ಹೊಸಪೇಟೆ (ವಿಜಯನಗರ): ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿ ಗುರುವಾರ ಸಂಜೆ ಅಪಾರ ಸಂಖ್ಯೆಯ ಭಕ್ತಸಮೂಹದ ನಡುವೆ ಶ್ರೀ ಗುರು ಕೊಟ್ಟೂರೇಶ್ವರರ ರಥೋತ್ಸವ ಸಡಗರ, ಸಂಭ್ರಮದಿಂದ ಜರುಗಿತು.
ಮಾಘ ಬಹುಳ ದಶಮಿಯ ಮೂಲ ನಕ್ಷತ್ರ ಕೂಡಿದಾಗ ಕೊಟ್ಟೂರೇಶ್ವರರು ಜೀವಂತ ಸಮಾಧಿಯಾಗಿದ್ದರು. ಆ ಸಂದರ್ಭದಲ್ಲೇ ಪ್ರತಿ ವರ್ಷವೂ ಸ್ವಾಮಿಯ ರಥೋತ್ಸವ ಜರುಗುವುದು ವಿಶೇಷ. ‘ಜಾತಿ ಹೀನನ ಮನೆಯ ಜ್ಯೋತಿ ತಾ ಹೀನವೇ, ಜಾತಿ ವಿಜಾತಿ ಎನಬೇಡ, ದೇವನೊಲಿದಾತನೇ ಜಾತ’ ಎಂಬ ಸ್ವಾಮಿಯ ಸಮಾನತೆಯ ವಾಣಿಯಂತೆ ಪಟ್ಟಣದ ಪರಿಶಿಷ್ಟ ಜಾತಿಯ ಸುಮಂಗಲೆಯರು ಆರತಿ ಬೆಳಗಿ, ನೈವೇದ್ಯ ಸಮರ್ಪಿಸಿದ ನಂತರ ಸ್ವಾಮಿ ರಥೋತ್ಸವ ಜರುಗುವುದು ಮತ್ತೊಂದು ವಿಶೇಷ.
ಬೆಳಿಗ್ಗೆ ಶ್ರೀ ಗುರು ಕೊಟ್ಟೂರೇಶ್ವರರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಅನಂತರ ವಿವಿಧ ಕಡೆಗಳಿಂದ ಅಪಾರ ಸಂಖ್ಯೆಯ ಭಕ್ತರು ಬಂದು ದೇವರ ದರ್ಶನ ಪಡೆದರು. ಇಡೀ ದಿನ ದೇಗುಲದ ಪರಿಸರದಲ್ಲಿ ಜನಜಾತ್ರೆ ಇತ್ತು. ಸರತಿ ಸಾಲಿನಲ್ಲಿ ತಡಹೊತ್ತು ನಿಂತು ಜನ ದೇವರ ದರ್ಶನ ಪಡೆದುಕೊಂಡರು. ಕೊಟ್ಟೂರೇಶ್ವರರ ದೇವಸ್ಥಾನದಿಂದ ಭಕ್ತರು ಪಲ್ಲಕ್ಕಿ ಹೊತ್ತು ತಂದರು. ಪರಿಶಿಷ್ಟ ಜಾತಿಯ ಮಹಿಳೆಯರು ಪೂಜೆ ಸಲ್ಲಿಸುವುದರೊಂದಿಗೆ ರಥೋತ್ಸವದ ಕಾರ್ಯಕ್ರಮಗಳು ಆರಂಭಗೊಂಡವು. ನಂದಿಧ್ವಜ, ನಂದಿಕೋಲು, ಸಮಾಳ್ ತಂಡಗಳು ಮೆರವಣಿಗೆಯಲ್ಲಿ ಸಾಗಿ ಮೆರುಗು ಹೆಚ್ಚಿಸಿದವು. ಅನಂತರ ತೇರಿನ ಸುತ್ತ ತಿರುಗಿದವು. ಈ ವೇಳೆ ರಥಕ್ಕೆ ಏಣಿ ಜೋಡಿಸಿ, ಶ್ರೀ ಗುರು ಕೊಟ್ಟೂರೇಶ್ವರರ ಉತ್ಸವಮೂರ್ತಿಯನ್ನು ಅದರೊಳಗೆ ಪ್ರತಿಷ್ಠಾಪಿಸಲಾಯಿತು. ಬಳಿಕ ನೆರೆದಿದ್ದ ಅಪಾರ ಭಕ್ತರ ನಡುವೆ ತೇರು ಎಳೆಯಲಾಯಿತು. ಭಕ್ತರು ಬಾಳೆಹಣ್ಣು ತೂರಿ ಹರಕೆ ತೀರಿಸಿದರು.
