ಹೊಸಪೇಟೆ (ವಿಜಯನಗರ): ‘ಬಡತನ, ಜನರ ದೌರ್ಬಲ್ಯವನ್ನು ಬಳಸಿಕೊಂಡು, ಹಣದ ಆಮಿಷ ತೋರಿಸಿ ಮತಾಂತರ ಮಾಡುತ್ತಿರುವುದು ಸರಿಯಾದುದಲ್ಲ’ ಎಂದು ‘ಆರ್ಟ್ ಆಫ್ ಲಿವಿಂಗ್’ ಸಂಸ್ಥಾಪಕ ರವಿಶಂಕರ್ ಗುರೂಜೀ ಹೇಳಿದರು.
ತಾಲ್ಲೂಕಿನ ಹಾರೋವನಹಳ್ಳಿ ಸಮೀಪದ ಫಾರ್ಮ್ ಹೌಸ್‌ನಲ್ಲಿ ಬುಧವಾರ ಏರ್ಪಡಿಸಿದ್ದ ಸತ್ಸಂಗದಲ್ಲಿ ಭಾಗವಹಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.
‘ಮತಾಂತರಕ್ಕಾಗಿಯೇ ವಿದೇಶಗಳಿಂದ ಅಪಾರ ಪ್ರಮಾಣದ ಹಣ ಭಾರತಕ್ಕೆ ಹರಿದು ಬರುತ್ತಿದೆ. ಹೊರದೇಶಗಳಿಂದ ಕೆಲವರು ಮತಾಂತರಕ್ಕಾಗಿಯೇ ನಮ್ಮ ದೇಶಕ್ಕೆ ಬರುತ್ತಿದ್ದಾರೆ. ಧರ್ಮ ಬೋಧನೆ ಹೆಸರಿನಲ್ಲಿ ಹೊರದೇಶಗಳಿಂದ ಬರುತ್ತಿರುವವರಲ್ಲಿ ಅನೇಕ ವಿದೇಶಿ ಯೋಜನೆಗಳು ಸಹ ಇರುತ್ತವೆ. ಆದರೆ, ಮತಾಂತರ ತುಂಬ ಚಿಂತಾಜನಕವಾದ ವಿಷಯ. ಬಡತನವನ್ನು ಬಳಸಿಕೊಂಡು ಅವರ ಧರ್ಮ ಬದಲಿಸುವ ಪದ್ಧತಿ ಸರಿಯಾದುದಲ್ಲ ಎಂದರು.
ಭಾರತದ ಶ್ರೇಷ್ಠತೆ, ಸಂಸ್ಕೃತಿ ಎತ್ತಿ ಹಿಡಿಯುವ ಕೆಲಸವಾಗಬೇಕಿದೆ. ಆತ್ಮಾಭಿಮಾನ, ಆತ್ಮವಿಶ್ವಾಸ ಹೆಚ್ಚಾದರೆ ಪ್ರತಿಯೊಬ್ಬರೂ ಅವರ ಧರ್ಮ, ಪರಂಪರೆ ಮುಂದುವರೆಸಿಕೊಂಡು ಹೋಗುತ್ತಾರೆ. ಬಡತನದಿಂದ ಮೇಲೆತ್ತುವ ಕೆಲಸ ಸಂಘ ಸಂಸ್ಥೆಗಳು ಈಗಾಗಲೇ ಮಾಡುತ್ತಿವೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.