ADVERTISEMENT

30 ಟಿಎಂಸಿ ಅಡಿ ನೀರು ಉಳಿಸಿದ ತೃಪ್ತಿ; ಕಾರ್ಯಾಚರಣೆ ಬಳಿಕ ಕನ್ನಯ್ಯ ನಾಯ್ಡು ಸಂತಸ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2024, 16:14 IST
Last Updated 17 ಆಗಸ್ಟ್ 2024, 16:14 IST
ಕನ್ನಯ್ಯ ನಾಯ್ಡು
ಕನ್ನಯ್ಯ ನಾಯ್ಡು   

ಹೊಸಪೇಟೆ (ವಿಜಯನಗರ): ‘ತುಂಗಭದ್ರಾ ಅಣೆಕಟ್ಟೆಯ 19ನೇ ಗೇಟ್ ನೀರಲ್ಲಿ ಕೊಚ್ಚಿ ಹೋದ ತಕ್ಷಣ ತಾತ್ಕಾಲಿಕ ಗೇಟ್ ಅಳವಡಿಸಲು ಕ್ರಮ ಕೈಗೊಂಡಿದ್ದಕ್ಕೆ 70 ಟಿಎಂಸಿ ಅಡಿ ನೀರು ಉಳಿದಿದೆ. ಇಲ್ಲವಾಗಿದ್ದರೆ 30 ಟಿಎಂಸಿ ಅಡಿ ನೀರು ಖಾಲಿ ಮಾಡಬೇಕಿತ್ತು. ಆಗ, 40 ಟಿಎಂಸಿ ಅಡಿ ನೀರು ಮಾತ್ರ ಜಲಾಶಯದಲ್ಲಿ ಇರುತ್ತಿತ್ತು’ ಎಂದು ಕ್ರಸ್ಟ್ ಗೇಟ್ ತಜ್ಞ ಕನ್ನಯ್ಯ ನಾಯ್ಡು ಹೇಳಿದರು.

ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸರ್ಕಾರದಿಂದ ಗೇಟ್‌ಗಳ ವಿನ್ಯಾಸ ತರಿಸಿಕೊಳ್ಳುತ್ತಿದ್ದರೆ ಕೆಲಸ ಇನ್ನೂ ಆರಂಭವಾಗುತ್ತಿರಲಿಲ್ಲ. ಇಲಾಖೆ ನೀಡುವ ವಿನ್ಯಾಸ ಬರುವುದಕ್ಕೆ ಮೂರು ತಿಂಗಳಾಗುತ್ತಿತ್ತು. ನಮ್ಮ ಬಳಿ ವಿನ್ಯಾಸದ ಬಗ್ಗೆ ನಿಖರ ಮಾಹಿತಿ ಇತ್ತು. ಹೀಗಾಗಿ ಕೆಲವೇ ಗಂಟೆಗಳಲ್ಲಿ ವಿನ್ಯಾಸ ಸಿದ್ಧಗೊಳಿಸಿ ಮೂರು ಕಂಪನಿಗಳಿಂದ ಗೇಟ್ ಸಿದ್ಧಪಡಿಸುವ ಕೆಲಸ ನಡೆಯಿತು’ ಎಂದರು.

‘ಅಣೆಕಟ್ಟೆಯ ಕ್ರಸ್ಟ್ ಗೇಟ್ ಮಟ್ಟ 1,613 ಅಡಿ. ಅಲ್ಲಿಯವರೆಗೆ ನೀರು ನಿಂತಾಗ ಜಲಾಶಯದಲ್ಲಿ ಸಂಗ್ರಹವಾಗುವುದು 40 ಟಿಎಂಸಿ ಅಡಿ ಮಾತ್ರ. ಧುಮ್ಮಿಕ್ಕುತ್ತಿರುವ ನೀರಿನಲ್ಲೇ ಮೊದಲ ಗೇಟ್ ಎಲಿಮೆಂಟ್ ಇಳಿಸಿದ್ದರಿಂದ 70 ಟಿಎಂಸಿ ಅಡಿ ನೀರು ಉಳಿದಿದೆ’ ಎಂದರು.

