ಹೊಸಪೇಟೆ (ವಿಜಯನಗರ): ‘ತುಂಗಭದ್ರಾ ಅಣೆಕಟ್ಟೆಯ 19ನೇ ಗೇಟ್ ಕೊಚ್ಚಿಹೋಗಲು ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆಯೂ ಕಾರಣ. ನಾಲ್ಕೈದು ದಿನಗಳಲ್ಲಿ ಗೇಟ್ ಅಳವಡಿಕೆ ಸಾಧ್ಯವಿಲ್ಲ. ಕನಿಷ್ಠ 10 ದಿನ ಬೇಕು. ರೈತರಿಗೆ ಸುಳ್ಳು ಹೇಳಲಾಗಿದೆ’ ಎಂದು ಬಿಜೆಪಿ ಆರೋಪಿಸಿದೆ.
ಮತ್ತೊಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಅಣೆಕಟ್ಟೆಗೆ ಭೇಟಿ ನೀಡುವರು. ಇದರ ಹಿನ್ನೆಲೆಯಲ್ಲಿ ಪೂರ್ವಭಾವಿಯಾಗಿ ಕೇಂದ್ರೀಯ ಜಲ ಆಯೋಗದ ಅಧಿಕಾರಿಗಳು ತುಂಗಭದ್ರಾ ಮಂಡಳಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ತ್ವರಿತವಾಗಿ ಗೇಟ್ ಅಳವಡಿಕೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿದರು. ಇದೇ ವೇಳೆ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಭತ್ತಕ್ಕೆ ನೀರಿನ ಅಭಾವ ಆಗುವ ಸಾಧ್ಯತೆಯಿದ್ದು, ವಿಶೇಷ ಪ್ಯಾಕೇಜ್ ನೀಡಲು ಒತ್ತಾಯ ಜೋರಾಗಿದೆ.
‘ಹೊಸ ಗೇಟ್ ಅಳವಡಿಕೆಗಾಗಿ ಅಣೆಕಟ್ಟೆಯಿಂದ ನೀರು ಖಾಲಿ ಮಾಡುವ ಕಾರ್ಯ ಭರದಿಂದ ಸಾಗಿದೆ. ಒಂದೇ ದಿನದಲ್ಲಿ 10 ಟಿಎಂಸಿ ಅಡಿಗೂ ಅಧಿಕ ನೀರು ನದಿಗೆ ಹರಿದು ಹೋಗಿದೆ. ಒಳಹರಿವು ಸದ್ಯ 25 ಸಾವಿರ ಕ್ಯುಸೆಕ್, ಹೊರಹರಿವು 1 ಲಕ್ಷ ಕ್ಯುಸೆಕ್ ಇದೆ. 5 ದಿನದೊಳಗೆ 55 ರಿಂದ 60 ಟಿಎಂಸಿ ಅಡಿ ನೀರು ಖಾಲಿಯಾಗಲಿದೆ’ ಎಂದು ತುಂಗಭದ್ರಾ ಮಂಡಳಿಯ ಅಧಿಕಾರಿಗಳು ತಿಳಿಸಿದರು.
ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಮತ್ತು ಸಂಸದ ಬಸವರಾಜ ಬೊಮ್ಮಾಯಿ ಅವರು ಸೋಮವಾರ ತುಂಗಭದ್ರಾ ಅಣೆಕಟ್ಟೆ ವೀಕ್ಷಿಸಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ವೇಳೆ ಈ ವಿಷಯವನ್ನು ಸ್ಪಷ್ಟಪಡಿಸಿಕೊಂಡಿದ್ದಾರೆ.
