ADVERTISEMENT

ಮರಿಯಮ್ಮನಹಳ್ಳಿ: ಘನ ತ್ಯಾಜ್ಯ ವಿಲೇವಾರಿಯದ್ದೇ ಸಮಸ್ಯೆ

ಬೇರೆಡೆ ಸರ್ಕಾರಿ ಜಮೀನು ಗುರುತು: ತಹಶೀಲ್ದಾರ್‌ ಒಪ್ಪಿಗೆಗಾಗಿ ಕಾಯುತ್ತಿರುವ ಪ. ಪಂ

ಎಚ್.ಎಸ್.ಶ್ರೀಹರಪ್ರಸಾದ್
Published 9 ಜುಲೈ 2024, 7:02 IST
Last Updated 9 ಜುಲೈ 2024, 7:02 IST
ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯಿತಿ ಕಾರ್ಯಾಲಯದ ಹಿಂಭಾಗದ ಬಯಲಿನಲ್ಲಿ ಶೇಖರಣೆಯಾದ ಘನತ್ಯಾಜ್ಯ
ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯಿತಿ ಕಾರ್ಯಾಲಯದ ಹಿಂಭಾಗದ ಬಯಲಿನಲ್ಲಿ ಶೇಖರಣೆಯಾದ ಘನತ್ಯಾಜ್ಯ   

ಮರಿಯಮ್ಮನಹಳ್ಳಿ: ವೇಗವಾಗಿ ಬೆಳೆಯುತ್ತಿರುವ ಪಟ್ಟಣದಲ್ಲಿ ನಿತ್ಯ ಹಲವಾರು ಟನ್‍ನಷ್ಟು ಘನತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಆದರೆ ಶೇಖರಣೆಯಾದ ತ್ಯಾಜ್ಯ ವಿಲೇವಾರಿಗೆ ಸೂಕ್ತ ಸ್ಥಳದ್ದೇ ಸಮಸ್ಯೆಯಾಗಿದೆ.

18 ವಾರ್ಡ್‍ಗಳಿರುವ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನಿತ್ಯ ಮೂರು ಟನ್‍ನಷ್ಟು ಅಧಿಕ ತ್ಯಾಜ್ಯ ಶೇಖರಣೆಯಾಗುತ್ತಿದೆ. ಆದರೆ ಸ್ಥಳೀಯ ಆಡಳಿತದ ಸಿಬ್ಬಂದಿಗೆ ತ್ಯಾಜ್ಯವನ್ನು ಎಲ್ಲಿ ವಿಲೇವಾರಿ ಮಾಡಬೇಕೆನ್ನುವದ್ದೇ ದೊಡ್ಡ ಪ್ರಶ್ನೆಯಾಗಿದೆ.

ಹಿಂದೆ ಘನ ತ್ಯಾಜ್ಯ ಸಂಗ್ರಹಕ್ಕಾಗಿ 3 ಕಿ.ಮೀ. ದೂರದ ಅಯ್ಯನಹಳ್ಳಿ ಗ್ರಾಮದ ಸರ್ವೆ ನಂಬರ್ 40ರಲ್ಲಿ 9.50 ಎಕರೆ ಜಮೀನಿನಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ವಹಣೆ ಮಾಡಲು ಮಂಜೂರು ಮಾಡಲಾಗಿತ್ತು. ಅಲ್ಲದೆ ಅದೇ ಸ್ಥಳದಲ್ಲೇ ಕೆಲದಿನಗಳ ಕಾಲ ಘನ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗುತ್ತಿತ್ತು.

ADVERTISEMENT

ಆದರೆ ಆ ಜಮೀನಿನ ಮಧ್ಯ ಭಾಗದಲ್ಲಿ ಹರಿಯುವ ಹಳ್ಳದ ನೀರು ತುಂಗಭದ್ರಾ ಜಲಾಶಯದ ಹಿನ್ನೀರಿಗೆ ಸೇರುವುದರಿಂದ ಜಮೀನು ಪಕ್ಕದ ಲೋಕಪ್ಪನಹೊಲದ ಗ್ರಾಮಸ್ಥರು ತ್ಯಾಜ್ಯ ಸಂಗ್ರಹಕ್ಕೆ ಬಲವಾಗಿ ವಿರೋಧ ವ್ಯಕ್ತಪಡಿಸಿದ್ದರಿಂದ ತ್ಯಾಜ್ಯ ಸಂಗ್ರಹಕ್ಕೆ ತಡೆಯಾಗಿತ್ತು.

