ಹೊಸಪೇಟೆ (ವಿಜಯನಗರ): ಸಂಡೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾವು ಏರಿ ವಾರವೇ ಕಳೆದಿದ್ದು, ಜಿಲ್ಲೆಯ ಪ್ರಭಾವಿ ನಾಯಕರೊಬ್ಬರು ಬಿಜೆಪಿ ಪರವಾಗಿ ಪ್ರಚಾರಕ್ಕೂ ತೆರಳದೆ, ಪಕ್ಷದ ನಾಯಕರ ಸಂಪರ್ಕಕ್ಕೂ ಸಿಗದೆ ಉಳಿದಿದ್ದಾರೆ ಎಂಬ ಮಾತು ಕೇಳಿಬಂದಿದೆ.
ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತ ಅವರನ್ನು ಗೆಲ್ಲಿಸಿಯೇ ತೀರುವುದಾಗಿ ಪಣತೊಟ್ಟಿರುವ ಜನಾರ್ದನ ರೆಡ್ಡಿ, ತಮ್ಮ ಛಲದಲ್ಲಿ ಮೇಲುಗೈ ಸಾಧಿಸಿದರೆ ಬಳ್ಳಾರಿ ಮಾತ್ರವಲ್ಲದೆ ವಿಜಯನಗರ ಜಿಲ್ಲೆಯಲ್ಲೂ ಅವರ ಜನಪ್ರಿಯತೆಯ ಗ್ರಾಫ್ ಮೇಲೇರುತ್ತದೆ. ಇದಕ್ಕೆ ಅವಕಾಶ ನೀಡಲೇಬಾರದು. ಬಂಗಾರು ಸೋಲುವ ಮೂಲಕ ರೆಡ್ಡಿ ಪ್ರಭಾವ ಹತ್ತಿಕ್ಕಲೇಬೇಕು ಎಂಬ ಕಾರಣಕ್ಕೆ ಈ ತೆರೆಮರೆಯ ಆಟ ನಡೆದಿದೆಯೇ ಎಂಬ ಸಂಶಯ ಮೂಡಿದೆ.
‘ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರೇ ಸ್ವತಃ ಈ ನಾಯಕರಿಗೆ ಕರೆ ಮಾಡಿದ್ದರೂ ಕರೆ ಸ್ವೀಕರಿಸಿಲ್ಲ, ಸಂಪರ್ಕಕ್ಕೂ ಸಿಕ್ಕಿಲ್ಲ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ನಿಕಟರಾಗಿರುವ ಈ ನಾಯಕ ಬಹುಶಃ ಕಾಂಗ್ರೆಸ್‌ಗೆ ಪರೋಕ್ಷ ಬೆಂಬಲವಾಗಿಯೇ ವರ್ತಿಸುತ್ತಿರಬೇಕು’ ಎಂದು ಮುಖಂಡರೊಬ್ಬರು ತರ್ಕಿಸಿದರು.
ಮತ್ತೊಂದೆಡೆ ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಈಗಾಗಲೇ ಏಳು ಮಂದಿಗೆ ಜೈಲು ಶಿಕ್ಷೆಯಾಗಿದ್ದು, ಇನ್ನೂ ಕೆಲವರಿಗೆ ನಡುಕ ಶುರುವಾಗಿದೆ. ಆಡಳಿತಾರೂಢ ಪಕ್ಷಕ್ಕೆ ಬೆಂಬಲವಾಗಿ ನಿಂತರೆ ಶಿಕ್ಷೆಗೆ ಒಳಗಾಗುವುದನ್ನು ಸ್ವಲ್ಪ ಮುಂದಕ್ಕೆ ಹಾಕಬಹುದು ಎಂಬ ದೂರಾಲೋಚನೆ ಸಹ ಇಂತಹ ತೆರೆಮರೆಯ ಆಟದಲ್ಲಿ ತನ್ನ ಪಾತ್ರವಹಿಸಿದೆಯೇ ಎಂಬ ಗುಮಾನಿಯೂ ಮೂಡಿದೆ.
ಸಂಡೂರು ಕಾಂಗ್ರೆಸ್ ಮನೆಯಲ್ಲೂ ಒಗ್ಗಟ್ಟು ಇಲ್ಲ. ಇದನ್ನು ಬಂಡವಾಳ ಮಾಡಲು ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅವರು ಜೋಡೆತ್ತು ರೀತಿಯಲ್ಲಿ ಜತೆಯಾಗಿ ಮತದಾರರ ಬಳಿಗೆ ತೆರಳಲು ಯತ್ನಿಸುತ್ತಲ್ಲೇ ಇದ್ದಾರೆ. ಈ ಹಂತದಲ್ಲೇ ಬಿಜೆಪಿ ಮನೆಯಲ್ಲಿನ ಈ ಬೆಳವಣಿಗೆ ರಾಜಕೀಯ ಒಳಸುಳಿಯನ್ನು ಕುತೂಲಹದಿಂದ ನೋಡುವಂತೆ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.