ADVERTISEMENT

ದಶಕದ ನಂತರ ಒಂದೇ ವೇದಿಕೆಯಲ್ಲಿ ಕಾಣಿಸಿದ ಜನಾರ್ದನ ರೆಡ್ಡಿ ಸಹೋದರರು

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2022, 12:49 IST
Last Updated 10 ಏಪ್ರಿಲ್ 2022, 12:49 IST
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಕಾರ್ಯಕ್ರಮ ಉದ್ಘಾಟಿಸಿದ ಸಹೋದರರಾದ ಜಿ. ಕರುಣಾಕರ ರೆಡ್ಡಿ, ಸೋಮಶೇಖರ್‌ ರೆಡ್ಡಿ ಹಾಗೂ ಗಾಲಿ ಜನಾರ್ದನ ರೆಡ್ಡಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಕಾರ್ಯಕ್ರಮ ಉದ್ಘಾಟಿಸಿದ ಸಹೋದರರಾದ ಜಿ. ಕರುಣಾಕರ ರೆಡ್ಡಿ, ಸೋಮಶೇಖರ್‌ ರೆಡ್ಡಿ ಹಾಗೂ ಗಾಲಿ ಜನಾರ್ದನ ರೆಡ್ಡಿ   

ಹರಪನಹಳ್ಳಿ/ಹೊಸಪೇಟೆ (ವಿಜಯನಗರ): ಒಂದು ದಶಕದ ನಂತರ ಬಳ್ಳಾರಿಯ ರೆಡ್ಡಿ ಸಹೋದರರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು.

ಶಾಸಕ ಜಿ. ಕರುಣಾಕರ ರೆಡ್ಡಿ ಜನ್ಮದಿನದ ನಿಮಿತ್ತ ಭಾನುವಾರ ಹರಪನಹಳ್ಳಿಯಲ್ಲಿ ಏರ್ಪಡಿಸಿದ್ದ ಸೀತಾರಾಮ ಕಲ್ಯಾಣೋತ್ಸವದಲ್ಲಿ ಮೂವರು ಸಹೋದರರು ವೇದಿಕೆ ಹಂಚಿಕೊಂಡರು. ಕರುಣಾಕರ ರೆಡ್ಡಿ, ಶಾಸಕ ಸೋಮಶೇಖರ್‌ ರೆಡ್ಡಿ, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರಿದ್ದ ವೇದಿಕೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಾರಿಗೆ ಸಚಿವ ಬಿ. ಶ್ರೀರಾಮುಲು ಸೇರಿದಂತೆ ಹಲವು ಶಾಸಕರು, ಸಂಸದರು ಪಾಲ್ಗೊಂಡಿದ್ದರು.

ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ 2011ರಲ್ಲಿ ಜನಾರ್ದನ ರೆಡ್ಡಿ ಜೈಲು ಸೇರಿದ ನಂತರ ಮೂವರು ಸಹೋದರರು ಒಟ್ಟಿಗೆ ಸೇರಿರಲಿಲ್ಲ. ಅದರಲ್ಲೂ ಕರುಣಾಕರ ರೆಡ್ಡಿ ಅಂತರ ಕಾಯ್ದುಕೊಂಡಿದ್ದರು. ಆದರೆ, ಭಾನುವಾರ ಒಂದೇ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಂಡು, ಪರಸ್ಪರ ಮೆಚ್ಚುಗೆಯ ಮಾತುಗಳನ್ನು ಆಡುತ್ತ ಒಗ್ಗಟ್ಟು ಪ್ರದರ್ಶಿಸಿದರು.

