ಹೊಸಪೇಟೆ (ವಿಜಯನಗರ): ಆಂಧ್ರ ಪ್ರದೇಶದ ಕೃಷ್ಣಪಟ್ಟಣಂನ ನಾಟಿ ವೈದ್ಯ ಆನಂದಯ್ಯನವರು ಗಿಡಮೂಲಿಕೆಗಳಿಂದ ತಯಾರಿಸಿದ ಕೋವಿಡ್ ಔಷಧ ವಿತರಣೆಯನ್ನು ಜಿಲ್ಲಾಡಳಿತವು ತಡೆದಿರುವುದರಿಂದ ಮಂಗಳವಾರ ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ಸೇರಿದ್ದ ಜನ ಔಷಧ ಪಡೆಯಲಾರದೆ ನಿರಾಸೆಯಿಂದ ಹಿಂತಿರುಗಿದರು.
ಆರ್ಯ ವೈಶ್ಯ ಸಮಾಜವು ಸಮಾಜದ 100 ಕುಟುಂಬಗಳಿಗೆ ಔಷಧ ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಅದಕ್ಕಾಗಿ ಸಮಾಜದವರಿಗೆ ವಿಷಯ ತಿಳಿಸಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಬಂದಿದ್ದರು. ಆದರೆ, ಜಿಲ್ಲಾಡಳಿತ ಔಷಧ ವಿತರಣೆಗೆ ತಡೆ ಒಡ್ಡಿದ್ದರಿಂದ ಅವರು ಬರಿಗೈಲಿ ವಾಪಸಾದರು.
‘ಔಷಧ ವಿತರಣೆಗೆ ಅನುಮತಿ ಪಡೆದುಕೊಂಡ ನಂತರ ವಿತರಿಸಬೇಕೆಂದು ಅಧಿಕಾರಿಗಳು ತಿಳಿಸಿದ್ದಾರೆ. ಹಾಗಾಗಿ ಇಂದು ಔಷಧ ವಿತರಿಸಲಿಲ್ಲ. ಅನುಮತಿ ಪಡೆದ ನಂತರ ವಿತರಿಸಲು ತೀರ್ಮಾನಿಸಲಾಗಿದೆ. ಸಮಾಜದವರಿಗೆ ಉಚಿತವಾಗಿ ಔಷಧ ವಿತರಿಸಲು ಉದ್ದೇಶಿಸಲಾಗಿತ್ತು’ ಎಂದು ಆರ್ಯ ವೈಶ್ಯ ಸಮಾಜದ ಮುಖಂಡ ನರಸಿಂಹಮೂರ್ತಿ ತಿಳಿಸಿದ್ದಾರೆ.
‘ಜಿಲ್ಲಾಡಳಿತದಿಂದ ಅನುಮತಿ ಪಡೆದುಕೊಳ್ಳದೆಯೇ ಔಷಧ ವಿತರಣೆಗೆ ಮುಂದಾಗಿದ್ದರು. ಹೀಗಾಗಿ ಅವರನ್ನು ತಡೆಯಲಾಗಿದೆ’ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಭಾಸ್ಕರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.
ಇತ್ತೀಚೆಗೆ ತಾಲ್ಲೂಕಿನ ಕಮಲಾಪುರದಲ್ಲಿ 500 ಕುಟುಂಬಗಳಿಗೆ ಔಷಧ ವಿತರಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.