ADVERTISEMENT

ಕೊಟ್ಟೂರು: ಕಮರುತ್ತಿದೆ ಕಮ್ಮಾರರ ಕುಲಕಸಬು

ಬೆಂಕಿ, ಕಾದ ಕಬ್ಬಿಣದಂತೆ ಉರಿಯುತ್ತಿರುವ ಬದುಕು

ಗುರುಪ್ರಸಾದ್‌ ಎಸ್‌.ಎಂ
Published 17 ಜೂನ್ 2023, 23:46 IST
Last Updated 17 ಜೂನ್ 2023, 23:46 IST
17ಕೆಟಿಆರ್ ಇಪಿ1- ಕೊಟ್ಟೂರು ತಾಲ್ಲೂಕಿನ ಗಂಗಮ್ಮನಹಳ್ಳಿಯಲ್ಲಿ ಕಮ್ಮಾರರು ಕಮ್ಮಾರಿಕೆ ಮಾಡುತ್ತಿರುವುದು.
17ಕೆಟಿಆರ್ ಇಪಿ1- ಕೊಟ್ಟೂರು ತಾಲ್ಲೂಕಿನ ಗಂಗಮ್ಮನಹಳ್ಳಿಯಲ್ಲಿ ಕಮ್ಮಾರರು ಕಮ್ಮಾರಿಕೆ ಮಾಡುತ್ತಿರುವುದು.   

ಕೊಟ್ಟೂರು: ಆಧುನಿಕ ಯಂತ್ರೋಪಕರಣಗಳ ಭರಾಟೆಯಲ್ಲಿ ಕುಲಕಸುಬುಗಳಾದ ಕಮ್ಮಾರಿಕೆ, ನೇಕಾರಿಕೆ, ಕುಂಬಾರಿಕೆ, ಬಡಿಗೆ, ಮೇದಾರ, ಬಳೆಗಾರ, ಅಕ್ಕಸಾಲಿಗರು ಹೀಗೆ ವಿವಿಧ ರೀತಿಯ ಉಪಕಸುಬುಗಳು ದಿನದಿಂದ ದಿನಕ್ಕೆ ಅವಸಾನದ ಅಂಚಿಗೆ ತಲುಪುತ್ತಿವೆ.

ಇವರಿಗೆ ತಮ್ಮ ಕಸುಬು ಬಿಟ್ಟರೆ ಯಾವ ಕೆಲಸವು ಗೊತ್ತಿಲ್ಲ ಅದರ ಬಗ್ಗೆ ಅವರನ್ನು ವಿಚಾರಿಸಿದಾಗ ನಮ್ಮ ಮನೆತನದಲ್ಲಿ ತಲೆ ತಲಾಂತರದಿಂದ ಬಂದ ಕಸುಬಾಗಿದೆ. ಇದೇ ನಮ್ಮ ಜೀವನಕ್ಕೆ ಆಧಾರ ಎನ್ನುತ್ತಾರೆ ಕಮ್ಮಾರ ಲೋಕೇಶಪ್ಪ.

ಕಾಯಕವೇ ಕೈಲಾಸ ಎಂದು 12ನೇ ಶತಮಾನದಲ್ಲಿ ಕಾಯಕ ಯೋಗಿ ಬಸವಣ್ಣನವರ ಮಾತು ಬಹುಶಃ ಈ ವೃತ್ತಿಯಲ್ಲಿ ನಿರತರಾದ ಕಮ್ಮಾರರಿಗೆ ಹಿಡಿದ ಕೈಗನ್ನಡಿಯಾಗಿದೆ.

ADVERTISEMENT

ಇಂದಿನ ಆಧುನೀಕರಣವೆಂಬ ಪೆಡಂಭೂತ ಕಸುಬುದಾರರ ಜೀವನದ ಜೊತೆಗೆ ಅಟವಾಡುತ್ತಿದೆಯಲ್ಲದೆ ಇಡೀ ಶ್ರಮಿಕವರ್ಗದವರ ನಿದ್ದೆಗೆಡುಸುತ್ತಿರುವುದು ಅಷ್ಟೇ ಕಟುಸತ್ಯವಾಗಿದೆ.

ಅಧುನಿಕ ಕೃಷಿ ಉಪಕರಣಗಳ ಆಗಮನದಿಂದ ಶ್ರಮಿಕ ವರ್ಗದವರ ಎದೆ ಮೇಲೆ ಕಲ್ಲು ಚಪ್ಪಡಿ ಎಳೆದಂತಾಗಿದೆ ಇದರಿಂದ ಈ ವರ್ಗದವರ ಬದುಕು ತ್ರಿಶಂಕು ಸ್ಥಿತಿಯಲ್ಲಿರುವುದು ಶೋಚನೀಯವಾಗಿದೆ.

