ADVERTISEMENT

ವಿಜಯನಗರ | ₹1.78 ಕೋಟಿ ಮೌಲ್ಯದ ಕಳವು ಮಾಲು ಹಸ್ತಾಂತರ

ಜಿಲ್ಲಾ ಪೊಲೀಸ್‌ ಇಲಾಖೆಯಿಂದ ಕ್ರಮ-ಹತ್ತಾರು ಮಾಲೀಕರಿಗೆ ಕಳವಾದ ವಸ್ತು ಕೈಸೇರಿದ ಖುಷಿ

​ಪ್ರಜಾವಾಣಿ ವಾರ್ತೆ
Published 29 ಜೂನ್ 2024, 16:10 IST
Last Updated 29 ಜೂನ್ 2024, 16:10 IST
ಹೊಸಪೇಟೆಯಲ್ಲಿ ಶನಿವಾರ ಎಸ್‌ಪಿ ಶ್ರೀಹರಿಬಾಬು ಬಿ.ಎಲ್‌. ಅವರು ವಶಪಡಿಸಿಕೊಂಡ ಕಳವು ಮಾಲನ್ನು ಅದರ ಮಾಲೀಕರಿಗೆ ಹಸ್ತಾಂತರಿಸಿದರು  –ಪ್ರಜಾವಾಣಿ ಚಿತ್ರ
ಹೊಸಪೇಟೆಯಲ್ಲಿ ಶನಿವಾರ ಎಸ್‌ಪಿ ಶ್ರೀಹರಿಬಾಬು ಬಿ.ಎಲ್‌. ಅವರು ವಶಪಡಿಸಿಕೊಂಡ ಕಳವು ಮಾಲನ್ನು ಅದರ ಮಾಲೀಕರಿಗೆ ಹಸ್ತಾಂತರಿಸಿದರು  –ಪ್ರಜಾವಾಣಿ ಚಿತ್ರ   

ಹೊಸಪೇಟೆ (ವಿಜಯನಗರ): ಪೊಲೀಸ್ ಠಾಣೆಯ ಆವರಣಕ್ಕೆ ಬಂದು ಖುಷಿಪಡುವ ಸಂದರ್ಭ ಬಹಳ ವಿರಳ, ಆದರೆ ಇಲ್ಲಿನ ನೂತನ ಎಸ್‌ಪಿ ಕಚೇರಿಗೆ ಶನಿವಾರ ಸಂಜೆ ಬಂದಿದ್ದ ಹತ್ತಾರು ಮಂದಿ ತಮ್ಮ ಕಳವಾಗಿದ್ದ ಮಾಲು ವಾಪಸ್‌ ಸಿಕ್ಕಿದ್ದಕ್ಕೆ ಖುಷಿ ಪಟ್ಟರು, ಪೊಲೀಸರಿಗೆ ಧನ್ಯವಾದ ಹೇಳಿದರು.

ಜಿಲ್ಲೆಯ ಮೂರೂ ಉಪವಿಭಾಗಗಳ ವ್ಯಾಪ್ತಿಯಲ್ಲಿನ ಪೊಲೀಸ್ ಠಾಣೆಗಳಲ್ಲಿ ಕಳೆದ ಒಂದು ವರ್ಷದಲ್ಲಿ ಕಳವು ಮಾಲನ್ನು ವಶಪಡಿಸಿಕೊಂಡಿದ್ದನ್ನು ಅವುಗಳ ಮಾಲೀಕರಿಗೆ ಹಸ್ತಾಂತರಿಸುವ ಅಪರೂಪದ ಕೆಲಸವನ್ನು ಜಿಲ್ಲಾ ಪೊಲೀಸ್ ವರಿಷ್ಠ ಶ್ರೀಹರಿಬಾಬು ಬಿ.ಎಲ್‌. ಮತ್ತು ಅವರ ತಂಡ ಮಾಡಿತು. 