ತಜ್ಞರಿಂದ ಪರಿಶೀಲನೆ ನಡೆಯಲಿ:
ಬಳಿಕ ಸುದ್ದಿಗೋಷ್ಠಿ ನಡೆಸಿದ ಆರ್.ಆಶೋಕ, ‘ಅಧಿಕಾರಿಗಳು ಹಾರಿಕೆಯ ಉತ್ತರ ನೀಡುತ್ತಿದ್ದಾರೆ. ಗೇಟ್‌ಗಳ ನಿರ್ವಹಣೆ ಮಾಡಿದ್ದರೂ ಏಕಾಏಕಿ ಕೊಚ್ಚಿ ಹೋಗಿದೆ ಎಂದು ಹೇಳುತ್ತಾರೆ. ಇದರ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಬೇಕು. ಇತರ ಗೇಟ್‌ಗಳು ಸುರಕ್ಷಿತವಾಗಿವೆ ಎನ್ನುತ್ತಾರೆ. ಅದನ್ನು ಸಹ ನಂಬಲು ಸಾಧ್ಯವಿಲ್ಲ. ಗೇಟ್‌ಗಳ ಸುಸ್ಥಿತಿಯ ಬಗ್ಗೆ ತಜ್ಞರಿಂದ ಪರಿಶೀಲನೆ ಆಗಬೇಕು’ ಎಂದರು.
‘ಸೆಪ್ಟೆಂಬರ್, ಅಕ್ಟೋಬರ್‌ನಲ್ಲಿ ಮತ್ತಮ ಮಳೆಯಾಗದಿದ್ದರೆ ಒಂದು ಬೆಳೆಗೂ ನೀರು ಕೊಡಲು ಸಾಧ್ಯವಿಲ್ಲ. ಸರ್ಕಾರ ಹೆಕ್ಟೇರ್‌ಗೆ ₹50 ಸಾವಿರದಂತೆ ಪರಿಹಾರ ನೀಡಬೇಕು’ ಎಂದರು.
ಬಸವರಾಜ ಬೊಮ್ಮಾಯಿ ಮಾತನಾಡಿ, ‘ಮುಂಗಾರು ಮಳೆಗೆ ಮೊದಲೇ ಅಣೆಕಟ್ಟೆಯ ಗೇಟುಗಳ ನಿರ್ವಹಣೆ ಸರಿಯಾಗಿ ಮಾಡದಿರುವುದು, ಭಾರಿ ಪ್ರಮಾಣದಲ್ಲಿ ನೀರು ಸಂಗ್ರಹವಾದಾಗ ಅದರ ಒತ್ತಡ ತಡೆಯುವ ಸಾಮರ್ಥ್ಯ ಚೈನ್‌ಲಿಂಕ್‌ಗೆ ಇಲ್ಲವಾಗಿರುವುದು, ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಸರ್ಕಾರದ ವಿಳಂಬ ಧೋರಣೆ ಗೇಟ್ ದುರಂತಕ್ಕೆ ಕಾರಣ’ ಎಂದರು.
‘ಗೇಟ್ ಎತ್ತುವಾಗ ಚೈನ್‌ಲಿಂಕ್‌ನ ವೆಲ್ಡಿಂಗ್ ಬಿಟ್ಟುಹೋಗಿದೆ. ಇದರಿಂದ ಒತ್ತಡ ತಡೆಯಲು ಸಾಧ್ಯವಾಗದೆ ಗೇಟ್ ಒಂದು ಕಡೆಗೆ ವಾಲಿದೆ. ಭಾರಿ ಒತ್ತಡದ ನೀರಲ್ಲಿ ಸಿಲುಕಿ ಇಡೀ ಗೇಟ್ ಕೊಚ್ಚಿ ಹೋಗಿದೆ. ಮಳೆಗಾಲಕ್ಕೆ ಮೊದಲು ಸರಿಯಾಗಿ ನಿರ್ವಹಣೆ ಮಾಡಿಲ್ಲ ಎಂಬುದನ್ನು ಇದು ಸೂಚಿಸುತ್ತದೆ. ತಜ್ಞರು ಕೊಟ್ಟ ವರದಿಯಲ್ಲಿ ಎಲ್ಲವೂ ಸರಿಯಾಗಿದೆ ಎಂದು ಹೇಳಿದ್ದರೆ, ತಜ್ಞರ ವರದಿಯನ್ನೇ ಸಂಶಯದಿಂದ ನೋಡಬೇಕಾಗುತ್ತದೆ’ ಎಂದು ಬೊಮ್ಮಾಯಿ ಹೇಳಿದರು.