ಇಂದು ಹೊಲವನ್ನು ಹದ ಮಾಡಿ ಬೀಜ ಬಿತ್ತುವುದರಿಂದ ಹಿಡಿದು ಬೆಳೆ ಕಟಾವು ಮಾಡುವವರೆಗೂ ಯಂತ್ರೋಪಕರಣಗಳು ರೈತರ ಬದುಕಿನಲ್ಲಿ ಹೆಜ್ಜೆ ಇಟ್ಟಿದ್ದು ಒಂದು ವಿಧದಲ್ಲಿ ಒಳ್ಳೆಯದೇ ಆಗಿದ್ದರೂ ಸಹ ಆಧುನೀಕರಣದ ಹಿಂದೆ ಲಕ್ಷಾಂತರ ಕೈ ಕಸುಬಿನ ಜನರ ಒಡಲಾಳದ ನೋವನ್ನು ಬಹುಶಃ ಯಾರೊಬ್ಬರು ಲೆಕ್ಕಿಸಿಲ್ಲ.

ಕುಲುಮೆಯಲ್ಲಿ ಕಬ್ಬಿಣವನ್ನು ಕಾಸಿ ಹದ ಮಾಡಿ ಬಡಿದು ವಿವಿಧ ಆಕಾರಗಳಿಗೆ ಪರಿವರ್ತಿಸುವುದು ಇವರ ಪ್ರಮುಖ ಕಾಯಕವಾಗಿದೆ. ಕುರ್ಚಿಗಿ, ಕುಡುಗೋಲು, ಕುಳ, ಕೊಡಲಿ, ಕಂದ್ಲಿ , ಹಾರೆ ಹಾಗೂ ಗುದ್ಲಿ ಮುಂತಾದ ಸಾಮಾಗ್ರಿಗಳನ್ನು ತಯಾರಿಸುವುದು ಹಾಗೂ ಮೊನಚುಗೊಳಿಸುವುದು ಇವರ ದೈನಂದಿನ ಬದುಕು.

ಮುಂಗಾರು ಹಂಗಾಮಿನಲ್ಲಿ ಹಳ್ಳಿಗಳಲ್ಲಿ ಬೀಡು ಬಿಟ್ಟು ರೈತಾಪಿ ಸಾಮಗ್ರಿಗಳನ್ನು ನಾವೇ ತಯಾರಿಸಿ ಮಾರುವುದರಿಂದ ಹಣವನ್ನಾಗಲಿ ಆಥವಾ ಕಾಳುಕಡಿಯನ್ನಾಗಲಿ ಪಡೆದು ಹಳ್ಳಿಯಿಂದ ಹಳ್ಳಿಗೆ ತೆರಳುತ್ತಾ ಜೀವನ ಸಾಗಿಸುತ್ತಿದ್ದೇವೆ ಎಂದು ತಾಲ್ಲೂಕಿನ ಗಂಗಮ್ಮನಹಳ್ಳಿಯಲ್ಲಿ ಬೀಡು ಬಿಟ್ಟ ಹಳ್ಳಿಯಿಂದ ಹಳ್ಳಿಗೆ ಸಂಚರಿಸುವ ಕಮ್ಮಾರ ದಿನೇಶ್ ನೋವಿನಿಂದ ಹೇಳುತ್ತಾರೆ.

‘ನಮ್ಮ ಸಮಾಜದಲ್ಲಿ ಇಂತಹ ಕುಲಕಸುಬುಗಳು ಕ್ರಮೇಣವಾಗಿ ಕಣ್ಮರೆಯಾಗುತ್ತಿರುವುದು ಬೇಸರದ ಸಂಗತಿಯಾಗಿದೆ’ ಎಂದು ಚಿರಿಬಿ ಗ್ರಾಮದ ಕಿರಣ್ ಯಾದವ್ ಹೇಳುತ್ತಾರೆ.

ಕಾಲನ ಹೊಡೆತಕ್ಕೆ ಸಿಲುಕಿ ಶ್ರಮದಾಯಕ ಬದಕನ್ನು ಅಪ್ಪಿಕೊಳ್ಳದ ಕುಲಕಸಿಬಿನ ಜನ ಬೇರೊಂದು ಉದ್ಯೋಗ ಅರಿಸಿ ಮಹಾನಗರದತ್ತ ತೆರಳಿದ್ದರೆ, ಅಳಿದುಳಿದವರು ಅನಿವಾರ್ಯವಾಗಿ ತಮ್ಮ ಕುಲದ ಕಾಯಕ ಮುಂದುವರಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.