ADVERTISEMENT

ಶಾಲೆಗಿಲ್ಲ ಸ್ವಂತ ಕಟ್ಟಡ | ವಸತಿ ನಿಲಯದಲ್ಲೇ ಪಾಠ: ಅಡುಗೆ ಕೋಣೆಯಲ್ಲೇ ವಾಸ್ತವ್ಯ!

ವಿಶ್ವನಾಥ ಡಿ.
Published 19 ಜನವರಿ 2024, 6:40 IST
Last Updated 19 ಜನವರಿ 2024, 6:40 IST
ಹರಪನಹಳ್ಳಿ ಪಟ್ಟಣದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ತರಗತಿಗಳನ್ನು ತಗಡಿನ ಶೆಡ್‌ನಲ್ಲಿ ನಡೆಸುತ್ತಿರುವುದು
ಹರಪನಹಳ್ಳಿ ಪಟ್ಟಣದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ತರಗತಿಗಳನ್ನು ತಗಡಿನ ಶೆಡ್‌ನಲ್ಲಿ ನಡೆಸುತ್ತಿರುವುದು   

ಹರಪನಹಳ್ಳಿ: ಒಂದೇ ಕಟ್ಟಡದಲ್ಲಿ ಬಾಲಕ, ಬಾಲಕಿಯರ ವಾಸ್ತವ್ಯ, ತಗಡಿನ ಶೆಡ್‌ನಲ್ಲಿ ಪಾಠ, ಹೊರಾಂಗಣದಲ್ಲಿ ಲಗೇಜು, ಒಂದೇ ಕೊಠಡಿಯಲ್ಲಿ 25ರಿಂದ 30 ವಿದ್ಯಾರ್ಥಿಗಳು ವಾಸ...

ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಮೀಪದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿ ನಡೆಯುತ್ತಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸ್ಥಿತಿಯಿದು.

ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಸ್ವಂತ ಕಟ್ಟಡವಿಲ್ಲ. 2 ವರ್ಷಗಳಿಂದ ಶೃಂಗಾರತೋಟ ಗ್ರಾಮದ ಸಮೀಪ ಹೊಸ ಕಟ್ಟಡವನ್ನು ನಿರ್ಮಾಣ ಮಾಡಲಾಗುತ್ತಿತ್ತು, ನಿಧಾನಗತಿಯಲ್ಲಿ ಸಾಗಿದ್ದು, ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ.

ADVERTISEMENT

2017-18ನೇ ಶೈಕ್ಷಣಿಕ ಸಾಲಿನಲ್ಲಿ ಆರಂಭವಾಗಿರುವ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಆರಂಭದಲ್ಲಿ ಪಟ್ಟಣದ ಕೆಎಚ್‍ಬಿ ಬಡಾವಣೆಯಲ್ಲಿ ಬಾಡಿಗೆ ಕಟ್ಟಡದಲ್ಲಿ ನಡೆಯುತಿತ್ತು. 2022-23ನೇ ಸಾಲಿನಲ್ಲಿ ವಸತಿ ಇಲಾಖೆಯ ವಸತಿ ನಿಲಯದ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಯಿತು. ಇಲ್ಲಿ 6ರಿಂದ 10ನೇ ತರಗತಿವರೆಗೆ 250 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 8 ಕಾಯಂ ಶಿಕ್ಷಕರು, 3 ಅತಿಥಿ ಶಿಕ್ಷಕರು, 8 ಜನ ಡಿ ದರ್ಜೆಯ ನೌಕರರು ಸೇರಿದಂತೆ 19 ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ.

ವಸತಿ ನಿಲಯ ಎರಡು ಅಂತಸ್ತಿನ ಕಟ್ಟಡವಾಗಿದ್ದು, ನೆಲಮಹಡಿಯಲ್ಲಿರುವ 6 ಕೋಣೆಗಳಲ್ಲಿ ಬಾಲಕರು, ಮೇಲ್ಭಾಗದ ಕೋಣೆಗಳಲ್ಲಿ ಬಾಲಕಿಯರು ಉಳಿದುಕೊಂಡಿದ್ದಾರೆ. ಜಾಗ ಸಾಲದೆ ಅಡುಗೆ ಕೋಣೆ, ಊಟದ ಸಭಾಂಗಣದಲ್ಲೂ ವಿದ್ಯಾರ್ಥಿಗಳು ಮಲಗುತ್ತಾರೆ.

ಶಾಲೆಯ ಸಿಬ್ಬಂದಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕಟ್ಟಡದ ಹಿಂಭಾಗದಲ್ಲಿ ನಿರ್ಮಿಸಿರುವ ತಗಡಿನ ಚಪ್ಪರ, ಮೂರುತಲೆ ಗುಡ್ಡಕ್ಕೆ ಅಡ್ಡಲಾಗಿ ನಿರ್ಮಿಸಿರುವ ತಡೆಗೋಡೆಗೆ ಹೊಂದಿಕೊಂಡು ತಗಡಿನ ಛಾವಣಿಗಳಲ್ಲಿ 8ರಿಂದ 10ನೇ ತರಗತಿಗಳಿವೆ. ವಿದ್ಯಾರ್ಥಿಗಳು ಉಳಿದುಕೊಳ್ಳುವ ಕೊಠಡಿಯಲ್ಲಿಯೇ 6 ಮತ್ತು 7ನೇ ತರಗತಿ ನಡೆಸಲಾಗುತ್ತಿದೆ. ಮಕ್ಕಳ ಲಗೇಜ್‍ ಪೆಟ್ಟಿಗೆಗಳನ್ನು, ಕಚೇರಿಗೆ ಸಂಬಂಧಿಸಿದ  ವಸ್ತುಗಳನ್ನು ಹೊರಾಂಗಣದಲ್ಲಿ ಇರಿಸಲಾಗಿದೆ.

‘ಶೃಂಗಾರತೋಟ ಸಮೀಪದ ಅಲ್ಪಸಂಖ್ಯಾತರ ಇಲಾಖೆಯಡಿ ನಿರ್ಮಿಸುತ್ತಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕಟ್ಟಡ ಶೀಘ್ರ ಪೂರ್ಣಗೊಳಿಸಿ ಕಟ್ಟಡ ಹಸ್ತಾಂತರಿಸಿದರೆ ಮಕ್ಕಳಿಗೆ ಅನುಕೂಲವಾಗುತ್ತದೆ’  ಎನ್ನುತ್ತಾರೆ ವಿದ್ಯಾರ್ಥಿಗಳ ಪೋಷಕರು.

ಹರಪನಹಳ್ಳಿ ಪಟ್ಟಣದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕೊಠಡಿ ಹೊರಗಡೆ ವಿದ್ಯಾರ್ಥಿಗಳು ಲಗೇಜ್ ಇಟ್ಟಿರುವುದು
ವಸತಿ ನಿಲಯದಲ್ಲಿ ಶಾಲೆ ನಡೆಸುತ್ತಿರುವ ಕಾರಣ ವಿದ್ಯಾರ್ಥಿಗಳಿಗೆ ತೊಂದರೆ ಆಗಿರುವುದು ಗಮನಕ್ಕೆ ಬಂದಿದೆ. ಹೊಸ ಕಟ್ಟಡ ಮೂರ್ನಾಲ್ಕು ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು ಸ್ಥಳಾಂತರಕ್ಕೆ ಕ್ರಮವಹಿಸಲಾಗುವುದು
ಗುಡ್ಡಪ್ಪ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ವಿಜಯನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.