ಹೊಸಪೇಟೆ (ವಿಜಯನಗರ): ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿಯುಜಿಸಿ ನಿಯಮಕ್ಕೆ ವಿರುದ್ಧವಾಗಿ 17 ಬೋಧಕ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಸುತ್ತಿರುವುದು ಗೊತ್ತಾಗಿದೆ.
ಇಷ್ಟೇ ಅಲ್ಲ, 1991ರ ಕನ್ನಡ ವಿಶ್ವವಿದ್ಯಾಲಯದ ಅಧಿನಿಯಮದ ಪ್ರಕಾರ, ನೇಮಕಾತಿ ಪರಿನಿಯಮಕ್ಕೆ ತಿದ್ದುಪಡಿ ತರಬೇಕು. ಅದಕ್ಕೆ ರಾಜ್ಯಪಾಲರಿಂದ ಅನುಮೋದನೆ ಪಡೆಯಬೇಕು. ಆದರೆ, ಇದ್ಯಾವುದೂ ಮಾಡಿಲ್ಲ. ಯುಜಿಸಿಯ 2018ರ ಪರಿಷ್ಕೃತ ನಿಯಮದ (4.0, 4.1 ನಿಯಮ) ಪಾಲನೆಯೂ ಆಗಿಲ್ಲ ಎಂಬ ಆರೋಪ ಕೇಳಿಬಂದಿದೆ.
ಸಹಾಯಕ ಪ್ರಾಧ್ಯಾಪಕ, ಸಹ ಪ್ರಾಧ್ಯಾಪಕ ಮತ್ತು ಪ್ರಾಧ್ಯಾಪಕ ಹುದ್ದೆಗಳನ್ನು ತುಂಬಲಾಗುತ್ತಿದೆ. ಆದರೆ, ಮೂರೂ ಹುದ್ದೆಗಳಿಗೆ ಒಂದೇ ಲಿಖಿತ ಪರೀಕ್ಷೆ ನಡೆಸಲಾಗುತ್ತಿದೆ. ಬೇರೆ ಬೇರೆ ಹುದ್ದೆಗಳಿಗೆ ಅರ್ಜಿ ಹಾಕಿದರೂ ಎಲ್ಲ ಹುದ್ದೆಗಳಿಗೂ ಲಿಖಿತ ಪರೀಕ್ಷೆಯನ್ನೇ ಪರಿಗಣಿಸಲಾಗುತ್ತಿದೆ. ಇದು ನಿಯಮಕ್ಕೆ ವಿರುದ್ಧ. ಲಿಖಿತ ಪರೀಕ್ಷೆಗೆ 80 ಅಂಕ, ಸಂದರ್ಶನಕ್ಕೆ 20 ಅಂಕ ನಿಗದಿಗೊಳಿಸಲಾಗಿದೆ. ಆದರೆ ಇದು ಯಾವ ನಿಯಮದ ವ್ಯಾಪ್ತಿಯಲ್ಲಿ ಬರುತ್ತದೆ ಎನ್ನುವುದು ತಿಳಿಸಿಲ್ಲ.
ನ. 15ರಂದು ನಿಗದಿಯಾಗಿದ್ದ ಲಿಖಿತ ಪರೀಕ್ಷೆ ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಆದರೆ, ಪರೀಕ್ಷೆಯ ಹಿಂದಿನ ಎರಡು ದಿನಗಳ ಮುಂಚಿತವಾಗಲಿ ಅಥವಾ ಸದ್ಯದವರೆಗೆ ಯಾವ ಅಭ್ಯರ್ಥಿಗೂ ಪರೀಕ್ಷೆ ಪ್ರವೇಶ ಪತ್ರ ತಲುಪಿಲ್ಲ. ಪರೀಕ್ಷಾ ಕೊಠಡಿಯ ವಿವರಗಳನ್ನಷ್ಟೇ ವಿಶ್ವವಿದ್ಯಾಲಯದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.
ಪರೀಕ್ಷೆಗೆ ಸಲ್ಲಿಕೆಯಾದ ಒಟ್ಟು ಅರ್ಜಿಗಳನ್ನು ಪರಿಶೀಲಿಸಿ, ನಂತರ ಅಭ್ಯರ್ಥಿಗಳ ಅರ್ಹತಾ ಪಟ್ಟಿ ತಯಾರಿಸಬೇಕು. ಬಳಿಕ ಆಕ್ಷೇಪಣೆಗೆ ಕಾಲಾವಕಾಶ ಕೊಡಬೇಕು. ಆದರೆ, ಹೀಗೆ ಮಾಡಿಲ್ಲ. ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಪದವಿ, ಸ್ನಾತಕೋತ್ತರ, ಪಿಎಚ್.ಡಿ, ಎನ್‌ಇಟಿ, ಬೋಧನಾ ಅನುಭವ, ಸಂಶೋಧನಾ ಲೇಖನ ಪ್ರಕಟಣೆಗಳನ್ನು ಪರಿಗಣಿಸಬೇಕು.
ಸಹ ಪ್ರಾಧ್ಯಾಪಕ ಮತ್ತು ಪ್ರಾಧ್ಯಾಪಕ ಹುದ್ದೆಗಳಿಗೆ ಸಂಶೋಧನಾ ಮೌಲ್ಯ ಅಂಕ (ರಿಸರ್ಚ್ ಕಾರ್ಡ್) ಪರಿಗಣಿಸಬೇಕು. ಬೋಧನಾ ಅನುಭವ, ಪುಸ್ತಕ–ಪಠ್ಯ ರಚನೆ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಸಂಸ್ಥೆಗಳಿಂದ ಅನುದಾನ ಪಡೆದು ಸಂಶೋಧನೆ ಮಾಡಿರಬೇಕು. ಇಷ್ಟೇ ಅಲ್ಲ, ಉಪನ್ಯಾಸಕರಾಗಿ ಕೆಲಸ, ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡನೆ, ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ, ಇ–ಪಠ್ಯ ಅಭಿವೃದ್ಧಿ, ಅನುವಾದ ಇವು ಯುಜಿಸಿಯ ಮಾನದಂಡಗಳು.
‘ಯುಜಿಸಿ ನಿಯಮದಲ್ಲಿ ಪರೀಕ್ಷೆಗೆ ಅವಕಾಶ ಇಲ್ಲ. ಲಿಖಿತ ಪರೀಕ್ಷೆ ನಡೆಸಿ, ಶೈಕ್ಷಣಿಕವಾಗಿ ಸಾಧನೆ ಮಾಡಿದವರನ್ನು ಬದಿಗಿರಿಸುವ ಹುನ್ನಾರ ನಡೆಸಲಾಗುತ್ತಿದೆ. ಕೆಲವು ಅಭ್ಯರ್ಥಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶ ಇದರಲ್ಲಿ ಅಡಗಿದೆ’ ಎಂದು ಹೆಸರು ಹೇಳಲಿಚ್ಛಿಸದ ವಿಶ್ವವಿದ್ಯಾಲಯದ ಹಿರಿಯ ಅಧ್ಯಾಪಕರೇ ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.