ವಿಶೇಷ ತಜ್ಞರ ತಂಡ ಅಗತ್ಯ:
‘ರಾಜ್ಯದಲ್ಲಿ 50 ವರ್ಷಕ್ಕಿಂತ ಹಳೆಯದಾದ ಹಲವು ಅಣೆಕಟ್ಟೆಗಳಿವೆ. ಅವುಗಳ ಸುರಕ್ಷತೆಯ ಬಗ್ಗೆ ಇದೀಗ ಗಂಭೀರ ಚಿಂತನೆ ಆಗಲೇಬೇಕು. ಈ ಎಲ್ಲ ಅಣೆಕಟ್ಟೆಗಳ ಸುರಕ್ಷತೆ, ಗೇಟ್‌ಗಳ ಸುಸ್ಥಿತಿಯ ಬಗ್ಗೆ ನಿರಂತರ ನಿಗಾ ವಹಿಸಲು ವಿಶೇಷ ತಜ್ಞರ ತಂಡ ರಚಿಸಬೇಕು’ ಎಂದು ಬೊಮ್ಮಾಯಿ ಒತ್ತಾಯಿಸಿದರು.
‘8 ತಿಂಗಳುಗಳಿಂದ ಮುಖ್ಯ ಎಂಜಿನಿಯರ್ ನೇಮಕವಾಗಿರದ ಬಗ್ಗೆ ಪ್ರಸ್ತಾಪಿಸಿ, ಸರ್ಕಾರದ ವಿಳಂಬ ನೀತಿಗೆ ಯಾರು ಕಾರಣ? ಈಗ ಅದು ರೈತರಿಗೆ ಉತ್ತರ ನೀಡಲೇಬೇಕು. ರೈತರಿಗೆ ಭಾರಿ ನಷ್ಟವಾಗಿದೆ. ಅದಕ್ಕೆ ಸೂಕ್ತ ಪರಿಹಾರವನ್ನೂ ನೀಡಬೇಕು’ ಎಂದು ಅವರು ಆಗ್ರಹಿಸಿದರು.
ಭತ್ತಕ್ಕೆ ಪರಿಹಾರ ಪ್ಯಾಕೇಜ್: ರೈತಸಂಘ ಆಗ್ರಹ
ತುಂಗಭದ್ರಾ ಅಣೆಕಟ್ಟೆಯ 19ನೇ ಕ್ರಸ್ಟ್‌ಗೇಟ್ ನೀರಲ್ಲಿ ಕೊಚ್ಚಿ ಹೋಗಿರುವುದರಿಂದ ಈ ಬಾರಿ ಒಂದು ಬೆಳೆಗೆ ಸಹ ನೀರು ಸಿಗುವುದು ಸಂಶಯವಿದೆ. ಹೀಗಾಗಿ ಸರ್ಕಾರ ತಕ್ಷಣ ಭತ್ತ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಅಧ್ಯಕ್ಷ ವಾಸುದೇವ ಮೇಟಿ ಒತ್ತಾಯಿಸಿದ್ದಾರೆ. ಸರ್ಕಾರ ತಕ್ಷಣ ಎನ್‌ಡಿಆರ್‌ಎಫ್ ನಿಯಮದ ಪ್ರಕಾರ ಪರಿಹಾರ ಪ್ಯಾಕೇಜ್ ನೀಡಬೇಕು ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿರುವಾಗ ಸರ್ಕಾರ ನೆರವಿಗೆ ಬಾರದಿದ್ದರೆ ಉಗ್ರ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ ಎಂದು ಅವರು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು. ಉತ್ತರ ಕರ್ನಾಟಕ ಭಾಗದ ಅಣೆಕಟ್ಟುಗಳ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ ಎಂದು ದೂರಿದರು.
ಯಾರಿಂದಲೂ ಲೋಪ ಆಗಿಲ್ಲ ಎಂದು ಉಪಮುಖ್ಯಮಂತ್ರಿ ಹೇಳಿದ್ದರಲ್ಲಿ ಅರ್ಥವಿಲ್ಲ. ತನಿಖೆಯಾಗಿ ಶಿಕ್ಷೆಯಾದರೆ ಮಾತ್ರ ಇಂತಹ ಲೋಪ ಮರುಕಳಿಸಲಾರದು.ಬಸವರಾಜ ಬೊಮ್ಮಾಯಿ, ಸಂಸದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.