ADVERTISEMENT

ಹೂವಿನಹಡಗಲಿ | ಆರೋಗ್ಯಾಧಿಕಾರಿ ಸಪ್ನಾ ಕಟ್ಟಿಗೆ ಕಿರುಕುಳ: RTI ಕಾರ್ಯಕರ್ತನ ಬಂಧನ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2024, 6:52 IST
Last Updated 22 ಸೆಪ್ಟೆಂಬರ್ 2024, 6:52 IST
<div class="paragraphs"><p>ಎಂ. ಸುರೇಶ</p></div>

ಎಂ. ಸುರೇಶ

   

ಹೂವಿನಹಡಗಲಿ (ವಿಜಯನಗರ ಜಿಲ್ಲೆ): ಇಲ್ಲಿನ ಪ್ರಭಾರ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಸಪ್ನಾ ಕಟ್ಟಿ ಅವರಿಗೆ ನಿರಂತರ ಕಿರುಕುಳ ನೀಡಿ, ಬೆದರಿಕೆ ಹಾಕಿದ್ದ ಆರೋಪದಡಿ ಹೊಳಗುಂದಿಯ ಆರ್‌ಟಿಐ ಕಾರ್ಯಕರ್ತ ಎಂ. ಸುರೇಶ ಎಂಬಾತನನ್ನು ಪೊಲೀಸರು ಶನಿವಾರ ಮಧ್ಯರಾತ್ರಿ ಬಂಧಿಸಿದ್ದಾರೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶಂಕರ ನಾಯ್ಕ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಶನಿವಾರ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು.

ADVERTISEMENT

‘ಜೂನ್ 25 ರಂದು ಜಿಲ್ಲಾಧಿಕಾರಿಗಳ ಜನಸ್ಪಂದನ ಕಾರ್ಯಕ್ರಮ ವೇಳೆ ಆರ್‌ಟಿಐ ಕಾರ್ಯಕರ್ತ ಸುರೇಶ ನನ್ನನ್ನು ಭೇಟಿಯಾಗಿ ‘ನಿನ್ನ ಕೆಲಸ ಸರಿಯಾಗಿಲ್ಲ, ನೀನು ಟಿಎಚ್ಒ ಇದಿರಾ, ಬೇರೆ ಏನಾದರೂ ಮಾಡುತ್ತೀರಾ ?’ ಎಂದು ಏಕ ವಚನದಲ್ಲಿ ನಿಂದಿಸಿ, ನನ್ನ ವಿರುದ್ಧ ಡಿಸಿಗೆ ದೂರು ನೀಡುವ ಬೆದರಿಕೆ ಹಾಕಿದ್ದ. ಕಚೇರಿ ಸಮಯ ನಂತರ ಮಾಹಿತಿ ಕೇಳುವ ನೆಪದಲ್ಲಿ ವೈಯಕ್ತಿಕ ನಂಬರ್‌ಗೆ ಕರೆ ಮಾಡಿ ದುರ್ವರ್ತನೆ ತೋರಿದ್ದಾನೆ. ಕರೆ ಸ್ವೀಕರಿಸದೇ ನಿರ್ಲಕ್ಷಿಸಿದ್ದರಿಂದ ಮಧ್ಯರಾತ್ರಿ ಕರೆ ಮಾಡಿ ತೊಂದರೆ ಕೊಟ್ಟಿದ್ದಾನೆ’ ಎಂದು ಟಿಎಚ್ಒ ದೂರಿನಲ್ಲಿ ತಿಳಿಸಿದ್ದಾರೆ.

ಹೊಳಗುಂದಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಶೋಕ ಅವರಿಗೆ ಕರೆ ಮಾಡಿ ₹50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದಾನೆ. ಯಾರಿಗಾದರೂ ತಿಳಿಸಿದರೆ ಜೀವಕ್ಕೆ ಕುತ್ತು ತರುವ ಬೆದರಿಕೆ ಹಾಕಿರುವ ಮೊಬೈಲ್ ಸಂಭಾಷಣೆಯ ಆಡಿಯೋವನ್ನು ಪೊಲೀಸರಿಗೆ ಸಲ್ಲಿಸಲಾಗಿದೆ.

ಮಾಹಿತಿ ಹಕ್ಕು ಕಾರ್ಯಕರ್ತರೆಂದು ಹೇಳಿಕೊಂಡು ಕೆಲವರು ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಗುರಿಯಾಗಿಸಿ ವಿವಾದದಲ್ಲಿ ಸಿಲುಕಿಸುವ ಪ್ರಯತ್ನ ನಡೆಸಿದ್ದಾರೆ. ಅಧಿಕಾರಿಗಳನ್ನು ಬ್ಲಾಕ್ ಮೇಲ್ ಮಾಡಿ ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ. ಇಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳದಿದ್ದರೆ ಸಾಮೂಹಿಕ ರಾಜೀನಾಮೆ ನೀಡುತ್ತೇವೆ ಎಂದು ಆರೋಗ್ಯ ಇಲಾಖೆ ಸಿಬ್ಬಂದಿ ದೂರಿನಲ್ಲಿ ತಿಳಿಸಿದ್ದಾರೆ.

ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯು ಹಗರಿಬೊಮ್ಮನಹಳ್ಳಿಯ ಸಂಬಂಧಿ ಮನೆಯಲ್ಲಿದ್ದಾಗ ಪಿಎಸ್ಐ ವಿಜಯಕೃಷ್ಣ ಅಲ್ಲಿಗೆ ತೆರಳಿ ವಶಕ್ಕೆ ಪಡೆದರು.

ವಿಚಾರಣೆಯಲ್ಲಿ ಕಣ್ಣೀರಿಟ್ಟ ಟಿಎಚ್ಒ

ಸೆ.21 ರಂದು ಹೊಸಪೇಟೆಯಲ್ಲಿ ನಡೆದ ಮಾಹಿತಿ ಹಕ್ಕು ಅರ್ಜಿಯ ಮೇಲ್ಮನವಿ ವಿಚಾರಣೆಗೆ ಡಿಎಚ್ಒ ಗೈರಾಗಿದ್ದಕ್ಕೆ ರಾದ್ದಾಂತ ಮಾಡಿದ್ದ ಸುರೇಶ, ನನಗೆ ಆರೋಗ್ಯ ಸಚಿವರು ಮತ್ತು ಜಿಲ್ಲಾಧಿಕಾರಿ ಗೊತ್ತು. ಅವರಿಗೆ ಪೋನ್ ಮಾಡಿರುವೆ. ಡಿಎಚ್ಒ ಗೈರಾಗಿದ್ದಾರೆಂದು ಬರೆದುಕೊಡಿ ಎಂದು ಒತ್ತಾಯಿಸಿದ್ದರು.

ಸಹಾಯಕ ಆಡಳಿತಾಧಿಕಾರಿ ಮೇಲ್ಮನವಿ ವಿಚಾರಣೆ ಆರಂಭಿಸಿದಾಗ ಟಿಎಚ್ಒ ಡಾ. ಸಪ್ನಾ ಕಟ್ಟಿ ತನಗೆ ತೊಂದರೆ ನೀಡಿರುವುದನ್ನು ವಿವರಿಸಿ ಕಣ್ಣೀರಿಟ್ಟಿದ್ದಾರೆ. ಬಳಿಕ ಅಧಿಕಾರಿಗಳು ಚರ್ಚಿಸಿ ದೂರು ನೀಡಲು ನಿರ್ಧರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.