ADVERTISEMENT
ಹರಪನಹಳ್ಳಿಯಲ್ಲಿ ಭಾನುವಾರ ಏರ್ಪಡಿಸಿದ್ದ ಸೀತಾರಾಮ ಕಲ್ಯಾಣ ಉತ್ಸವದಲ್ಲಿ ಶಾಸಕರಾದ ಜಿ. ಕರುಣಾಕರ ರೆಡ್ಡಿ, ಸೋಮಶೇಖರ್‌ ರೆಡ್ಡಿ, ಗಾಲಿ ಜನಾರ್ದನ ರೆಡ್ಡಿ, ಸಾರಿಗೆ ಸಚಿವ ಬಿ. ಶ್ರೀರಾಮುಲು ಪಾಲ್ಗೊಂಡಿದ್ದರು

ಜನಾರ್ದನ ರೆಡ್ಡಿ ಮಾತನಾಡಿ, ಶಾಸಕ, ಸಚಿವ, ಸಿ.ಎಂ. ಆಗಬೇಕೆಂಬ ಆಸೆ ನನಗಿಲ್ಲ. ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ 150 ಸ್ಥಾನಗಳಲ್ಲಿ ಗೆಲ್ಲಲು ನಾನು ಕೂಡ ಕೆಲಸ ಮಾಡಲು ಸಿದ್ಧ. ಹಿಂದೆ ಬಿ.ಎಸ್‌. ಯಡಿಯೂರಪ್ಪ ಅವರನ್ನು ಸಿ.ಎಂ. ಮಾಡಲು ಶ್ರಮಿಸಿದ್ದೆ. ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ 150 ಸ್ಥಾನಗಳಲ್ಲಿ ಗೆಲ್ಲಲು ಶ್ರಮಿಸುತ್ತೇನೆ. ಬಿಜೆಪಿ ಖಂಡಿತವಾಗಿಯೂ 150 ಸ್ಥಾನಗಳಲ್ಲಿ ಗೆಲ್ಲಲಿದೆ ಎಂದರು.

ಬಸವರಾಜ ಬೊಮ್ಮಾಯಿ ಮಾತನಾಡಿ, ಜನಾರ್ದನ ರೆಡ್ಡಿ ಅವರ ಮಾತುಗಳನ್ನು ಕೇಳಿ ಸಂತೋಷವಾಗಿದೆ. ಎಲ್ಲರೂ ಒಗ್ಗಟ್ಟಾಗಿ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇವೆ. ಅನೇಕ ವರ್ಷಗಳ ಕಾಲ ಬಳ್ಳಾರಿಯಲ್ಲಿ ಕೆಲವೇ ಮನೆತನದವರ ಪ್ರಭಾವ ಇತ್ತು. ಆದರೆ, ರೆಡ್ಡಿ ಸಹೋದರರು, ಶ್ರೀರಾಮುಲು ಅವರು ವ್ಯವಸ್ಥೆ ವಿರುದ್ಧ ಧ್ವನಿ ಎತ್ತಿ, ಜನರ ಪ್ರೀತಿ ವಿಶ್ವಾಸ ಗಳಿಸಿ ಬಿಜೆಪಿಯ ಬಾವುಟ ಹಾರಿಸಲು ಶ್ರಮಿಸಿದರು ಎಂದು ಕೊಂಡಾಡಿದರು.

ಜನಾರ್ದನ ರೆಡ್ಡಿ ಅವರನ್ನು ಪಕ್ಷಕ್ಕೆ ಕರೆ ತರುವ ಯೋಚನೆ ಇದೆಯೇ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ, ಈ ಬಗ್ಗೆ ಯಾವುದೇ ರೀತಿಯ ಚಿಂತನೆ ನಡೆದಿಲ್ಲ ಎಂದಷ್ಟೇ ಸಿಎಂ ಹೇಳಿದರು.

ಮಾಧುಸ್ವಾಮಿಯೊಂದಿಗೆ ಮಾತನಾಡುವೆ

ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಕೊಟ್ಟಿರುವ ಹೇಳಿಕೆ ಗಮನಿಸಿಲ್ಲ. ಅವರು ಯಾವ ಹಿನ್ನೆಲೆಯಲ್ಲಿ ಮಾತನಾಡಿದ್ದಾರೆ ಗೊತ್ತಿಲ್ಲ. ನಾನು ಅವರೊಂದಿಗೆ ಮಾತನಾಡುತ್ತೇನೆ. ಎಲ್ಲರೂ ಸಾಮರಸ್ಯದಿಂದ ಇದ್ದರೆ ಅಭಿವೃದ್ಧಿ ಸಾಧ್ಯ ಎಂದು ಬಸವರಾಜ ಬೊಮ್ಮಾಯಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.