ADVERTISEMENT

ಹಂಪಿ ಕನ್ನಡ ವಿಶ್ವವಿದ್ಯಾಲಯ: ಶೀಘ್ರ ಹೊರಬರಲಿದೆ ಬಂಜಾರ–ಕನ್ನಡ ನಿಘಂಟು

ಶಶಿಕಾಂತ್ ಎಸ್. ಶೆಂಬೆಳ್ಳಿ
Published 15 ಡಿಸೆಂಬರ್ 2022, 19:30 IST
Last Updated 15 ಡಿಸೆಂಬರ್ 2022, 19:30 IST
ಹಂಪಿ ಕನ್ನಡ ವಿಶ್ವವಿದ್ಯಾಲಯ
ಹಂಪಿ ಕನ್ನಡ ವಿಶ್ವವಿದ್ಯಾಲಯ   

ಹೊಸಪೇಟೆ (ವಿಜಯನಗರ): ಲಂಬಾಣಿ ಸಮುದಾಯದ ಜನರಾಡುವ ಭಾಷೆಯ ಪದಗಳ ಸಂಗ್ರಹ ಗುಚ್ಛ ಬಂಜಾರ–ಕನ್ನಡ ನಿಘಂಟು ಸದ್ಯದಲ್ಲೇ ಹೊರಬರಲಿದೆ.

ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಬಂಜಾರ ಭಾಷಾ ಅಭಿವೃದ್ಧಿ ಅಧ್ಯಯನ ಕೇಂದ್ರದಿಂದ ಈ ಮಹತ್ತರ ಕೆಲಸವಾಗಿದೆ. ಒಟ್ಟು 10,222 ಪದಗಳನ್ನು ಸಂಗ್ರಹಿಸಿ ಪರಿಶೀಲಿಸಲಾಗಿದೆ. ಒಟ್ಟು ಪದಗಳಲ್ಲಿ ಕನ್ನಡ ವರ್ಣಮಾಲೆಯ ‘ಅ’ ದಿಂದ ‘ಣ’ ಅಕ್ಷರದ ವರೆಗೆ 4,745 ಪದಗಳನ್ನು ಒಳಗೊಂಡ ಮೊದಲ ಸಂಪುಟ ಸಿದ್ಧಗೊಂಡಿದೆ. ಅಚ್ಚುಕಾರ್ಯ ಪ್ರಗತಿಯಲ್ಲಿದ್ದು, ಇಷ್ಟರಲ್ಲೇ ಬಿಡುಗಡೆ ಹೊಂದಲಿದೆ.

ಮೊದಲ ಸಂಪುಟದಲ್ಲಿ ಬಂಜಾರ ಪದಗಳಿಗೆ ಕನ್ನಡ ಅರ್ಥ, ಇಂಗ್ಲಿಷ್‌ ಫೊನೆಟಿಕ್‌ ಲಿಪ್ಯಂತರ, ಬಂಜಾರ ಪದ ಪ್ರಯೋಗ, ಕನ್ನಡ ಅನುವಾದ, ವ್ಯಾಕರಣ ಸೂಚಕ ಪದಗಳು, ದೇವನಾಗರಿ ಲಿಪಿ ಹಾಗೂ ನಿಘಂಟುವಿಗೆ ಸಂಬಂಧಿಸಿದ ಛಾಯಾಚಿತ್ರಗಳನ್ನು ಸೇರಿಸಲಾಗಿದೆ. ಬಂಜಾರ –ಕನ್ನಡ ನಿಘಂಟುವಿಗೆ ತುಳು–ಕನ್ನಡ ನಿಘಂಟು, ಬ್ಯಾರಿ–ಕನ್ನಡ ನಿಘಂಟು, ಕೊಡವ–ನಿಘಂಟು, ಕನ್ನಡ ಜಾನಪದ ಕೋಶ, ಕನ್ನಡ ಜಾನಪದ ನಿಘಂಟುಗಳನ್ನು ಪರಿಶೀಲಿಸಿ ಶಬ್ದಾರ್ಥಗಳನ್ನು ಕೊಡಲಾಗಿದೆ.

