ಹೊಸಪೇಟೆ (ವಿಜಯನಗರ): 'ಮಸೀದಿಗಳ ಮೇಲಿನ ಧ್ವನಿವರ್ಧಕಗಳ ಶಬ್ದ ಕಡಿಮೆಗೊಳಿಸುವ ಅಥವಾ ಅವುಗಳನ್ನು ತೆರವುಗೊಳಿಸುವ ವಿಚಾರದಲ್ಲಿ ಇಲಾಖೆಯಿಂದ ಯಾವುದೇ ಹೊಸ ಆದೇಶ ಹೊರಡಿಸಿಲ್ಲ. ಇದೆಲ್ಲ ತಪ್ಪು ಗ್ರಹಿಕೆ’ ಎಂದು ಮುಜರಾಯಿ, ಹಜ್ ಮತ್ತು ವಕ್ಫ್, ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಅಣ್ಣಾಸಾಹೇಬ್ ಜೊಲ್ಲೆ ತಿಳಿಸಿದರು.
ಬುಧವಾರ ಇಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಎಷ್ಟು ಶಬ್ದ ಇರಬೇಕು ಎನ್ನುವುದಕ್ಕೆ ಸಂಬಂಧಿಸಿ ಈಗಾಗಲೇ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ. ಈಗ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನೋಟಿಸ್ ನೀಡಲಾಗಿದೆ. ಆದರೆ, ನಮ್ಮ ಇಲಾಖೆಯಿಂದ ಯಾವುದೇ ಆದೇಶ ಮಾಡಿಲ್ಲ’ ಎಂದು ಸ್ಪಷ್ಟಪಡಿಸಿದರು.
‘ಆಜಾನ್ ಶಬ್ದ ನಿಯಂತ್ರಿಸುವ ಸಂಬಂಧ ಪೊಲೀಸ್ ಇಲಾಖೆಯಿಂದ ನೋಟಿಸ್ ಕೊಟ್ಟಿರುವ ವಿಚಾರ ನನಗೆ ಗೊತ್ತಿಲ್ಲ. ರಾಜ್ಯದಲ್ಲಿ ಎಷ್ಟು ಮಸೀದಿ, ಮದರಸಾಗಳಿವೆ ಎಂದು ಮಾಹಿತಿ ಕಲೆ ಹಾಕುತ್ತಿಲ್ಲ. ಮಸೀದಿ, ಮಂದಿರ ಸೇರಿದಂತೆ ಎಲ್ಲ ಧಾರ್ಮಿಕ ಸಂಸ್ಥೆಗಳ ಅಂಕಿ ಸಂಖ್ಯೆ ಇಲಾಖೆಯ ಬಳಿ ಇದೆ. ಹೊಸ ಸಮೀಕ್ಷೆಗೆ ಆದೇಶ ಹೊರಡಿಸಿಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.