ಹರಪನಹಳ್ಳಿ: ಪ್ಲಾಸ್ಟಿಕ್ ಹಾಳೆಯ ಟೆಂಟ್‌ಗಳನ್ನು ಹಾಕಿಕೊಂಡು ಸೊಪ್ಪು, ತರಕಾರಿ ಮಾರಾಟ ಮಾಡುತ್ತಿರುವ ಬೀದಿಬದಿ ವ್ಯಾಪಾರಸ್ಥರು ಏರುತ್ತಿರುವ ತಾಪಮಾನದಿಂದ ಬಸವಳಿದಿದ್ದಾರೆ.
ದಿನವಹಿ ಸಂತೆ ಕೋಟೆ ಕಾಳಮ್ಮ ದೇವಸ್ಥಾನ ಆವರಣಕ್ಕೆ ಸ್ಥಳಾಂತರವಾಗಿ ಒಂದೂವರೆ ವರ್ಷ ಕಳೆದಿದೆ. ಇಲ್ಲಿ ದಿನವಹಿ ಸಂತೆಯಲ್ಲಿ 150ಕ್ಕೂ ಅಧಿಕ ಮಂದಿ ವ್ಯಾಪಾರ ಮಾಡುತ್ತಾರೆ. ವಾರದ ಸಂತೆಯಲ್ಲಿ ದುಪ್ಪಟ್ಟು ವ್ಯಾಪಾರಿಗಳು ಸಂತೆಗೆ ಬರುತ್ತಾರೆ. ಜನರು ಮತ್ತು ವಾಹನಗಳ ಸಂಚಾರದ ದೂಳಿನಿಂದ ಅನಾರೋಗ್ಯದ ಭೀತಿ ವ್ಯಾಪಾರಿಗಳಿಗೆ ಎದುರಾಗಿದೆ.
ಪುರಸಭೆ ಮುಂಭಾಗದಲ್ಲಿ ನಡೆಯುತ್ತಿದ್ದ ಸಂತೆ ಮೈದಾನ ಮಳೆಗಾಲದಲ್ಲಿ ಕೆಸರು ಗದ್ದೆಯಾಗುತ್ತಿತ್ತು. ಇದನ್ನು ಮನಗಂಡ ಅಧಿಕಾರಿಗಳು ಸುಸಜ್ಜಿತ ಮಾರುಕಟ್ಟೆ ನಿರ್ಮಾಣದ ದೃಷ್ಟಿಯಿಂದ ₹2.61 ಕೋಟಿ ವೆಚ್ಚದಲ್ಲಿ ಖಾಸಗಿ ವ್ಯಕ್ತಿಯೊಬ್ಬರಿಗೆ ಗುತ್ತಿಗೆ ನೀಡಿದ್ದರು. ಆರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕಿದ್ದ ಗುತ್ತಿಗೆದಾರರು ಶೇ 45ರಷ್ಟು ಮಾತ್ರ ಕಾಮಗಾರಿ ನಿರ್ವಹಿಸಿ, ಕೈತೊಳೆದುಕೊಂಡಿದ್ದಾರೆ.
ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಬೇಸತ್ತ ಅಧಿಕಾರಿಗಳು ಗುತ್ತಿಗೆ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಎರಡು ಬಾರಿ ನೋಟಿಸ್ ಕೊಟ್ಟಿದ್ದರೂ ಪ್ರಯೋಜನವಾಗಿಲ್ಲ. ಸಂಬಂಧಪಟ್ಟ ಗುತ್ತಿಗೆದಾರ ಕರಾರು ರದ್ದುಗೊಳಿಸಿ, ಉಳಿಕೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ ವ್ಯಾಪಾರಿಗಳು ಮತ್ತು ಗ್ರಾಹಕರಿಗೆ ಅನುಕೂಲ ಮಾಡಿಕೊಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಸಂತೆ ಮೈದಾನದಲ್ಲಿರುವ ಪ್ರತ್ಯೇಕ ಶೌಚಾಲಯ ಬಳಸಿಕೊಳ್ಳದ ಜನರು ಸಿಮೆಂಟ್ ಪಿಲ್ಲರ್‌ಗಳ ನಡುವೆ ಮೂತ್ರ ವಿಸರ್ಜನೆ ಮಾಡುವುದಕ್ಕೆ ಕಡಿವಾಣ ಹಾಕಬೇಕು. ಕಾಮಗಾರಿ ನಿರ್ವಹಿಸಲು ನಿರ್ಲಕ್ಷ್ಯ ಮಾಡಿರುವ ಗುತ್ತಿಗೆದಾರನ ಕರಾರು ರದ್ದುಗೊಳಿಸಿ, ಮರು ಟೆಂಡರ್ ಕರೆಯುವಂತೆ ಅಧಿಕಾರಿಗಳನ್ನು ಪುರಸಭೆ ಸದಸ್ಯರು ಒತ್ತಾಯಿಸಿದ್ದಾರೆ.
