ADVERTISEMENT

ವಿಜಯನಗರ ಜಿಲ್ಲೆ: 3 ತಾಲ್ಲೂಕುಗಳು ನಾಪತ್ತೆ

ರಾಜ್ಯದ ಅಭಿವೃದ್ಧಿ ಕಾರ್ಯಗಳನ್ನು ಜಾರಿಗೊಳಿಸುವ ಉದ್ದೇಶ– ಉಸ್ತುವಾರಿ ಅಧಿಕಾರಿಗಳ ನೇಮಕ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2023, 15:28 IST
Last Updated 31 ಡಿಸೆಂಬರ್ 2023, 15:28 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಹೊಸಪೇಟೆ (ವಿಜಯನಗರ): ರಾಜ್ಯದ ಸಾಮಾಜಿಕ, ಆರ್ಥಿಕ ಮತ್ತು ಭೌತಿಕ ಅಭಿವೃದ್ಧಿ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದಕ್ಕಾಗಿ ಹಿರಿಯ ಕೆಎಎಸ್‌ ಅಧಿಕಾರಿಗಳನ್ನು ತಾಲ್ಲೂಕು ಉಸ್ತುವಾರಿ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ.

ಬಳ್ಳಾರಿ ಜಿಲ್ಲೆಯ ಐದೂ ತಾಲ್ಲೂಕುಗಳಿಗೆ ಅಧಿಕಾರಿಗಳ ನೇಮಕವಾಗಿದ್ದರೆ, ವಿಜಯನಗರ ಜಿಲ್ಲೆಯ ಮೂರು ತಾಲ್ಲೂಕುಗಳಿಗೆ ನೇಮಕವಾಗಿದೆ ಹಾಗೂ ಇತರ ಮೂರು ತಾಲ್ಲೂಕುಗಳ ಅಧಿಕಾರಿಗಳ ಪಟ್ಟಿ ನಾಪತ್ತೆಯಾಗಿದೆ.

ಬಳ್ಳಾರಿ ಜಿಲ್ಲೆಯ ಬಳ್ಳಾರಿ ತಾಲ್ಲೂಕು ಉಸ್ತುವಾರಿ ಅಧಿಕಾರಿಯನ್ನಾಗಿ ಎಡಿಸಿ ಮೊಹಮದ್‌ ಜುಬೇರಾ, ಕಂಪ್ಲಿ ತಾಲ್ಲೂಕಿಗೆ ವಿಮ್ಸ್‌ ಮುಖ್ಯ ಆಡಳಿತಾಧಿಕಾರಿ ಸಿದ್ದರಾಮೇಶ್ವರ, ಸಂಡೂರು ತಾಲ್ಲೂಕಿಗೆ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಪ್ರಧಾನ ವ್ಯವಸ್ಥಾಪಕ ಪ್ರಸನ್ನ ಕುಮಾರ್ ವಿ.ಕೆ., ಸಿರುಗುಪ್ಪ ತಾಲ್ಲೂಕಿಗೆ ಬಳ್ಳಾರಿ ಡಿಎಂಎಫ್‌ನ ವಿಶೇಷ ಅಧಿಕಾರಿ ಮಂಜುನಾಥ್‌ ಪಿ.ಎಸ್., ಕುರುಗೋಡು ತಾಲ್ಲೂಕಿಗೆ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವ ಚನ್ನಪ್ಪ ಎ. ಅವರನ್ನು ನೇಮಕ ಮಾಡಲಾಗಿದೆ.

ADVERTISEMENT

ವಿಜಯನಗರ ಜಿಲ್ಲೆಯಲ್ಲಿ ಹೊಸಪೇಟೆ ತಾಲ್ಲೂಕಿನ ಉಸ್ತುವಾರಿ ಅಧಿಕಾರಿಯನ್ನಾಗಿ ಎಡಿಸಿ ಅನುರಾದಾ ಜಿ., ಹರಪನಹಳ್ಳಿ ತಾಲ್ಲೂಕಿಗೆ ಸ್ಥಳ ನಿರೀಕ್ಷೆಯಲ್ಲಿರುವ ರಾಘವೇಂದ್ರ ಟಿ. ಹಾಗೂ ಹೂವಿನಹಡಗಲಿ ತಾಲ್ಲೂಕಿಗೆ ಹರಪನಹಳ್ಳಿ ಉಪವಿಭಾಗಾಧಿಕಾರಿ ಪ್ರಕಾಶ್ ಟಿ.ವಿ.ಅವರನ್ನು ನಿಯುಕ್ತಿಗೊಳಿಸಲಾಗಿದೆ.

