ADVERTISEMENT

ಬ್ಯಾಟರಿ ವಾಹನ: ಚಾಲಕಿಯರಿಗೆ ಬೇಕಿದೆ ಪಾಳಿ ವ್ಯವಸ್ಥೆ

ವಿರಾಮ ಇಲ್ಲದ ದುಡಿಮೆ–ರಾತ್ರಿ ಮನೆಗೆ ಹೋಗಲು ಕಷ್ಟಪಡುವ ಸ್ಥಿತಿ

ಎಂ.ಜಿ.ಬಾಲಕೃಷ್ಣ
Published 15 ಡಿಸೆಂಬರ್ 2023, 6:04 IST
Last Updated 15 ಡಿಸೆಂಬರ್ 2023, 6:04 IST
ಮೊಹಮ್ಮದ್‌ ಅಲಿ ಅಕ್ರಂ ಷಾ
ಮೊಹಮ್ಮದ್‌ ಅಲಿ ಅಕ್ರಂ ಷಾ   

ಹೊಸಪೇಟೆ (ವಿಜಯನಗರ): ಹಂಪಿಯ ವಿಜಯ ವಿಠ್ಠಲ ದೇವಸ್ಥಾನಕ್ಕೆ ತೆರಳಬೇಕಿದ್ದರೆ ಗೆಜ್ಜಲಮಂಟಪದಿಂದ (ತಳವಾರಘಟ್ಟ ಪಾರ್ಕಿಂಗ್ ಪ್ರದೇಶ) ಬ್ಯಾಟರಿವಾಹನದಲ್ಲಿ ಹೋಗುವುದು ಅನಿವಾರ್ಯ. ಈ ವಾಹನ ಚಾಲಕಿಯರ ವಿರಾಮ ಇಲ್ಲದ ದುಡಿಮೆ ಅವರನ್ನು ಹೈರಾಣಾಗಿಸಿದ್ದು, ಅವರೆಲ್ಲ ಇದೀಗ ದೈಹಿಕ, ಮಾನಸಿಕ ತೊಂದರೆಗಳಿಂದ ಬಳಲುತ್ತಿದ್ದಾರೆ.

‘ಬೆಳಿಗ್ಗೆ 8 ಗಂಟೆಗೆ ಮನೆಯಿಂದ ಹೊರಟಿರುತ್ತೇವೆ. 9 ಗಂಟೆಗೆ ವಾಹನ ಚಾಲನೆ ಆರಂಭವಾಗಿರುತ್ತದೆ. ಸಂಜೆ 7ರವರೆಗೆ ದುಡಿಮೆ ಕಡ್ಡಾಯ. ಕೆಲವೊಮ್ಮೆ ಪ್ರವಾಸಿಗರು ವಿಳಂಬ ಮಾಡಿದರೆ 8 ಗಂಟೆಯವರೆಗೂ ಕರ್ತವ್ಯದಲ್ಲಿ ಇರಬೇಕಾಗುತ್ತದೆ. ಬಿಡುವೇ ಇಲ್ಲದ, ನಿರಂತರ ದುಡಿಮೆಯಿಂದ ನಾವು ನಿಜಕ್ಕೂ ನೊಂದಿದ್ದೇವೆ, ಪಾಳಿ ವ್ಯವಸ್ಥೆ ಮಾಡಿಕೊಡಿ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಕೆಲವು ಚಾಲಕಿಯರು ‘ಪ್ರಜಾವಾಣಿ’ ಜತೆ ಅಳಲು ತೋಡಿಕೊಂಡರು.

