ADVERTISEMENT

ಹಂಪಿಯಲ್ಲಿ ರಸ್ತೆ ಬದಿಗೆ ಉರುಳಿಬಿದ್ದ ಟೆಂಪೊ ಟ್ರಾವೆಲರ್‌

​ಪ್ರಜಾವಾಣಿ ವಾರ್ತೆ
Published 1 ಜನವರಿ 2024, 15:06 IST
Last Updated 1 ಜನವರಿ 2024, 15:06 IST
   

ಹೊಸಪೇಟೆ (ವಿಜಯನಗರ): ಹಂಪಿ ವಿರೂಪಾಕ್ಷ ದೇವಸ್ಥಾನ ಸಮೀಪದ ಹೇಮಕೂಟ ಇಳಿಜಾರು ರಸ್ತೆಯಲ್ಲಿ ಸೋಮವಾರ ಸಂಜೆ ಟೆಂಪೊ ಟ್ರಾವೆಲರ್‌ ಒಂದು ರಸ್ತೆಯ ಮೇಲೆ ಏರುತ್ತಿದ್ದಾಗ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡು ಹಿಂದಕ್ಕೆ ಚಲಿಸಿ, ಕೆಕೆಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದು 12 ಅಡಿ ಆಳಕ್ಕೆ ಉರುಳಿ ಬಿದ್ದಿದ್ದು, ಒಬ್ಬರಿಗೆ ಗಾಯವಾಗಿದೆ.

ವಾಹನದಲ್ಲಿ ರಾಯಚೂರಿನ 14 ಮಂದಿ ಪ್ರವಾಸಿಗರಿದ್ದರು. ಹಂಪಿ ನೋಡಿಕೊಂಡು ತಮ್ಮ ಊರಿಗೆ ವಾಪಸಾಗುತ್ತಿದ್ದ ವೇಳೆ ವಿರೂಪಾಕ್ಷ ದೇವಸ್ಥಾನದ ವಾಹನ ನಿಲುಗಡೆ ಸ್ಥಳದಿಂದ ಹೊರಟ ಕೆಲವೇ ಕ್ಷಣದಲ್ಲಿ ಈ ಅಪಘಾತ ಸಂಭವಿಸಿತು. 

ಸಂಜೆ 7 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿತು. ಹೊಸ ವರ್ಷದ ಪ್ರಯುಕ್ತ ಭಾರಿ ಸಂಖ್ಯೆಯಲ್ಲಿ ಬಂದಿದ್ದ ಪ್ರವಾಸಿಗರು ಹಂಪಿಯಿಂದ ವಾಸಸಾಗುತ್ತಿದ್ದಾಗಲೇ ವಾಹನ ಉರುಳಿ ಬಿದ್ದುದರಿಂದ ಸ್ವಲ್ಪ ಸಮಯ ಸಂಚಾರ ದಟ್ಟಣೆ ಉಂಟಾಯಿತು. ತಕ್ಷಣ ಧಾವಿಸಿದ ಪೊಲೀಸರು ಸಂಚಾರ ದಟ್ಟಣೆ ನಿವಾರಿಸಿದರು ಹಾಗೂ ಗಾಯಗೊಂಡ ಒಬ್ಬನನ್ನು ಆಸ್ಪತ್ರೆಗೆ ಕಳುಹಿಸುವ ವ್ಯವಸ್ಥೆ ಮಾಡಿದರು.

ADVERTISEMENT

ಒಂದು ಬದಿಯಲ್ಲಿ ತಡೆಗೋಡೆ, ಇನ್ನೊಂದು ಬದಿಯಲ್ಲಿ ಇಲ್ಲ: ಹಂಪಿ ವಿರೂಪಾಕ್ಷ ಹಾಗೂ ಇತರ ನೂರಾರು ಸ್ಮಾರಕಗಳಿರುವ ಸ್ಥಳಕ್ಕೆ ತೆರಳುವ ಪ್ರಮುಖ ರಸ್ತೆ ಇದಾಗಿದ್ದು, ರಸ್ತೆಯ ಒಂದು ಬದಿಗೆ ಕಬ್ಬಿಣದ ಸರಳಿನೊಂದಿಗೆ ಪ್ರಬಲ ತಡೆಗೋಡೆ ನಿರ್ಮಿಸಲಾಗಿದ್ದರೆ, ರಸ್ತೆಯ ಇನ್ನೊಂದು ಬದಿಗೆ ಈ ತಡೆಗೋಡೆ ಇಲ್ಲ. ಒಂದು ವೇಳೆ ಇದ್ದಿದ್ದರೆ ಇಂತಹ ಸ್ಥಿತಿಯಲ್ಲಿ ವಾಹನ ಉರುಳಿ ಆಳಕ್ಕೆ ಬೀಳುವುದು ತಪ್ಪಿ ಹೋಗುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

ಪೊಲೀಸರು ಅಪಘಾತದ ಸ್ಥಳ ಪರಿಶೀಲಿಸುತ್ತಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.