿಯಾಗಿ ರಾಜೇಶ್ವರಿ ಅರಳಿಹಳ್ಳಿ, ಉಪಾಧ್ಯಕ್ಷರಾಗಿ ವೈ.ಅಶ್ವಿನಿ, ನೈಮಿಷಾ, ಖಜಾಂಚಿಯಾಗಿ ಶೈಲಜಾ ಒಡೆಯರ್, ಜಂಟಿ ಕಾರ್ಯದರ್ಶಿಯಾಗಿ ಶ್ರೀಲಕ್ಷ್ಮಿ ಇತರರು ಪದಗ್ರಹಣ ಮಾಡಿದರು.

ಕಳೆದ ವರ್ಷದಲ್ಲಿ ಮಾಡಿದ ಕಾರ್ಯಯೊಜನೆಗಳ ವರದಿಗಳನ್ನು ದಾದಾಪೀರ್ ಮತ್ತು ನೈಮಿಷಾ ಪ್ರಸ್ತುತಪಡಿಸಿದರು.

ಹೊಸಪೇಟೆಯಲ್ಲಿ ಭಾನುವಾರ 2024–25ನೇ ಸಾಲಿನ ಇನ್ನರ್‌ ವೀಲ್‌ ಪದಾಧಿಕಾರಿಗಳ ಪದಗ್ರಹಣ ನಡೆಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.