ADVERTISEMENT

‘ನನಗೆ ಮೂರೂ ರಾಜ್ಯಗಳ ಜನರ ಬಗ್ಗೆ ಕಾಳಜಿ ಇರುವುದಕ್ಕೆ ಸೇವಾ ಭಾವದಿಂದ ಗೇಟ್ ಅಳವಡಿಕೆ ಮಾಡಿದ್ದೇನೆ. ಮುಂದೆ ಕ್ರಸ್ಟ್‌ ಗೇಟ್ ಸಿದ್ಧವಾಗುವ ತನಕ ಇದು ಸಮರ್ಥವಾಗಿ ನೀರು ತಡೆಹಿಡಿಯುತ್ತದೆ. ಆದರೆ, ಅಣೆಕಟ್ಟೆಯ ನೀರಿನ ನಿರ್ವಹಣೆಗಾಗಿ ಕ್ರಸ್ಟ್‌ಗೇಟ್‌ ಸಜ್ಜುಗೊಳಿಸುವಂತೆ ಶಿಫಾರಸು ಮಾಡಿ ಮೂರೂ ರಾಜ್ಯಗಳ ಮುಖ್ಯಮಂತ್ರಿಗಳಿಗೆ ವರದಿ ನೀಡುತ್ತೇನೆ’ ಎಂದರು.

‘ಎರಡು ವರ್ಷಗಳ ಹಿಂದೆ ಜಲಾಶಯಕ್ಕೆ ಬಂದಿದ್ದೆ. ಈ ಮೊದಲೇ ಸ್ಟಾಪ್ ಲಾಗ್ ಗೇಟ್ ಅಳವಡಿಕೆ ಮಾಡುವುದಕ್ಕೆ ಹೇಳಿದ್ದೆ. ಆಗ ಎಲ್ಲವೂ ಸರಿ ಇದೆ ಅಂತ  ಹೇಳಿದ್ದರು. ತಜ್ಞರು ಈ ಬಾರಿಯೂ ಕ್ರಸ್ಟ್‌ಗೇಟ್‌ಗಳು ಸುಸ್ಥಿತಿಯಲ್ಲಿಯೇ ಇವೆ ಎಂದಿದ್ದರು. ಇನ್ನೂ ಎಂಟು ಗೇಟ್‌ಗಳು ಶಿಥಿಲಗೊಂಡಿವೆ ಎಂಬ ವದಂತಿಗಳಿಗೆ ಕಿವಿಗೊಡುವ ಅಗತ್ಯವಿಲ್ಲ’ ಎಂದು ಹೇಳಿದರು.

‘ಒಂದು ಕಲ್ಲು ಜಾರಿದರೂ ಕಷ್ಟ’

‘ಕಲ್ಲು ಮತ್ತು ಗಾರೆಯಿಂದ ತುಂಗಭದ್ರಾ ಅಣೆಕಟ್ಟೆ ನಿರ್ಮಾಣವಾಗಿದೆ. ಒಂದು ಕಲ್ಲು ಜಾರಿದರೂ ಅಣೆಕಟ್ಟೆಗೆ ಅಪಾಯ ಇದೆ. ಗೇಟ್‌ ಕೂರಿಸುವಾಗ ಸವಾಲು ಎದುರಿಸಬೇಕಾಯಿತು. ಒಂದು  ವಿನ್ಯಾಸದಲ್ಲಿ ಅಧಿಕ ಸಾಮರ್ಥ್ಯಕ್ಕಾಗಿ ಸ್ವಲ್ಪ ಉದ್ದದ ಕೊಂಡಿ ಮಾಡಿದ್ದೆವು. ಆದರೆ ಕಲ್ಲನ್ನು ಮುಟ್ಟುವಂತಿಲ್ಲ ಎಂಬ ಸಂದೇಶ ಕೇಂದ್ರದಿಂದ ಬಂತು’ ಎಂದು ಕನ್ನಯ್ಯ ನಾಯ್ಡು ಹೇಳಿದರು.

‘ಹೆಚ್ಚುವರಿ ಉದ್ದದ ಭಾಗ ತುಂಡರಿಸಬೇಕಾಯಿತು. ಸ್ಕೈವಾಕ್‌ ಇಳಿಸುವುದಕ್ಕೆ ಸಹ ಕೇಂದ್ರ ಮೊದಲು ಒಪ್ಪಿರಲಿಲ್ಲ. ಮುಖ್ಯಮಂತ್ರಿ ಅವರಿಗೆ ತಿಳಿಸಿದಾಗ ಅವರು ಕೇಂದ್ರದ ಮನವೊಲಿಸಿದರು. ಅಣೆಕಟ್ಟೆಗೆ ಆಯಸ್ಸಾಗಿದೆ. ಇನ್ನು ಮುಂದೆ ಇದನ್ನು ಬಹಳ ಜಾಗರೂಕತೆಯಿಂದ ನೋಡಬೇಕಾಗುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.