ಕಾನಹೊಸಹಳ್ಳಿ (ವಿಜಯನಗರ ಜಿಲ್ಲೆ): ವಿದ್ಯಾರ್ಥಿನಿಯೊಬ್ಬರು ಹೋಮ್‌ವರ್ಕ್ ಮಾಡಲಿಲ್ಲ ಎಂಬ ಕಾರಣಕ್ಕೆ ಆ ವಿದ್ಯಾರ್ಥಿನಿಯರ ಗುಂಪಿನ ನಾಯಕಿಗೆ ಮುಖ್ಯಶಿಕ್ಷಕಿಯೊಬ್ಬರು ಥಳಿಸಿದ ಘಟನೆ ಬಣವಿಕಲ್ಲು ಗ್ರಾಮದ ಕಸ್ತೂರ ಬಾ ಗಾಂಧಿ ಬಾಲಕಿಯರ ವಸತಿ ಶಾಲೆಯಲ್ಲಿ ನಡೆದಿದೆ.
‘ಎಂಟನೇ ತರಗತಿಯ ಒಂದು ಗುಂಪಿನಲ್ಲಿದ್ದ ರಾಜೇಶ್ವರಿ ಎಂಬ ವಿದ್ಯಾರ್ಥಿನಿ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಹೋಂ ವರ್ಕ್ ಮಾಡಿರಲಿಲ್ಲ. ಅದಕ್ಕೆ ಮುಖ್ಯ ಶಿಕ್ಷಕಿ ವಾಣಿ ಎಂಬುವರು ಗುಂಪಿನ ನಾಯಕಿ, ಬೊಮ್ಮಗಟ್ಟ ಗ್ರಾಮದ ಚಿಕ್ಕಮ್ಮ ಎಂಬ ವಿದ್ಯಾರ್ಥಿನಿಗೆ ಥಳಿಸಿದ್ದರಿಂದ, ಆಕೆಯ ಕಾಲು ಊದಿಕೊಂಡಿದೆ. ಆಕೆಯನ್ನು ತಕ್ಷಣವೇ ಚಿಕ್ಕಜೋಗಿಹಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. ನೋವು ಹೆಚ್ಚಾದ ಕಾರಣ ಮುಖ್ಯಶಿಕ್ಷಕಿಯೇ ಆಕೆಯನ್ನು ಚಿತ್ರದುರ್ಗದ ಆಸ್ಪತ್ರೆಗೆ ಕರೆದೊಯ್ದು ಎಲುಬು ಮತ್ತು ಮೂಳೆ ತಜ್ಞರಿಂದ ತಪಾಸಣೆ ಮಾಡಿಸಿ ಕಾಲಿಗೆ ಬ್ಯಾಂಡೇಜ್ ಹಾಕಿಸಿದರು’ ಎಂದು ಮೂಲಗಳು ತಿಳಿಸಿವೆ.
ಬಾಲಕಿಯನ್ನು ನೋಡಲೆಂದು ಆಕೆಯ ಪಾಲಕರು ಭಾನುವಾರ ಶಾಲೆಗೆ ಬಂದಾಗ, ಮಗಳ ಕಾಲಿನ ಸ್ಥಿತಿ ಕಂಡು ಮುಖ್ಯಶಿಕ್ಷಕಿಯನ್ನು ತರಾಟೆಗೆ ತೆಗೆದುಕೊಂಡರು. ಚಿಕಿತ್ಸಾ ವೆಚ್ಚವನ್ನು ತಾವೇ ಭರಿಸುವುದಾಗಿ ಬರೆದುಕೊಟ್ಟ ಕಾರಣ ಪಾಲಕರು ಬಾಲಕಿಯನ್ನು ಮನೆಗೆ ಕರೆದೊಯ್ದರು.
ವರ್ಷದ ಹಿಂದೆ ಬಾಲಕಿ ಚಿಕ್ಕಮ್ಮ ಬಿದ್ದು ಕಾಲು ಮುರಿದಿತ್ತು. ಆಗ ಕಾಲಿಗೆ ರಾಡ್ ಹಾಕಲಾಗಿತ್ತು. ಇತ್ತೀಚೆಗೆ ಆ ರಾಡ್ ತೆಗೆಯಲಾಗಿತ್ತು. ಈ ಎಲ್ಲ ವಿಷಯ ಮುಖ್ಯಶಿಕ್ಷಕಿಗೆ ಗೊತ್ತಿದ್ದರೂ ಅದೇ ಕಾಲಿಗೆ ಥಳಿಸಿದ್ದರಿಂದ ಪಾಲಕರು ಕೆರಳಿದ್ದಾರೆ. ಇದರ ಬಗ್ಗೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ.-ಪದ್ಮನಾಭ ಕರಣಂ, ಕ್ಷೇತ್ರ ಶಿಕ್ಷಣಾಧಿಕಾರಿ ಕೂಡ್ಲಿಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.