‘ರಾತ್ರಿ ಚಿರತೆ, ಕರಡಿ ಕಾಟ ಇದೆ. ನಮ್ಮನ್ನು ಮನೆಗೆ ಕರೆದೊಯ್ಯಲು ಯಾರಾದರೂ ಬರಬೇಕು. ಬಸ್‌ ವ್ಯವಸ್ಥೆಯೂ  ಇಲ್ಲ. ಬಹಳ ತೊಂದರೆ ಆಗಿದೆ’ ಎಂದು ಅವರು ಹೇಳಿದರು. ಈ ಚಾಲಕಿಯರು ಬಹತೇಕ ಕಮಲಾಪುರ, ವೆಂಕಟಾಪುರ, ಬುಕ್ಕಸಾಗರ ಭಾಗದವರೇ. ಸ್ವಂತ ದ್ವಿಚಕ್ರ ವಾಹನ ಇಟ್ಟುಕೊಳ್ಳುವಷ್ಟು ಸ್ಥಿತಿವಂತರಲ್ಲ. ಹೀಗಾಗಿ ತಮ್ನೆ ಮಗೆ ತೆರಳಲು ರಾತ್ರಿ ವ್ಯವಸ್ಥೆ ಇಲ್ಲದ ಕಾರಣ ಕಷ್ಟಪಡುವ ಸ್ಥಿತಿ ಇದೆ.

ADVERTISEMENT

ಈ ಸಿಬ್ಬಂದಿ ನೇರವಾಗಿ ‘ಹವಾಮಾ’ ಅಡಿಯಲ್ಲಿ ಬರುವುದಿಲ್ಲ. ಹವಾಮಾ ನಿಯೋಜಿಸುವ ಗುತ್ತಿಗೆ ಸಂಸ್ಥೆಯವರು ಇವರನ್ನು ಕೆಲಸಕ್ಕೆ ನೇಮಿಸಿಕೊಂಡು ಕಾನೂನು ಪ್ರಕಾರ ಸಂಬಳ ಕೊಡುತ್ತಾರೆ. ತಮ್ಮ ಅಳಲಿನ ಬಗ್ಗೆ ಬಹಿರಂಗವಾಗಿ ಹೇಳಿಕೊಂಡರೆ ತಕ್ಷಣ ಅವರನ್ನು ಕೆಲಸದಿಂದ ತೆಗೆದು ಹಾಕಲಾಗುತ್ತಿದ್ದು, ಈಗಾಗಲೇ ಇಂತಹ ಮೂರು ಪ್ರಸಂಗಗಳು ನಡೆದಿವೆ.

‘ಚಾಲಕಿಯರ ಸ್ಥಿತಿ ನಿಜಕ್ಕೂ ಶೋಚನೀಯ, ತಿಂಗಳ ಋತುಚಕ್ರ ಸಹಿತ ಹಲವು ದೈಹಿಕ ಸಮಸ್ಯೆಗಳ ಜತೆಗೆ ಇತರ ಸಮಸ್ಯೆಗಳು ಸಾಮಾನ್ಯ. ಪಾಳಿ ವ್ಯವಸ್ಥೆ ಜಾರಿಗೆ ಬರುವುದು ಅತ್ಯಗತ್ಯ. ‘ಹವಾಮಾ’ ಈ ಬಗ್ಗೆ ತಕ್ಷಣ ಗಮನ ಹರಿಸಬೇಕು. ಪ್ರವಾಸಿಗರಿಗೆ ಸೌಲಭ್ಯ ಒದಗಿಸುವ ಈ ಸಾರಥಿಗಳ ಅಳಲಿಗೆ ಸ್ಪಂದಿಸಬೇಕು’ ಎಂದು ರಾಜ್ಯ ಪ್ರವಾಸಿ ಮಾರ್ಗದರ್ಶಿಗಳ ಸಂಘದ ಪ್ರಧಾನ ಕಾರ್ಯದರ್ಶಿ ವಿರೂಪಾಕ್ಷಿ ಎಂ.ಹಂಪಿ ಒತ್ತಾಯಿಸಿದರು.

ಶೀಘ್ರ ಕ್ರಮ–ಆಯುಕ್ತ ಭರವಸೆ: ‘ಚಾಲಕಿಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮನವರಿಕೆ ಆಗಿದೆ. ಹೆಚ್ಚುವರಿ ಚಾಲಕಿಯರು ಇದ್ದರೆ ಮಾತ್ರ ಪಾಳಿ ವ್ಯವಸ್ಥೆ ಮಾಡುವುದು ಸಾಧ್ಯ. ಹೀಗಾಗಿ ಇನ್ನೊಂದು ವಾರದಲ್ಲಿ ಹೊಸದಾಗಿ ಚಾಲಕಿಯರನ್ನು ನಿಯೋಜಿಸುವ ನಿಟ್ಟಿನಲ್ಲಿ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ. ಬಹುತೇತ ಒಂದೂವರೆ, ಎರಡು ತಿಂಗಳ ಒಳಗೆ ಪಾಳಿ ವ್ಯವಸ್ಥೆ ಜಾರಿಗೆ ಬರಬಹುದು’ ಎಂದು ‘ಹವಾಮಾ’ ಆಯುಕ್ತ ಮೊಹಮ್ಮದ್‌ ಅಲಿ ಅಕ್ರಂ ಷಾ ‘ಪ್ರಜಾವಾಣಿ’ಗೆ ತಿಳಿಸಿದರು.