ADVERTISEMENT

ಈಗಾಗಲೇ ಲಭ್ಯವಿರುವ ಬಂಜಾರ ಸಮುದಾಯದ ಬರಹಗಾರರ ಪುಸ್ತಕಗಳಿಂದ ಬಂಜಾರ ಭಾಷೆಯ ಹೊಸ ಪದಗಳನ್ನು ಸಂಗ್ರಹಿಸಲಾಗಿದೆ. ಜೊತೆಗೆ ಸಂಶೋಧನಾ ಪ್ರಬಂಧಗಳು, ರಾಜ್ಯದ ಬೇರೆ ಬೇರೆ ಪ್ರದೇಶಗಳಲ್ಲಿ ಕ್ಷೇತ್ರ ಕಾರ್ಯದ ಮೂಲಕ ಮಾಹಿತಿ ಸಂಗ್ರಹಿಸಲಾಗಿದೆ. ಬಂಜಾರರ ಮಹಾಕಾವ್ಯಗಳು, ಒಗಟುಗಳು, ಗಾದೆಗಳನ್ನು ಅಧ್ಯಯನ ಮಾಡಿ ಅವುಗಳಲ್ಲಿ ಬಂದಿರುವ ಸಾಂಸ್ಕೃತಿಕ ಹಳೆ ಪದಗಳನ್ನು ಸಂಗ್ರಹಿಸಿ ನಿಘಂಟುವಿಗೆ ದಾಖಲಿಸಲಾಗಿದೆ.

ಬಂಜಾರರ ಮೂಲ ಪದಗಳು, ದಿನನಿತ್ಯ ಬಳಸುವ ಪದಗಳು, ಕೃಷಿ ಬಳಕೆಯ ಪದಗಳು, ಸಸ್ಯ, ಪ್ರಾಣಿ ಪ್ರಭೇದದ ಪದಗಳು, ಉಡುಗೆ, ಆಭರಣ ಮುಂತಾದ ಪದಗಳನ್ನು ಸಂಗ್ರಹಿಸಿ ಸಚಿತ್ರ ಸಮೇತ ನಿಘಂಟುವಿಗೆ ಸೇರಿಸಲಾಗಿದೆ. ಬಂಜಾರ–ಕನ್ನಡ ನಿಘಂಟುವಿಗೆ ದೇವನಾಗರಿ ಲಿಪಿ ಸೇರಿಸಲಾಗಿದೆ.

ಬಂಜಾರರ ಗೋತ್ರಗಳು, ಅಳತೆ ಮಾಪನಗಳು, ಸಂಖ್ಯೆಗಳು, ಏಕಾಕ್ಷರ ಪದಗಳು, ದಿಕ್ಕುಗಳು, ಕಾಲಗಳು, ವಾರಗಳು, ತಿಂಗಳುಗಳು, ನಾಣ್ಯಗಳು, ರೂಪಾಯಿಗಳು, ಋತುಮಾನಗಳು, ಮಳೆ ನಕ್ಷತ್ರಗಳು ಹೀಗೆ ಪ್ರತ್ಯೇಕ ಅನುಬಂಧಗಳನ್ನು ಮಾಡಲಾಗಿದೆ.

2017ರಲ್ಲಿ ಕೆಲಸ ಆರಂಭ:ಬಂಜಾರ–ಕನ್ನಡ ನಿಘಂಟಿಗೆ ಸಂಬಂಧಿಸಿದ ಕೆಲಸ ಆರಂಭಗೊಂಡಿದ್ದು 2017ರಲ್ಲಿ. ಆದರೆ, ಅದಕ್ಕೆ ವೇಗ ಸಿಕ್ಕಿದ್ದು 2020ರಲ್ಲಿ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗ, ಭಾಷಾ ಅಧ್ಯಯನ ವಿಭಾಗದವರು ಸೇರಿಕೊಂಡು ಕೆಲಸ ಪ್ರಾರಂಭಿಸಿದರು. ಸುಮಾರು ಮೂರು ಸಾವಿರಕ್ಕೂ ಅಧಿಕ ಪದಗಳನ್ನು ಸಂಗ್ರಹಿಸಿ ಪರಿಶೀಲಿಸಿದರು. 2021ರ ಆಗಸ್ಟ್‌ನಲ್ಲಿ ಬಂಜಾರ ಭಾಷಾ ಅಭಿವೃದ್ಧಿ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ನೇಮಕಗೊಂಡ ಸಣ್ಣರಾಮ ಅವರು ಇನ್ನಷ್ಟು ವೇಗ ನೀಡಿದರು. ಹತ್ತು ಜನರ ಸಂಶೋಧಕರ ತಂಡ ರಚಿಸಿಕೊಂಡು, ಒಂದು ವರ್ಷದ ಆಸುಪಾಸಿನಲ್ಲಿ 7,000ಕ್ಕೂ ಅಧಿಕ ಪದಗಳ ಸಂಗ್ರಹ ಕಾರ್ಯ ನಡೆಸಿದರು. ಈಗ ಅವರ ಅವಧಿಯಲ್ಲೇ ನಿಘಂಟುವಿನ ಮೊದಲ ಸಂಪುಟ ಬಿಡುಗಡೆಗೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.