ಹರಪನಹಳ್ಳಿ: ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಹರಪನಹಳ್ಳಿ ಕಾಂಗ್ರೆಸ್ ಪಕ್ಷದ ವಿವಿಧ ಬಣದ ಮುಖಂಡರ ಮನೆಗೆ ಭೇಟಿ ಕೊಟ್ಟು, ಪ್ರತಿಷ್ಠೆ, ಗುಂಪುಗಾರಿಕೆ ಮರೆತು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ, ಪತ್ನಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರ ಗೆಲುವಿಗೆ ಶ್ರಮಿಸುವಂತೆ ಕರೆ ನೀಡುವ ಮೂಲಕ ಭಿನ್ನಮತ ಶಮನಕ್ಕೆ ಮುಂದಾಗಿದ್ದಾರೆ.
ಮಾಜಿ ಸಚಿವ ಪಿ.ಟಿ. ಪರಮೇಶ್ವರನಾಯ್ಕ, ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ್, ಪಿ. ಮಹಾಬಲೇಶ್ವರ ಗೌಡ, ಎಂ.ಪಿ. ವೀಣಾ ಮಹಾಂತೇಶ್ ಅವರ ಮನೆಗಳಿಗೆ ತೆರಳಿ, ಪಕ್ಷದ ಅಭ್ಯರ್ಥಿ ಗೆಲ್ಲಿಸಲು ಎಲ್ಲರೂ ಬೆಂಬಲ ಸೂಚಿಸುವಂತೆ ಮನವಿ ಮಾಡಿದರು.
ಪಕ್ಷದ ಮುಖಂಡರ ನಡುವೆ ಆಂತರಿಕ ಭಿನ್ನಾಭಿಪ್ರಾಯ ಸಹಜ. ಪಕ್ಷ ಟಿಕೆಟ್ ಕೊಟ್ಟಿರುವ ಅಭ್ಯರ್ಥಿ ಗೆಲ್ಲಿಸುವುದು ನಮ್ಮೆಲ್ಲರ ಜವಾಬ್ದಾರಿ. ಭಿನ್ನಮತ ಮರೆತು ಮುಖಂಡರು ಎಲ್ಲರೂ ಒಂದೇ ವೇದಿಕೆಯಲ್ಲಿ ಸಂಘಟಿತರಾಗಿ ಪಕ್ಷ ಬಲಪಡಿಸೋಣ ಎಂದು ತಿಳಿಸಿದರು.
ಶೀಘ್ರ ಹರಪನಹಳ್ಳಿಯ ಮೂರು ಕಡೆಗೆ ಕಾರ್ಯಕ್ರಮ, ತಾಲ್ಲೂಕು ಕೇಂದ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ರೋಡ್ ಶೋ ಬಗ್ಗೆಯು ಚರ್ಚಿಸಿದ್ದಾರೆ ಎನ್ನಲಾಗಿದೆ. ವಿದಾನ ಪರಿಷತ್ ಮಾಜಿ ಸದಸ್ಯ ಕೆ.ಸಿ. ಕೊಂಡಯ್ಯ, ಬ್ಲಾಕ್ ಸಮಿತಿ ಅಧ್ಯಕ್ಷರು, ಮುಖಂಡರಿದ್ದರು.
ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಮಾತನಾಡಿ, ‘ದಾವಣಗೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಲಿದ್ದು, ಹರಪನಹಳ್ಳಿ ಕಾಂಗ್ರೆಸ್ ಪಕ್ಷದ ಮುಖಂಡರಲ್ಲಿ ಭಿನ್ನಮತವಿಲ್ಲ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.