ಹೊಸಪೇಟೆ: ‘ ತುಂಗಭದ್ರಾ ಅಣೆಕಟ್ಟೆಯ 19ನೇ ಕ್ರಸ್ಟ್‌ಗೇಟ್ ಸ್ಥಳದಲ್ಲಿ ಸ್ಟಾಪ್ ಲಾಗ್ ಗೇಟ್ ಅನ್ನು ಯಶಸ್ವಿಯಾಗಿ ಅಳವಡಿಸುವ ಮೂಲಕ ದೇಶದ ಗಮನ ಸೆಳೆಯಲಾಗಿದೆ’ ಎಂದು ಜಿಲ್ಲಾಧಿಕಾರಿ ಎಂ.ಎಸ್ .ದಿವಾಕರ್ ಹೇಳಿದರು.
ನಗರದ ಅಣೆಕಟ್ಟೆ ಆವರಣದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಗೇಟ್ ಅಳವಡಿಸುವಲ್ಲಿ ಶ್ರಮಿಸಿದ ಕಾರ್ಮಿಕರು, ಸಿಬ್ಬಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ನೀಡಿದ ನಗದು ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಸಿಬ್ಬಂದಿಯನ್ನು ಕೆಲಸಕ್ಕೆ ತೊಡಗಿಸಿದ ಕ್ರಸ್ಟ್‌ಗೇಟ್ ತಜ್ಞ ಕನ್ನಯ್ಯ ನಾಯ್ಡು ನೇತೃತ್ವದ ತಂಡದ ಕೆಲಸ ಅಮೋಘ’ ಎಂದರು.
ಶಾಸಕ ಕಂಪ್ಲಿ ಗಣೇಶ್ ಮಾತನಾಡಿ, ‘ಜಿಲ್ಲಾ ಉಸ್ತುವಾರಿ ಸಚಿವರು ನಾಲ್ಕು ದಿನ ಇಲ್ಲೇ ಇದ್ದು, ಕೆಲಸದ ಮೇಲ್ವಿಚಾರಣೆ ನೋಡಿಕೊಂಡರು’ ಎಂದು ಹೇಳಿದರು.
ವಕ್ಫ್ ಬೋರ್ಡ್ ಅಧ್ಯಕ್ಷ ಅನ್ವರ್ ಬಾಷಾ ಮಾತನಾಡಿ, ‘ನಾಲ್ಕು ಜಿಲ್ಲೆಯ ರೈತರ ಆತಂಕ ದೂರವಾಗಿದೆ’ ಎಂದರು.
ಕನ್ನಯ್ಯ ನಾಯ್ಡು ಮತ್ತು ಅವರ ಅಳಿಯ ಸೂರಿ ಬಾಬು ಅವರನ್ನು ಸನ್ಮಾನಿಸಲಾಯಿತು.
ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎನ್.ಎಫ್.ಮೊಹಮ್ಮದ್ ಇಮಾಮ್ ನಿಯಾಜ್, ತುಂಗಭದ್ರಾ ಮಂಡಳಿಯ ಕಾರ್ಯದರ್ಶಿ ಒ.ಆರ್.ಕೆ.ರೆಡ್ಡಿ, ಅಧೀಕ್ಷಕ ಎಂಜಿನಿಯರ್ ಶ್ರೀಕಾಂತ್ ರೆಡ್ಡಿ, ಕಾರ್ಯನಿರ್ವಾಹಕ ಎಂಜಿನಿಯರ್ ರವಿಚಂದ್ರ, ಅಧಿಕಾರಿಗಳಾದ ಗೋಪಿ, ಜ್ಞಾನೇಶ್ವರ, ಅಮರನಾಥ ರೆಡ್ಡಿ, ರಾಘವೇಂದ್ರ, ಪ್ರದೀಪ, ಸೋಮಶೇಖರ್, ಮುಖಂಡ ವಿಜಯ ಕುಮಾರ್ ಸ್ವಾಮಿ ಇದ್ದರು.
ನಾನೂ ರೈತನೇ ರೈತರ ಕಷ್ಟ ಏನೆಂಬುದು ನನಗೆ ಗೊತ್ತಿದೆ. ತ್ವರಿತವಾಗಿ ಗೇಟ್ ಅಳವಡಿಕೆ ಆಗುವ ಮೂಲಕ ರೈತರ ಆತಂಕ ದೂರವಾಗಿದೆ
- ಕಂಪ್ಲಿ ಗಣೇಶ್ ಶಾಸಕ
ಇಂದಿನಿಂದ ಡ್ಯಾಂ ವೀಕ್ಷಣೆಗೆ ಅವಕಾಶ ತುಂಗಭದ್ರಾ ಅಣೆಕಟ್ಟೆಯ ಗೇಟ್ ಕೊಚ್ಚಿಹೋದ ಕಾರಣ ಪ್ರವಾಸಿಗರಿಗೆ ಡ್ಯಾಂ ಭೇಟಿಗೆ ತಾತ್ಕಾಲಿಕ ನಿರ್ಬಂಧ ಹೇರಲಾಗಿತ್ತು. ಗೇಟ್ ಯಶಸ್ವಿಯಾಗಿ ಅಳವಡಿಕೆ ಆಗಿರುವುದರಿಂದ ಸೋಮವಾರದಿಂದ ಡ್ಯಾಂ ಮತ್ತು ಉದ್ಯಾನ ವೀಕ್ಷಣೆಗೆ ಮುಕ್ತಗೊಳಿಸಲಾಗುತ್ತದೆ ಎಂದು ತುಂಗಭದ್ರಾ ಮಂಡಳಿಯ ಕಾರ್ಯದರ್ಶಿ ಒ.ಆರ್.ಕೆ.ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.