ಯಾರು ಏನಂದರು?
ಸಂತೆ ಮೈದಾನ ನಿರ್ಮಾಣದ ಗುತ್ತಿಗೆ ಪಡೆದಿರುವ ಗುತ್ತಿಗೆದಾರ ಜನಾರ್ದನ್ ಅವರಿಗೆ ಎರಡು ಬಾರಿ ನೋಟಿಸ್ ಕೊಡಲಾಗಿದೆ. ಅವರೊಟ್ಟಿಗೆ ಆಗಿರುವ ಕರಾರು ರದ್ದುಗೊಳಿಸಿ ಕಾನೂನು ಕ್ರಮ ಜರುಗಿಸಲಾಗುವುದು- ಎರಗುಡಿ ಶಿವಕುಮಾರ್ ಪುರಸಭೆ ಮುಖ್ಯಾಧಿಕಾರಿ
ಸಂತೆ ಮೈದಾನ ಸ್ಥಳಾಂತರವಾಗಿ ಒಂದೂವರೆ ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಳಿಸುವಲ್ಲಿ ಸ್ಥಳೀಯ ಆಡಳಿತ ವಿಫಲವಾಗಿದೆ. ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ಜನರು ಮತ್ತು ವ್ಯಾಪಾರಿಗಳಿಗೆ ಆಗುತ್ತಿರುವ ಸಮಸ್ಯೆಯಿಂದ ಮುಕ್ತಿ ಕೊಡಬೇಕು- ಎಚ್.ಎಂ.ಸಂತೋಷ್ ಕಾರ್ಮಿಕ ಮುಖಂಡ ಹರಪನಹಳ್ಳಿ
800ಕ್ಕೂ ಅಧಿಕ ಜನ ಬೀದಿಬದಿ ವ್ಯಾಪಾರಿಗಳಿದ್ದಾರೆ. ನಮಗೆ ಸೂಕ್ತ ವ್ಯವಸ್ಥೆಯಿಲ್ಲದೆ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದೇವೆ. ದಿನಗಳನ್ನು ನೂಕದೇ ನಮಗೆ ಶೀಘ್ರವೇ ಮಾರುಕಟ್ಟೆ ನಿರ್ಮಿಸಿಕೊಡಬೇಕು- ಜಂಗಲಿ ಅಂಜಿನಪ್ಪ ಅಧ್ಯಕ್ಷ ಬೀದಿಬದಿ ವ್ಯಾಪಾರಿಗಳ ಸಂಘ ಹರಪನಹಳ್ಳಿ
ವಾರದ ಸಂತೆ ದಿನ ರಸ್ತೆ ಬಂದ್
ಶನಿವಾರ ವಾರದ ಸಂತೆಯು ಸಹ ಕೋಟೆ ಕಾಳಮ್ಮ ಮೈದಾನದ ಆವರಣದಲ್ಲಿ ನಡೆಯುತ್ತಿದೆ. ಆದರೆ ಬೀದಿ ವ್ಯಾಪಾರಿಗಳು ಜಾಗದ ಕೊರತೆಯಿಂದ ಕರ್ನಾಟಕ ಬ್ಯಾಂಕ್ ಹಿಂಬದಿಯ ಬೈಪಾಸ್ ರಸ್ತೆಯಿಂದ ಎಲ್‌ಐಸಿ ಕಚೇರಿವರೆಗೂ ರಸ್ತೆಯ ಎರಡು ಬದಿ ಟೆಂಟ್‌ಗಳನ್ನು ಹಾಕಿಕೊಂಡು ವ್ಯಾಪಾರ ಮಾಡುತ್ತಾರೆ. ಇದರಿಂದ ರಸ್ತೆ ಸಂಪೂರ್ಣ ಬಂದ್ ಆಗಿರುತ್ತದೆ. ವಾಹನ ಸಂಚಾರಕ್ಕೆ ಅಡಚಣೆ ಆಗುತ್ತಿದೆ. ಸಂತೆಗೆ ಬರುವ ಗ್ರಾಹಕರು ಬೈಕ್ ನಿಲ್ಲಿಸಲು ಪರದಾಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.