’ಬ್ಯಾಟರಿ ವಾಹನಗಳ ಚಾರ್ಜಿಂಗ್ ಪಾಯಿಂಟ್ ಹೆಚ್ಚಿಸುವ ಮೂಲಕ ಪ್ರವಾಸಿಗರು ಹೆಚ್ಚು ಹೊತ್ತು ವಾಹನಕ್ಕಾಗಿ ಕಾಯುವುದನ್ನು ತಪ್ಪಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಕಳೆದ ವಾರ ತಿಳಿಸಿದ್ದರು. ಆದಾಗಲೇ ವಾಹನ ಚಾಲಕಿಯರ ಸಮಸ್ಯೆಯತ್ತಲೂ ಗಮನ ಹರಿಸುವಂತೆ ಕೋರಿಕೆಯ ಧ್ವನಿ ಜೋರಾಗಿದೆ.

ಹಂಪಿ ವಿಜಯ ವಿಠ್ಠಲ ದೇವಸ್ಥಾನಕ್ಕೆ ಪ್ರವಾಸಿಗರನ್ನು ಕರೆದೊಯ್ಯುವ ಬ್ಯಾಟರಿ ವಾಹನ
ಪ್ರವಾಸಿಗರಿಗೆ ಸೌಲಭ್ಯ ದೊರಕಿಸುವುದರ ಜತೆಗೆ ಬ್ಯಾಟರಿ ವಾಹನಗಳ ಚಾಲಕಿಯರಿಗೆ ಸಹ ಸೌಲಭ್ಯ ಒದಗಿಸಲು ’ಹವಾಮಾ’ ಪ್ರಯತ್ನಿಸುತ್ತಿದೆ
ಮೊಹಮ್ಮದ್ ಅಲಿ ಅಕ್ರಂ ಷಾ ಆಯುಕ್ತ ಹವಾಮಾ
‘ರಾತ್ರಿ ಬಸ್‌ ಬೇಕು’
‘ಈ  ಹಿಂದೆ ತಳವಾರಘಟ್ಟದಿಂದ ರಾತ್ರಿ 8 ಗಂಟೆ ಸುಮಾರಿಗೆ ಹೊರಡುವ ಕೆಕೆಆರ್‌ಟಿಸಿ ಬಸ್‌ ವ್ಯವಸ್ಥೆ ಇತ್ತು. ಸುಮಾರು ಮೂರು ತಿಂಗಳಿಂದ ಅದು ರದ್ದಾಗಿದೆ. ಪ್ರವಾಸಿಗರ ಸಂಖ್ಯೆ ಕಡಿಮೆ ಎಂಬ ಕಾರಣಕ್ಕೆ ಈ ಟ್ರಿಪ್‌ ರದ್ದಾಗಿರಬಹುದು. ಆದರೆ ಅದರಿಂದ ಬ್ಯಾಟರಿ ವಾಹನ ಚಾಲಕಿಯರ ಸಹಿತ ಹಲವರಿಗೆ ಅನುಕೂಲವಾಗುತ್ತಿತ್ತು. ಪ್ರಯಾಣಿಕರು ಇರಲಿ ಇಲ್ಲದಿರಲಿ ಕೊನೆಯ ಟ್ರಿಪ್‌ ಬಸ್‌ ಇರುವಂತೆ ನೋಡಿಕೊಳ್ಳಬೇಕು’ ಎಂದು ವಿರೂಪಾಕ್ಷಿ ಎಂ.ಹಂಪಿ ಅವರು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.