ನಂತರ ಕೆಲ ತಿಂಗಳು 8 ಕಿ.ಮೀ ದೂರದ ಹಾರುವನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ-50ರ ಬದಿಯಲ್ಲಿರುವ ಡಣಾಯಕನಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಘನತ್ಯಾಜ್ಯವನ್ನು ವಿಲೇವಾರಿ ಮಾಡಲಾಗುತ್ತಿತ್ತು.

ಅದಕ್ಕೂ ವಿರೋಧ ವ್ಯಕ್ತವಾದ್ದರಿಂದ 20 ಕಿ.ಮೀ ದೂರದ ಹೊಸಪೇಟೆ ಸಮೀಪದ ಕಾರಿಗನೂರು ಬಳಿಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕೆಲ ತಿಂಗಳು ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿತ್ತು. ಅದಕ್ಕೂ ತಡೆಯಾಗಿದ್ದರಿಂದ ಬೇರೆ ಮಾರ್ಗ ಇಲ್ಲದೆ ವರ್ಷದಿಂದ ಪಟ್ಟಣ ಪಂಚಾಯಿತಿ ಕಾರ್ಯಾಲಯದ ಹಿಂದಿನ ಬಯಲು ಸ್ಥಳದಲ್ಲೇ ಘನತ್ಯಾಜ್ಯವನ್ನು ವಿಲೇವಾರಿ ಮಾಡಲಾಗುತ್ತಿದೆ.

ಆದರೆ ಈ ಸ್ಥಳದ ಬೆನ್ನಿಗೇ ಜನವಸತಿ ಪ್ರದೇಶವಿದ್ದು, ಜೊತೆಗೆ ವಾರದ ಸಂತೆ ಮಾರುಕಟ್ಟೆ, ನಾಡಾ ಕಾರ್ಯಾಲಯ, ಹೊಲಿಗೆ ತರಬೇತಿ ಕೇಂದ್ರ ಸೇರಿದಂತೆ ಇಂದಿರಾ ಕ್ಯಾಂಟೀನ್ ನಿರ್ಮಾಣವಾಗುತ್ತಿರುವುದರಿಂದ ಸುತ್ತಮುತ್ತಲಿನ ಜನವಸತಿ ಪ್ರದೇಶ ಜನರು ತ್ಯಾಜ್ಯ ಸಂಗ್ರಹಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಘನತ್ಯಾಜ್ಯ ವಿಲೇವಾರಿ ಘಟಕಕ್ಕಾಗಿ ಈಗಾಗಲೇ ಬೇರಡೆ ಸರ್ಕಾರಿ ಜಮೀನು ಗುರುತಿಸಲಾಗಿದ್ದು, ಈ ಕುರಿತು ತಹಶೀಲ್ದಾರರಿಗೆ ಪತ್ರವನ್ನು ಬರೆಯಲಾಗಿದೆ ಎಂದು ಮುಖ್ಯಾಧಿಕಾರಿ ಖಾಜಾ ಮೈನುದ್ದೀನ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಸ್ಥಳೀಯರು ಸಂಗ್ರಹ ತ್ಯಾಜ್ಯವನ್ನು ವಿಲೇವಾರಿ ಮಾಡುವಂತೆ ಒತ್ತಾಯ ಮಾಡುತ್ತಿರುವುದರಿಂದ ತ್ಯಾಜ್ಯವನ್ನು ಹೊಸಪೇಟೆ ಬಳಿಯ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಾಗಿಸುವ ಕಾರ್ಯ ಕೈಗೊಳ್ಳಲಾಗಿದೆ
ಖಾಜಾ ಮೈನುದ್ದೀನ್ ಮುಖ್ಯಾಧಿಕಾರಿ ಪಟ್ಟಣ ಪಂಚಾಯಿತಿ ಮರಿಯಮ್ಮನಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.