ADVERTISEMENT

ಹೊಸಪೇಟೆ | ಗ್ಯಾರಂಟಿ: ಶೇ 96 ಫಲಾನುಭವಿಗಳಿಗೆ ಸೌಲಭ್ಯ

ಉಳಿತಾಯದ ಹಣ ಶಿಕ್ಷಣಕ್ಕೆ ಬಳಕೆ: ಮೆಹರೋಜ್‌ ಖಾನ್‌ ಸಂತಸ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2024, 14:39 IST
Last Updated 28 ಆಗಸ್ಟ್ 2024, 14:39 IST
ಹೊಸಪೇಟೆಯಲ್ಲಿ ಬುಧವಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತು ಎಸ್.ಆರ್. ಮೆಹರೋಜ್‌ ಖಾನ್ ಅವರು ಫಲಾನುಭವಿಗಳು ಮತ್ತು ಅಧಿಕಾರಿಗಳ ಸಭೆ ನಡೆಸಿದರು
ಹೊಸಪೇಟೆಯಲ್ಲಿ ಬುಧವಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತು ಎಸ್.ಆರ್. ಮೆಹರೋಜ್‌ ಖಾನ್ ಅವರು ಫಲಾನುಭವಿಗಳು ಮತ್ತು ಅಧಿಕಾರಿಗಳ ಸಭೆ ನಡೆಸಿದರು   

ಹೊಸಪೇಟೆ (ವಿಜಯನಗರ): ‘ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳು ವಿಜಯನಗರ ಜಿಲ್ಲೆಯಲ್ಲಿ ಶೇ 96ರಷ್ಟು ಮಂದಿಗೆ ತಲುಪಿದೆ’ ಎಂದು ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಕಲಬುರಗಿ ವಿಭಾಗದ ಉಪಾಧ್ಯಕ್ಷ ಎಸ್‌.ಆರ್.ಮೆಹರೋಜ್‌ ಖಾನ್‌ ಹೇಳಿದರು.

ಬುಧವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಫಲಾನುಭವಿಗಳ ಜತೆಗೆ ಸಂವಾದ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

‘ಇನ್ನೂ ಶೇ 4ರಷ್ಟು ಫಲಾನುಭವಿಗಳಿಗೆ ಯೋಜನೆ ತಲುಪುವುದು ಬಾಕಿ ಉಳಿದಿದೆ. ಅದರತ್ತ ವಿಶೇಷ ಗಮನ ಹರಿಸಲಾಗುತ್ತದೆ’ ಎಂದರು.

ADVERTISEMENT

‘ಜಿಲ್ಲೆಯಲ್ಲಿನ ಗ್ಯಾರಂಟಿ ಫಲಾನುಭವಿಗಳು ಸರ್ಕಾರದ ಯೋಜನೆಯಿಂದ ಬಹಳ ಖುಷಿಪಟ್ಟಿದ್ದಾರೆ. ಕೆಲವು ತಾಂತ್ರಿಕ ಕಾರಣಗಳಿಂದ ಕೆಲವರಿಗೆ ಸೌಲಭ್ಯ ತಲುಪಿಲ್ಲ, ಅಂತಹ ಸಮಸ್ಯೆಗಳನ್ನು ಶೀಘ್ರ ಪರಿಹರಿಸಲು ಪ್ರಯತ್ನಿಸಲಾಗುವುದು. ಇದು ಪಕ್ಷಾತೀತವಾಗಿ ಎಲ್ಲ ಅರ್ಹರಿಗೂ ಸಿಗಬೇಕಾದ ಸೌಲಭ್ಯ. ಹೀಗಾಗಿ ಪ್ರಾಧಿಕಾರ ವಿಶೇಷ ಕಾಳಜಿಯಿಂದ ಪ್ರತಿ ಜಿಲ್ಲೆಯಲ್ಲಿ ಪ್ರಗತಿ ಪರಿಶೀಲನೆ ನಡೆಸುತ್ತಿದೆ’ ಎಂದು ಅವರು ಹೇಳಿದರು.

‘ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆಗಳಿಂದ ಉಳಿತಾಯವಾದ ಹಣವನ್ನು ಮಕ್ಕಳ ಹಾಸ್ಟೆಲ್‌ ಶುಲ್ಕ, ಪುಸ್ತಕ ಖರೀದಿಯಂತಹ ಶೈಕ್ಷಣಿಕ ವೆಚ್ಚಕ್ಕೆ ಬಳಸಿದ್ದು ಫಲಾನುಭವಿಗಳ ಮಾತಿನಿಂದ ತಿಳಿಯಿತು. ಪರೋಕ್ಷವಾಗಿ ಈ ದುಡ್ಡು ಮಕ್ಕಳ ಶಿಕ್ಷಣಕ್ಕೆ ಬಳಕೆಯಾಗುತ್ತಿರುವುದು ಒಂದು ಆಶಾಕಿರಣ’ ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್ ಅಲಿ ಅಕ್ರಂ ಷಾ, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕುರಿ ಶಿವಮೂರ್ತಿ ಇದ್ದರು.

ಅಂಕಿ ಅಂಶ

₹582.58 ಕೋಟಿ

2.85 ಲಕ್ಷ ಗೃಹಲಕ್ಷ್ಮಿ ಫಲಾನಭವಿಗಳಿಗೆ ಹಂಚಿದ ದುಡ್ಡು

₹133.59 ಕೋಟಿ

2.78 ಲಕ್ಷ ಮಂದಿಯ ಗೃಹಜ್ಯೋತಿ ಬಿಲ್‌ಗಳಿಗೆ ಪಾವತಿಸಿದ ಮೊತ್ತ

₹ 2 ಕೋಟಿ

6,704 ಯುವನಿಧಿ ಫಲಾನುಭವಿಗಳಿಗೆ ನೀಡಿದ ಮೊತ್ತ

₹187.72 ಕೋಟಿ

2.99 ಅನ್ನಭಾಗ್ಯ ಫಲಾನುಭವಿಗಳಿಗೆ ಪಾವತಿಸಿದ ಅಕ್ಕಿಯ ಮೊತ್ತ

₹153.95 ಕೋಟಿ

4.01 ಕೋಟಿ ಮಹಿಳಾ ಪ್ರಯಾಣಿಕರ 4.17 ಕೋಟಿ ಬಸ್‌ಟ್ರಿಪ್‌ಗೆ ಕೊಟ್ಟ ಟಿಕೆಟ್ ಮೊತ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.