‘ಕೊಟ್ಟೂರಿನ ಜಾತ್ರೆಗೆ ಹೋಗಿದ್ದಾಗ ನಮ್ಮ ನಾಲ್ವರ ಚೈನ್‌ಗಳು ಕಳವಾಗಿದ್ದವು. ನಾವು ಅದರ ಆಸೆಯನ್ನೇ ಬಿಟ್ಟಿದ್ದೆವು. ಆದರೆ ಅವು ಮತ್ತೆ ನಮಗೆ ಸಿಕ್ಕಿದೆ. ಬಹಳ ಖುಷಿ ಅನಿಸುತ್ತಿದೆ. ಈ ಚೈನ್‌ 12 ಗ್ರಾಂ ತೂಕವಿದೆ’ ಎಂದು ರಾಜೇಶ್‌ ಕಾರ್ವ ಅಭಿಮಾನದಿಂದ ಹೇಳಿದರು. ಇದೇ ರೀತಿ ಹತ್ತಾರು ಮಂದಿ ಖುಷಿ ಖುಷಿಯಾಗಿಯೇ ತಮ್ಮ ಪ್ರೀತಿಯ ವಸ್ತುಗಳನ್ನು ಮರಳಿ ಪಡೆದರು. ಹರಪನಹಳ್ಳಿಯ ಇಬ್ಬರು ರೈತರ ಪಂಪ್‌ಸೆಟ್‌ ಸಹ ವಶಪಡಿಸಿಕೊಂಡ ಮಾಲುಗಳಲ್ಲಿ ಸೇರಿತ್ತು. ‘ಈ ಪಂಪ್‌ಸೆಟ್ ಎತ್ತಿ ಕೊಡಲು ಸಾಧ್ಯವಾಗುತ್ತಿಲ್ಲ, ಮನೆಗೆ ಕೊಂಡೊಯ್ಯಿರಿ, ಖುಷಿಯಾಗಿರಿ’ ಎಂದು ಎಸ್‌ಪಿ ಹೇಳಿ ರೈತರನ್ನು ಕಳುಹಿಸಿಕೊಟ್ಟರು.

ADVERTISEMENT

ಒಂದಿಷ್ಟು ತೃಪ್ತಿ, ಇನ್ನಷ್ಟು ಕೆಲಸ ಬಾಕಿ: ‘ಕಳವಾದ ಮಾಲುಗಳನ್ನು ಅವುಗಳ ಮಾಲೀಕರಿಗೆ ಹಿಂದಿರಿಗಿಸುವುದು ಬಹಳ ತೃಪ್ತಿಯ ಕೆಲಸ. ಒಂದು ವರ್ಷದಲ್ಲಿ ವಶಪಡಿಸಿಕೊಂಡ ಮಾಲುಗಳ ಪೈಕಿ ಮೊಬೈಲ್‌ ಫೋನ್‌ಗಳನ್ನು ಈಗಾಗಲೇ ಅವುಗಳ ಮಾಲೀಕರಿಗೆ ಕೊಡಲಾಗಿದೆ. ಉಳಿದ ಮಾಲುಗಳಲ್ಲಿ ಕೆಲವನ್ನು ಇಲ್ಲಿ ನೀಡಲಾಗುತ್ತಿದೆ. ಒಟ್ಟು ₹1.78 ಕೋಟಿ ಮೌಲ್ಯದ ಕಳವು ಮಾಲನ್ನು ಅವುಗಳ ಮಾಲೀಕರಿಗೆ ಹಸ್ತಾಂತರಿಸಲಾಯಿತು. ಉಳಿದ 37.44 ಲಕ್ಷ ಮೌಲ್ಯದ ಕಳವು ಮಾಲುಗಳನ್ನು ಕೋರ್ಟ್ ಆದೇಶ ಪಡೆದುಕೊಂಡು ಹಿಂದಿರುಗಿಸಲಾಗುವುದು’ ಎಂದು ಎಸ್‌ಪಿ ಅವರು ಮಾಧ್ಯಮದವರಿಗೆ ತಿಳಿಸಿದರು.

‘ಕಳೆದ ವರ್ಷದ ಜೂನ್‌ 1ರಿಂದ ಈ ರ್ಷದ ಜೂನ್‌ 1ರವರೆಗಿನ ಕಳವು ಪ್ರಕರಣಗಳಲ್ಲಿ 254 ಸ್ವತ್ತಿನ ಪ್ರಕರಣಗಳು ವರದಿಯಾಗಿವೆ. ಈ ಅವಧಿಯಲ್ಲಿ ಲಾಭಕ್ಕಾಗಿ ಕೊಲೆ ನಡೆದಿಲ್ಲ. 4 ಡಕಾಯಿತಿ, 3 ಸರಗಳ್ಳತನ, 7 ಹಗಲು ಕನ್ನ ಹಾಕಿದ ಪ್ರಸಂಗ, 58 ರಾತ್ರಿ ಕನ್ನ ಹಾಕಿದ ಪ್ರಸಂಗ, 182 ಸಾಮಾನ್ಯ ಕಳತನ ಪ್ರಕರಣಗಳು ವರದಿಯಾಗಿವೆ’ ಎಂದು ಎಸ್‌ಪಿ ಹೇಳಿದರು.