ರಾಜ್ಯದ ಎಲ್ಲಾ ತಾಲ್ಲೂಕುಗಳಿಗೂ ಉಸ್ತುವಾರಿ ಅಧಿಕಾರಿಗಳ ನೇಮಕ ಮಾಡಲಾಗಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಶನಿವಾರ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ. ಆದರೆ ವಿಜಯನಗರ ಜಿಲ್ಲೆಯ ಉಳಿದ ಮೂರು ತಾಲ್ಲೂಕುಗಳ ಉಸ್ತುವಾರಿ ಅಧಿಕಾರಿಗಳನ್ನು ಒಳಗೊಂಡ ಹೆಸರಿನ ಹಾಳೆ ಕಳೆದು ಹೋಗಿರಬೇಕು, ಬಹುಶಃ ಸೋಮವಾರ ಅದನ್ನು ನೀಡಬಹುದು ಎಂದು ವಿಜಯನಗರ ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.

ಏನು ಕೆಲಸ?:

ಐದು ಗ್ಯಾರಂಟಿ ಯೋಜನೆಗಳ ಪರಿಶೀಲನೆ, ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತ ಹಾಸ್ಟೆಲ್‌ಗಳಿಗೆ ಅನಿರೀಕ್ಷಿತ ಭೇಟಿ ನೀಡುವುದು, ಶಿಕ್ಷಣ ಸುಧಾರಣೆ, ಶಾಲಾ ಕಟ್ಟಡ ನಿರ್ಮಣ ಮೊದಲಾದ ಕಾಮಗಾರಿಗಳ ಪರಿಶೀಲನೆ, ಅಂಗನವಾಡಿಗಳ ಕಟ್ಟಡ, ನಿವೇಶನ ಒದಗಿಸಲು ಪರಿಶೀಲನೆ, ಅಪೌಷ್ಟಿಕತೆ ನಿವಾರಣೆಗೆ ಕಾರ್ಯಕ್ರಮ ಅನುಷ್ಠಾನ, ಕುಡಿಯುವ ನೀರು, ರಸ್ತೆ, ವಿದ್ಯುತ್, ಮೇವು, ಬೀಜ, ಗೊಬ್ಬರ, ಬಿಸಿಯೂಟ, ನರೇಗಾ, ಪಿಂಚಣಿ ಪರಿಶೀಲನೆ ಸಹಿತ ಇನ್ನೂ ಹಲವು ಹೊಣೆಗಾರಿಕೆಯನ್ನು ನೀಡಲಾಗಿದೆ.

ತಿಂಗಳಿಗೆ ಕನಿಷ್ಠ 2 ಬಾರಿ ಭೇಟಿ ಕಡ್ಡಾಯ:

ಉಸ್ತುವಾರಿ ಅಧಿಕಾರಿ ತಾಲ್ಲೂಕಿಗೆ ತಿಂಗಳಿಗೆ ಕನಿಷ್ಠ ಎರಡು ಬಾರಿ ಭೇಟಿ ನೀಡಲೇಬೇಕು. ಪ್ರತಿ ತಿಂಗಳ ತಮ್ಮ ಕಾರ್ಯ ವರದಿಯನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮತ್ತು ಜಿಲ್ಲಾಧಿಕಾರಿ ಅವರಿಗೆ ಸಲ್ಲಿಸಬೇಕು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ವಹಿಸುವ ಹೆಚ್ಚುವರಿ ಕೆಲಸಗಳನ್ನು ನಿರ್ವಹಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.