ಹೊಸಪೇಟೆ: ನಗರದಲ್ಲಿ ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮಾಡಲಾಗಿದ್ದು, ಅವುಗಳನ್ನು ಕೂಡಲೇ ತೆರವುಗೊಳಿಸುವಂತೆ ಆಗ್ರಹಿಸಿ ಫೆಡರೇಶನ್ ಆಫ್ ಕರ್ನಾಟಕ ಆಟೊ ರಿಕ್ಷಾ ಡ್ರೈವರ್ಸ್ ಯೂನಿಯನ್ಸ್ ಕಾರ್ಯಕರ್ತರು ಗುರುವಾರ ಇಲ್ಲಿನ ನಗರಸಭೆ ಎದುರು ಪ್ರತಿಭಟನೆ ನಡೆಸಿದರು.
ಬಳಿಕ ಪೌರಾಯುಕ್ತ ಮನ್ಸೂರ್ ಅಲಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ನಗರದ ಬಹುತೇಕ ಪಾದಚಾರಿ ಮಾರ್ಗಗಳನ್ನು ಕೆಲವರು ಅತಿಕ್ರಮಿಸಿಕೊಂಡಿದ್ದಾರೆ. ಇಷ್ಟೇ ಅಲ್ಲ, ದಿನಸಿ, ಹೋಟೆಲ್, ಎಲೆಕ್ಟ್ರಾನಿಕ್ ಸೇರಿದಂತೆ ಇತರೆ ಮಳಿಗೆಗಳನ್ನು ನಿರ್ಮಿಸಿ, ಬೇರೆಯವರಿಗೆ ಬಾಡಿಗೆ ಕೊಟ್ಟು ಹಣ ಗಳಿಸುತ್ತಿದ್ದಾರೆ. ಒಂದೆಡೆ ಪಾದಚಾರಿ ಮಾರ್ಗದ ಒತ್ತುವರಿಯಿಂದ ಜನಸಾಮಾನ್ಯರು ಓಡಾಡಲು ಸಮಸ್ಯೆಯಾಗುತ್ತಿದೆ. ಮುಖ್ಯ ರಸ್ತೆಗಳಲ್ಲೇ ಜನ ಓಡಾಡುತ್ತಿರುವುದರಿಂದ ಅಪಘಾತಗಳಿಗೆ ಕಾರಣವಾಗುತ್ತಿದೆ. ಇನ್ನೊಂದೆಡೆ, ಕೆಲವರು ಇದನ್ನೇ ಹಣ ಗಳಿಸುವ ದಂದೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಈಗಾಗಲೇ ವಿಜಯನಗರ ಜಿಲ್ಲಾ ಕೇಂದ್ರವಾಗಿ ಘೋಷಣೆಯಾಗಿದೆ. ಹೊಸಪೇಟೆ ಜಿಲ್ಲಾ ಕೇಂದ್ರವಾಗಿದೆ. ಈಗಾಗಲೇ ನಗರ ವೇಗವಾಗಿ ಬೆಳೆಯುತ್ತಿದೆ. ಜನಸಂಖ್ಯೆ ಹೆಚ್ಚಾಗುತ್ತಿದೆ. ಮೊದಲೇ ಹೇಳಿ ಕೇಳಿ ಹೊಸಪೇಟೆ ಪ್ರವಾಸಿ ಕೇಂದ್ರ. ಹೆಚ್ಚಿನ ಸಂಖ್ಯೆಯ ಜನ ನಿತ್ಯ ಬಂದು ಹೋಗುತ್ತಿರುತ್ತಾರೆ.ಅತಿಕ್ರಮಿಸಿರುವ ಪಾದಚಾರಿ ಮಾರ್ಗದಲ್ಲಿನ ಕಟ್ಟಡಗಳನ್ನು ತೆರವುಗೊಳಿಸಿ, ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ನಗರದಲ್ಲಿ ವಾಹನ ದಟ್ಟಣೆಯೂ ಅಧಿಕವಾಗಿದೆ. ಭಾರಿ ವಾಹನಗಳು ನಗರದೊಳಗೆ ಓಡಾಡುತ್ತಿವೆ. ಅದಕ್ಕೆ ಕಡಿವಾಣ ಹಾಕಬೇಕು. ದ್ವಿಚಕ್ರ ವಾಹನ, ಕಾರು ನಿಲುಗಡೆಗೆ ಪ್ರತ್ಯೇಕ ಜಾಗ ಗುರುತಿಸಬೇಕು. ಕೆಲ ರಸ್ತೆಗಳಲ್ಲಿ ಏಕಮುಖ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು. ಆಟೊ ನಿಲ್ದಾಣಗಳನ್ನು ಗುರುತಿಸಿ, ನಾಮಫಲಕ ಅಳವಡಿಸಬೇಕು ಎಂದು ಒತ್ತಾಯಿಸಿದರು.
ಯೂನಿಯನ್ಸ್ ಅಧ್ಯಕ್ಷ ಕೆ.ಎಂ. ಸಂತೋಷಕುಮಾರ್, ಪ್ರಧಾನ ಕಾರ್ಯದರ್ಶಿ ಬಿ.ಎಸ್. ಯಮುನಪ್ಪ, ಖಜಾಂಚಿ ಎಸ್. ಅನಂತಶಯನ, ಕಾರ್ಯಕರ್ತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.