‘ವಶಪಡಿಸಿಕೊಂಡ ಮಾಲುಗಳ ಪೈಕಿ ₹85 ಲಕ್ಷ ಮೌಲ್ಯದ 96 ದ್ವಿಚಕ್ರ ವಾಹನ, ₹42.31 ಲಕ್ಷ ಮೌಲ್ಯದ 118 ತೊಲೆ ಬಂಗಾರ, ₹95,300 ಮೌಲ್ಯದ 30 ತೊಲೆ ಬೆಳ್ಳಿ, ₹2.05 ಲಕ್ಷ ಮೌಲ್ಯದ 25 ಮೊಬೈಲ್‌, ₹11,71,580 ನಗದು, ₹3.50 ಲಕ್ಷ ಮೌಲ್ಯದ ಎಲೆಕ್ಟ್ರಾನಿಕ್ಸ್ ವಸ್ತುಗಳು, ₹37.45 ಲಕ್ಷ ಮೌಲ್ಯದ ಗಂಧದ ಕಟ್ಟಿಗೆ, ಟೊಯೊಟಾ ಕಾರು, ₹12.63 ಲಕ್ಷ ಮೌಲ್ಯದ ಸೋನಿ ಕ್ಯಾಮೆರಾ, 1 ಕಾರು, 1 ಸರ್ಕಾರಿ ಸಾರಿಗೆ ಬಸ್‌, 3 ಆಕಳು, 5 ಕುರಿ, 3 ಪಂಪ್‌ಸೆಟ್‌ಗಳು ಸೇರಿವೆ’ ಎಂದು ಅವರು ಮಾಹಿತಿ ನೀಡಿದರು.

ಬೆರಳಚ್ಚು ಪಡೆಯುವ ಸಾಧನ: ಜಿಲ್ಲೆಯಲ್ಲಿ ರಾತ್ರಿ ಹೊತ್ತಲ್ಲಿ ಸಂಶಯಾಸ್ಪದವಾಗಿ ಓಡಾಡುವವರ ಬೆರಳಚ್ಚು ಪಡೆದು ಸಂಗ್ರಹಿಸಿಟ್ಟುಕೊಳ್ಳುವ ಸಾಧನವನ್ನು ಪೊಲೀಸರಿಗೆ ಕೊಟ್ಟಿದ್ದು, ಇದುವರೆಗೆ 2,900 ಮಂದಿಯ ಬೆರಳಚ್ಚು ಸಂಗ್ರಹಿಸಲಾಗಿದೆ. ಕಳ್ಳರನ್ನು ವಶಕ್ಕೆ ಪಡೆಯುವಲ್ಲಿ ಈ ಸಾಧನ ಬಹಳಷ್ಟು ಮಟ್ಟಿಗೆ ನೆರವಿಗೆ ಬರುತ್ತಿದೆ. ಹಂಪಿ ಸಹಿತ ಪ್ರಮುಖ ಪ್ರವಾಸಿ ತಾಣಗಳಲ್ಲಿ ಸಿ.ಸಿ.ಟಿ.ವಿ.ಕ್ಯಾಮೆರಾಗಳನ್ನು ಅಳವಡಿಸುವ ಕೆಲಸ ಪೊಲೀಸ್ ಇಲಾಖೆಯಿಂದಲೂ ನಡೆಯುತ್ತಿದೆ ಎಂದು ಶ್ರೀಹರಿಬಾಬು ಹೇಳಿದರು.

ಎಎಸ್‌ಪಿ ಸಲೀಂ ಪಾಷಾ, ಡಿವೈಎಸ್‌ಪಿಗಳಾದ ಮಂಜುನಾಥ್‌, ಮಹಾಂತೇಶ್ ಸಜ್ಜನ್‌, ಮಲ್ಲೇಶಪ್ಪ ಮಲ್ಲಾಪುರ ಇದ್ದರು.

ಅಂಕಿ ಅಂಶ 254 ಒಂದು ವರ್ಷದಲ್ಲಿ ಒಟ್ಟು ಸ್ವತ್ತು ಕಳವು ಪ್ರಕರಣ 87 ಪತ್ತೆಯಾದ ಪ್ರಕರಣ 162 ಬಂಧಿತರಾದವರ ಸಂಖ್ಯೆ ₹5.54 ಕೋಟಿ ಕಳವಾದ ವಸ್ತುಗಳ ಮೌಲ್ಯ ₹2.15 ಕೋಟಿ ವಶಪಡಿಸಿಕೊಂಡ ವಸ್ತುಗಳ ಮೌಲ್ಯ 96 ವಶಪಡಿಸಿಕೊಂಡ ದ್ವಿಚಕ್ರ ವಾಹನಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.