‘ಕೊಟ್ಟೂರು ದೊರೆಯೇ ನಿನಗಾರು ಸರಿಯೇ, ಸರಿ ಸರಿ ಅಂದವರ ಹಲ್ಲುಮುರಿವೆ ಬಹುಪರಾಕ್’ ಎಂದು ಭಕ್ತರ ಘೋಷಣೆ ಮುಗಿಲು ಮುಟ್ಟಿತು. ಎಲ್ಲೆಡೆ ಭಕ್ತಿ, ಸಂಭ್ರಮದ ವಾತಾವರಣ ಸೃಷ್ಟಿಯಾಗಿತ್ತು. ರಥಬೀದಿಯಲ್ಲಿ ತೇರು ಚಲಿಸುತ್ತಿದ್ದಂತೆ ರಸ್ತೆಬದಿ, ಕಟ್ಟಡಗಳ ಮೇಲೆ ಕುಳಿತಿದ್ದವರೆಲ್ಲರೂ ಅಲ್ಲಿಂದಲೇ ಎರಡು ಕೈಮುಗಿದು ನಮಸ್ಕರಿಸಿದರು. ಮಕ್ಕಳಿಗೂ ನಮಿಸಲು ಹೇಳಿದರು. ನಂತರ ತೇರು ರಥಬೀದಿಯಲ್ಲಿ ಚಲಿಸಿ, ಮೂಲ ಜಾಗ ಸೇರಿತು. ಮಧ್ಯಾಹ್ನ 2 ಗಂಟೆಯಿಂದ ಸಂಜೆ 7ರ ವರೆಗೆ ಮುಖ್ಯರಸ್ತೆಯಲ್ಲಿ ಜನಜಾತ್ರೆ ಇತ್ತು. ವಾಹನ ಸಂಚಾರ ಸ್ಥಗಿತಗೊಂಡಿತ್ತು. ಜನ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಲು ಪರದಾಡಿದರು.
ಅಂದಹಾಗೆ, ಕೊಟ್ಟೂರೇಶ್ವರನ ಸಾನ್ನಿಧ್ಯಕ್ಕೆ ಕಳೆದ ನಾಲ್ಕೈದು ದಿನಗಳಿಂದ ರಾಜ್ಯದ ವಿವಿಧ ಜಿಲ್ಲೆಗಳಿಂದ ಕಾಲ್ನಡಿಗೆಯಲ್ಲಿ ಭಕ್ತರು ಬರುತ್ತಿದ್ದಾರೆ. ರಥೋತ್ಸವಕ್ಕೂ ಮುನ್ನವೇ ಬಂದವರು ಪಟ್ಟಣದಲ್ಲಿಯೇ ಟೆಂಟ್‌ಗಳಲ್ಲಿ ಉಳಿದುಕೊಂಡು ಜಾತ್ರೆ ಮುಗಿಸಿಕೊಂಡು ಹಿಂತಿರುಗುತ್ತಾರೆ. ಪವಾಡ ಪುರುಷರೆಂದು ಗುರು ಕೊಟ್ಟೂರೇಶ್ವರರು ಹೆಸರಾಗಿದ್ದಾರೆ. ಸೌಹಾರ್ದತೆಯ ನೆಲೆಬೀಡು ಹೌದು. ಗ್ರಾಮೀಣ ಭಾಗದ ರೈತಾಪಿ ವರ್ಗದವರೇ ಜಾತ್ರೆಯಲ್ಲಿ ಹೆಚ್ಚಾಗಿ ಪಾಲ್ಗೊಳ್ಳುವುದು ವಿಶೇಷ. ಫೆ. 12ರಂದು ಧಾರ್ಮಿಕ ವಿಧಿ ವಿಧಾನಗಳು ಆರಂಭಗೊಂಡಿದ್ದವು. ರಥೋತ್ಸವ ಕೊನೆಗೊಂಡರೂ ಮುಂದಿನ ಒಂದು ವಾರದ ವರೆಗೆ ನಿರಂತರವಾಗಿ ಭಕ್ತರು ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆದು ಹೋಗುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.